Site icon Vistara News

Chakravarty Sulibele: ಸಿದ್ದರಾಮಯ್ಯ ವಿರುದ್ಧ ಕೋಮುದ್ವೇಷದ ಹೇಳಿಕೆ; ಸೂಲಿಬೆಲೆ ಮೇಲಿನ FIRಗೆ ತಡೆ

Siddaramaiah Chakravarty Sulibele

ಬೆಂಗಳೂರು: “ಯಾವಾಗ ಸಿದ್ದರಾಮಯ್ಯ (CM Siddaramaiah) ಅಧಿಕಾರಕ್ಕೆ ಬರುತ್ತಾರೋ; ಆ ಸಂದರ್ಭದಲ್ಲಿ ಹಿಂದೂಗಳು ಬದುಕುವುದು ಕಷ್ಟ” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಯುವ ಬ್ರಿಗೇಡ್‌ ಸಂಸ್ಥಾಪಕ, ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ (Chakravarty Sulibele) ವಿರುದ್ಧ ದಾಖಲಾದ ಎಫ್‌ಐಆರ್‌ಗೆ ರಾಜ್ಯ ಹೈಕೋರ್ಟ್‌ (Karnataka High court) ತಡೆಯಾಜ್ಞೆ ನೀಡಿದೆ.

ಕಾರವಾರ ತಾಲ್ಲೂಕಿನ ಕಡವಾಡಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನೀಡಿದ ಈ ಹೇಳಿಕೆಯು ಹಿಂದೂ ಹಾಗೂ ಮುಸ್ಲಿಂ ಧರ್ಮದವರ ಮಧ್ಯೆ ಕೋಮು ದ್ವೇಷ ಭಾವನೆ ಉಂಟು ಮಾಡುವ ಪ್ರಯತ್ನವನ್ನು ಹೊಂದಿದೆ ಎಂದು ಕಾರವಾರ ಗ್ರಾಮಾಂತರ ಠಾಣಾ‌ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರು.

ತಮ್ಮ ವಿರುದ್ಧದ ಎಫ್‌ಐಆರ್‌ನ್ನು ರದ್ದುಪಡಿಸುವಂತೆ ಕೋರಿ ಚಕ್ರವರ್ತಿ ಸೂಲಿಬೆಲೆಯವರು ಹಿರಿಯ ವಕೀಲರಾದ ಅರುಣ್‌ ಶ್ಯಾಂ ಅವರ ಮೂಲಕ ಕೋರ್ಟ್‌ಗೆ ಮನವಿ ಮಾಡಿದ್ದರು. ಈ ಕ್ರಿಮಿನಲ್‌ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಎಫ್‌ಐಆರ್‌ಗೆ ತಡೆಯಾಜ್ಞೆ ನೀಡಿದೆ. ನ್ಯಾಯಮೂರ್ತಿ ಶಿವಶಂಕರ ಅಮರಣ್ಣನವರ್‌ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ಈ ತಡೆ ನೀಡಿದೆ.

ಏನಿದು ಪ್ರಕರಣ? ಚಕ್ರವರ್ತಿ ಸೂಲಿಬೆಲೆ ಹೇಳಿದ್ದೇನು?

2023ರ ಅಕ್ಟೋಬರ್‌ 3ರಂದು ಚಕ್ರವರ್ತಿ ಸೂಲಿಬೆಲೆ ಅವರು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡದ ಭೋವಿವಾಡಾದಲ್ಲಿರುವ ಆದಿಮಾಯಿ ದೇವಸ್ಥಾಕ್ಕೆ ಭೇಟಿ ನೀಡಿದ್ದರು. ಈ ವೇಳೆ ಮಾಧ್ಯಮಗಳ ಜತೆ ಮಾತನಾಡಿದ ಅವರು, ‘ಯಾವಾಗ ಸಿದ್ದರಾಮಯ್ಯ ಅವರು ಅಧಿಕಾರಕ್ಕೆ ಬರುತ್ತಾರೋ; ಆ ಸಂದರ್ಭದಲ್ಲಿ ಹಿಂದೂಗಳಿಗೆ ಬದುಕುವುದು ಕಷ್ಟವಾಗಿದೆ. ಮುಸಲ್ಮಾನರಿಗೆ ಸಿದ್ದರಾಮಯ್ಯನವರು ಒಂದು ರೀತಿಯ ಅಭಯ ಹಸ್ತಕೊಟ್ಟು; ನಾನಿದ್ದೀನಿ ನಿಮ್ಮ ಜೊತೆ ಅಂತ ಎಲ್ಲಿಯವರೆಗೆ ಹೇಳುತ್ತಾರೋ ಅಲ್ಲಿಯವರೆಗೆ ಈ ರೀತಿಯ ಕೃತ್ಯಗಳು ನಿರಂತರವಾಗಿ ಇರುತ್ತದೆ’ ಎಂದು ಹೇಳಿಕೆ ನೀಡಿದ್ದರು.

ಈ ಹೇಳಿಕೆಯನ್ನು ಗಮನಿಸಿದ ಕಾರವಾರ ಗ್ರಾಮೀಣ ಠಾಣೆಯ ಗುಪ್ತಚರ ವಿಭಾಗದ ಮುಖ್ಯಪೇದೆ ಉಲ್ಲಾಸ್‌ ತೋಕು ನಾಯ್ಕ ಠಾಣೆಗೆ ದೂರು ನೀಡಿದ್ದರು. ಇದನ್ನು ಆಧರಿಸಿ ಅಕ್ಟೋಬರ್‌ 5ರಂದು ಐಪಿಸಿ ಸೆಕ್ಷನ್‌ 505(2) ಅಡಿಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು.

ಹಿಂದೂ ಮತ್ತು ಮುಸ್ಲಿಂ ಧರ್ಮದವರು ಹಾಗೂ ಸಮಾಜದಲ್ಲಿನ ವಿವಿಧ ವರ್ಗಗಳ ನಡುವೆ ವೈರತ್ವ, ದ್ವೇಷ ಮತ್ತು ವೈಮನಸ್ಸು ಉಂಟು ಮಾಡುವ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಚಕ್ರವರ್ತಿ ಸೂಲಿಬೆಲೆ ಮೇಲೆ ದೋಷಾರೋಪ ಮಾಡಲಾಗಿದೆ. ಕಾರವಾರ ಹಿರಿಯ ಸಿವಿಲ್‌ ಮತ್ತು 2ನೇ ಹೆಚ್ಚುವರಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಇದರ ವಿಚಾರಣೆ ನಡೆಯುತ್ತಿದೆ. ಅದಕ್ಕೆ ಈಗ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ.

ಇದನ್ನೂ ಓದಿ: Chakravarty sulibele : ಇನ್ನು ಮುಂದೆ ಮೋದಿ ಹೆಸರಲ್ಲಿ ಮತ ಕೇಳಲ್ಲ ಎಂದ ಸೂಲಿಬೆಲೆ, ಯಾಕೆ?

ಚಕ್ರವರ್ತಿ ಸೂಲಿಬೆಲೆ ವಾದ ಏನಾಗಿತ್ತು?

ಚಕ್ರವರ್ತಿ ಸೂಲಿಬೆಲೆ ಪರವಾಗಿ ಹಿರಿಯ ವಕೀಲ ಅರುಣ್‌ ಶ್ಯಾಮ್‌ ಅವರು ಕೋರ್ಟ್‌ನಲ್ಲಿ ವಾದ ಮಂಡಿಸಿದ್ದರು.

  1. ಅರ್ಜಿದಾರರು ಸಮಾಜದ ಯಾವುದೇ ವರ್ಗಗಳ ನಡುವೆ ದ್ವೇಷ ಹಾಗೂ ವೈಮನಸ್ಸು ಉಂಟು ಮಾಡುವ ಉದ್ದೇಶದಿಂದ ಈ ಹೇಳಿಕೆ ನೀಡಿಲ್ಲ.
  2. ಸರ್ಕಾರವು ಸಮಾಜದಲ್ಲಿ ಗೊಂದಲಮಯ ವಾತಾವರಣ ಸೃಷ್ಟಿಸುತ್ತಿದೆ ಎಂಬ ಕಾರಣಕ್ಕೆ ತಮ್ಮ ಅತೃಪ್ತಿ ವ್ಯಕ್ತಪಡಿಸಿದ್ದಾರಷ್ಟೇ. ಅದೂ ಸಹ ಸಂವಿಧಾನದ 19ನೇ ವಿಧಿ ಅಡಿಯಲ್ಲಿ ಲಭ್ಯವಿರುವ ಅಭಿವ್ಯಕ್ತ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿಯೇ ಮಾತನಾಡಿದ್ದಾರೆ.
  3. ಮಾಧ್ಯಮಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಸರ್ಕಾರವು ನಡೆದುಕೊಳ್ಳುತ್ತಿರುವ ಧೋರಣೆ ಬಗ್ಗೆ ಅರ್ಜಿದಾರರು ಉತ್ತರ ನೀಡಿರುವುದನ್ನು ಮುಂದಿಟ್ಟುಕೊಂಡು ಪೊಲೀಸರು ದುರುದ್ದೇಶದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದಾರೆ.
  4. ಇದು ರಾಜಕೀಯ ಪ್ರೇರಿತ ಕ್ರಮ. ಸಮಾಜದಲ್ಲಿ ದ್ವೇಷ ಉಂಟು ಮಾಡುವ ಯಾವುದೇ ಉದ್ದೇಶ ಸಹ ಅರ್ಜಿದಾರರಿಗೆ ಇಲ್ಲ. ಆದ್ದರಿಂದ ಎಫ್‌ಐಆರ್‌ಗೆ ತಡೆ ನೀಡಬೇಕು.

Exit mobile version