Site icon Vistara News

High Court : ಎರವಲು ಸೇವೆ ಎರಡು ವರ್ಷ ಕಡ್ಡಾಯ ಎಂಬ ನಿಯಮವಿಲ್ಲ ಎಂದ ಹೈಕೋರ್ಟ್‌

Transfer deputation high court

ಬೆಂಗಳೂರು: ಒಂದು ಇಲಾಖೆಯಿಂದ ಇನ್ನೊಂದು ಇಲಾಖೆಗೆ ಎರವಲು ಸೇವೆಗೆ (Deputation service) ನಿಯೋಜಿತಗೊಂಡವರಿಗೆ ಆ ಹುದ್ದೆಯಲ್ಲಿ ಎರಡು ವರ್ಷ ಸೇವೆ ಮಾಡುವುದು ಕಡ್ಡಾಯ ಎಂಬ ನಿಯಮವೇನೂ ಇಲ್ಲ ಎಂದು ಕರ್ನಾಟಕ ಹೈಕೋರ್ಟ್‌ (Karnataka High Court) ಅಭಿಪ್ರಾಯಪಟ್ಟಿದೆ. ಎರವಲು ಸೇವೆ ಎನ್ನುವುದು ಅನಿವಾರ್ಯವಾಗಿ ಬಳಸಿಕೊಳ್ಳುವುದು. ಅದನ್ನು ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡು ಮರಳಿ ಮಾತೃ ಇಲಾಖೆಗೆ ಕಳುಹಿಸಬಹುದು ಎಂದು ಕೋರ್ಟ್‌ ಹೇಳಿದೆ.

ಧಾರ್ಮಿಕ ದತ್ತಿ ಇಲಾಖೆಯಲ್ಲಿದ್ದ ಅಧಿಕಾರಿಯೊಬ್ಬರನ್ನು ಕಂದಾಯ ಇಲಾಖೆಗೆ ಎರವಲು ಸೇವೆ ಮೂಲಕ ನಿಯೋಜಿಸಲಾಗಿತ್ತು. ಅವರನ್ನು ಮರಳಿ ಮಾತೃ ಇಲಾಖೆಗೆ (Parent Department) ಕಳುಹಿಸಿದ್ದನ್ನು ಪ್ರಶ್ನಿಸಲಾಗಿತ್ತು. ಆದರೆ, ಕರ್ನಾಟಕ ಆಡಳಿತ ನ್ಯಾಯಮಂಡಳಿ (Karnataka Appelate Tribunal) ಸರ್ಕಾರದ ನಡೆ ಸರಿ ಎಂದಿತ್ತು. ಇದೀಗ ಹೈಕೋರ್ಟ್‌ ಕೂಡಾ ಕೆಎಟಿ ಆದೇಶವನ್ನು ಎತ್ತಿಹಿಡಿದಿದೆ.

ಏನಿದು ಪ್ರಕರಣ?

ಅರ್ಜಿದಾರ ದಿನೇಶ್ ಅವರು ಧಾರ್ಮಿಕ ದತ್ತಿ ಇಲಾಖೆಯ ಮೂಲ ನೌಕರರಾಗಿ ನೇಮಕಗೊಂಡಿದ್ದರು. ಈ ನಡುವೆ ಕಂದಾಯ ಇಲಾಖೆಗೆ ಗ್ರೇಡ್ 1 ತಹಶೀಲ್ದಾರ್‌ ಆಗಿ ಅವರ ಸೇವೆಯನ್ನು ಎರವಲು ಪಡೆದುಕೊಳ್ಳಲಾಗಿದೆ. ಒಂದೂವರೆ ವರ್ಷಗಳ ಕಾಲ ಆನೇಕಲ್​ನಲ್ಲಿ ತಹಸೀಲ್ದಾರ್​ ಆಗಿದ್ದ ಅವರನ್ನು ಬಳಿಕ ಬೆಂಗಳೂರು ದಕ್ಷಿಣ ತಹಸೀಲ್ದಾರ್ ನೇಮಿಸಲಾಗಿತ್ತು. ಅಲ್ಲಿ ಎಂಟು ತಿಂಗಳು ಕೆಲಸ ಮಾಡಿದ ಬಳಿಕ ಮಾತೃ ಇಲಾಖೆಗೆ ವಾಪಸ್​ ಕಳುಹಿಸಲಾಗಿತ್ತು. ಈ ವರ್ಗಾವಣೆ ಆದೇಶವನ್ನು ದಿನೇಶ್‌ ಅವರು ಕರ್ನಾಟಕ ರಾಜ್ಯ ಆಡಳಿತ ಮಂಡಳಿಯಲ್ಲಿ ಪ್ರಶ್ನಿಸಿದ್ದರು. ಕೆಎಟಿ ಅವರ ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ ಮೊರೆ ಹೊಕ್ಕಿದ್ದರು.

karnataka High court

ತನ್ನನ್ನು ಮಾತೃ ಇಲಾಖೆಗೆ ವರ್ಗಾವಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಗ್ರೇಡ್ 1 ತಹಿಶೀಲ್ದಾರ್ ಆಗಿದ್ದ ಪಿ ದಿನೇಶ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್​ ಮತ್ತು ಉಮೇಶ್​ ಎಂ ಅಡಿಗ ಅವರ ನೇತೃತ್ವದ ವಿಭಾಗೀಯ ಪೀಠವು ವಜಾ ಮಾಡಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿ ಲಕ್ಷ್ಮಿನಾರಾಯಣ ವಾದಿಸಿದ್ದರು. ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಂ ಹುಯಿಲಗೋಳ ವಾದಿಸಿದ್ದರು. ಕೆಜಿಎಫ್‌ ತಹಶೀಲ್ದಾರ್‌ ಶ್ರೀನಿವಾಸ್‌ ಎಚ್‌ ಅವರ ಪರವಾಗಿ ಸರ್ಕಾರದ ವಕೀಲೆ ಶಿಲ್ಪಾ ಗೋಗಿ ವಾದ ಮಂಡನೆ ಮಾಡಿದ್ದರು.

ಹೈಕೋರ್ಟ್‌ ಈ ವಿಚಾರದಲ್ಲಿ ಹೇಳಿದ್ದೇನು?

  1. ಅರ್ಜಿದಾರರನ್ನು ಆನೇಕಲ್ ತಹಶೀಲ್ದಾರ್ ಹುದ್ದೆಯಿಂದ ಬೆಂಗಳೂರು ದಕ್ಷಿಣ ತಾಲ್ಲೂಕು ತಹಶೀಲ್ದಾರ್‌ ಹುದ್ದೆಗೆ ಒಂದೂವರೆ ವರ್ಷದಲ್ಲಿ ವರ್ಗಾವಣೆ ಮಾಡಲಾಗಿದೆ. ನಿಯಮಗಳ ವಿರುದ್ಧವಾಗಿ ವರ್ಗಾವಣೆ ಮಾಡಿದ್ದರೂ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿರಲಿಲ್ಲ. ಅದರ ಬದಲಾಗಿ ಮಾತೃ ಇಲಾಖೆಗೆ ವಾಪಸ್ ಕಳುಹಿಸಿ ಹುದ್ದೆ ನೀಡಿದಾಗ ಮಾತ್ರ ಅವರು ನ್ಯಾಯಾಲಯದ ಕದ ತಟ್ಟಿದ್ದಾರೆ. ಮಾತೃ ಇಲಾಖೆಗೆ ವರ್ಗಾವಣೆ ಮಾಡಿರುವುದು ಅವರಿಗೆ ಇಚ್ಛೆಯಿಲ್ಲ. ಜೊತೆಗೆ, ಅವರಿಗೆ ಇಷ್ಟವಿರುವ ಹುದ್ದೆಗೆ ನಿಯೋಜನೆ ಮಾಡಿದಾಗ ಅವರು ನ್ಯಾಯಾಲಯದ ಮೊರೆ ಹೋಗಲು ಮುಂದಾಗಿಲ್ಲ. ಇದೀಗ ಅರ್ಜಿ ಸಲ್ಲಿದ್ದು, ಅರ್ಜಿಯಲ್ಲಿ ಪ್ರಾಮಾಣಿಕತೆ ಇಲ್ಲ.
  2. ಸರ್ಕಾರದ ಯಾವುದೇ ಇಲಾಖೆಯಲ್ಲಿ ಖಾಲಿ ಹುದ್ದೆಗಳು ಇದ್ದ ಸಂದರ್ಭದಲ್ಲಿ ಮತ್ತೊಂದು ಇಲಾಖೆಯಿಂದ ಎರವಲು ಪಡೆದುಕೊಳ್ಳಲಾಗಿರುತ್ತದೆ. ಅರ್ಜಿದಾರರ ಸ್ಥಾನಕ್ಕೆ ಕಂದಾಯ ಇಲಾಖೆಗೆ ಮತ್ತೊಬ್ಬ ಅಧಿಕಾರಿಯನ್ನು ನೇಮಕ ಮಾಡಲಾಗಿದೆ. ಆ ಅಧಿಕಾರಿಯನ್ನು ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ.
  3. ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರಗಳು ಅಧಿಕಾರಗಳನ್ನು ಬದಲಾವಣೆ ಮಾಡುವ ಅಗತ್ಯವಿದೆ. ಇದೇ ಕಾರಣದಿಂದ ಮಾತೃ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ,
  4. ಒಂದೇ ಹುದ್ದೆಯಲ್ಲಿ ಎರಡು ವರ್ಷ ಪೂರ್ಣಗೊಳಿಸಿಲ್ಲ ಎಂಬ ಅರ್ಜಿದಾರರ ವಾದವನ್ನು ಒಪ್ಪಲಾಗದು ಅಧಿಕಾರಿಯಿಂದ ಮತ್ತೊಂದು ಇಲಾಖೆಯಿಂದ ಎರವಲು ಸೇವೆ ಪಡೆದುಕೊಂಡಿದ್ದು, ಎರಡು ಕಡೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ‌ಎರಡೂ ಹುದ್ದೆಗಳನ್ನು ಪರಿಗಣಿಸಿದರೆ ಎರಡು ವರ್ಷ ಪೂರ್ಣಗೊಂಡಿದೆ. ಅಲ್ಲದೆ, ಎರವಲು ಸೇವೆ ಪಡೆದುಕೊಂಡ ಸಂದರ್ಭದಲ್ಲಿ ಎರಡು ವರ್ಷ ಸೇವೆ ಸಲ್ಲಿಸಬೇಕು ಎಂಬ ನಿಯಮ ಕಡ್ಡಾಯವಿಲ್ಲ.
  5. ಹೀಗಾಗಿ ಸರ್ಕಾರದ ಆದೇಶ ಮತ್ತು ಆಡಳಿತ ನ್ಯಾಯಮಂಡಳಿ ನ್ಯಾಯಾಧಿಕರಣ (ಕೆಎಟಿ) ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ.

ಇದನ್ನು ಓದಿ: High Court: ಶಾಲೆ ಸಮಯ ಬದಲಾವಣೆ; ವರದಿ ಸಲ್ಲಿಕೆಗೆ ಇನ್ನೂ 8 ವಾರ ಕಾಲಾವಕಾಶ ನೀಡಿದ ಹೈಕೋರ್ಟ್‌

Exit mobile version