ಬೆಂಗಳೂರು: ರಾಜ್ಯದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ (Kollur Temple) ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿಗೆ (National Highway) ಭೂ ಸ್ವಾಧೀನ (Land Acquisition) ಪ್ರಕ್ರಿಯೆಗೆ ಅಧಿಸೂಚನೆ ಹೊರಡಿಸಲಾಗಿದೆ. ಇದರ ವಿರುದ್ಧ ಆಕ್ರೋಶ ಎದ್ದು ಅದು ಕೋರ್ಟ್ ಕಟಕಟೆ ಹತ್ತಿದೆ. ಈ ವಿಚಾರದಲ್ಲಿ ಮಧ್ಯ ಪ್ರವೇಶ ಮಾಡಿರುವ ರಾಜ್ಯ ಹೈಕೋರ್ಟ್ (Karnataka High court) ಭೂಸ್ವಾಧೀನ ವಿಚಾರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ (Road and High way department) ನಿರ್ದೇಶನ ನೀಡಿದೆ.
ದೇವಾಲಯ ಸುತ್ತಲಿನ ಭೂಮಿಯನ್ನು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಳ್ಳಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸುವಂತೆ ಕೋರಿ ಗುರು ಪ್ರಸಾದ್ ಎಂಬವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪಿ ಎಸ್ ದಿನೇಶ್ ಕುಮಾರ್ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇಗೌಡ ಅವರ ನೇತೃತ್ವದ ವಿಭಾಗೀಯ ಪೀಠ ಯಥಾಸ್ಥಿತಿ ಕಾಪಾಡಿಕೊಳ್ಳಲು ಸೂಚಿಸಿತು.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿ ಇದರ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚಿಸಿದ ಕೋರ್ಟ್ ವಿಚಾರಣೆಯನ್ನು ಮುಂದಕ್ಕೆ ಹಾಕಿದೆ.
ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ಅವರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕಾಗಿ ದೇವಾಲಯ ಸುತ್ತಲಿನ ಸರ್ವೇ ನಂಬರ್ 12ರಲ್ಲಿ ಭೂಮಿ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಈ ಯೋಜನೆ ಪ್ರಕಾರ ಕಾಮಗಾರಿ ನಡೆದರೆ, ದೇವಾಲಯದ ಗೋಡೆಯ ಮೂರು ಅಡಿ ಪಕ್ಕದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಹೆದ್ದಾರಿಯಲ್ಲಿ ಪ್ರತಿದಿನ ಅಂದಾಜು ಹದಿನೈದು ಸಾವಿರ ವಾಹನಗಳು ಹಾದುಹೋಗಲಿವೆ. ಇದರಿಂದ ಸಾವಿರಾರು ವರ್ಷಗಳ ಹಳೆಯ ದೇಗುಲದ ಕಟ್ಟಡಕ್ಕೆ ಅಪಾಯಕ್ಕೆ ಸಿಲುಕಲಿದೆ ಎಂದು ಪೀಠಕ್ಕೆ ವಿವರಿಸಿದರು. ಈ ವಾದ ಪರಿಗಣಿಸಿದ ಪೀಠವು ಪ್ರಕರಣದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಸೂಚಿಸಿದೆ.
ಇದನ್ನೂ ಓದಿ Karnataka High Court : ರಾಜ್ಯ ಹೈಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ಎನ್.ವಿ ಅಂಜಾರಿಯಾ
ಏನಿದು ಹೆದ್ದಾರಿ ಭೂಸ್ವಾಧೀನ ವಿವಾದ?
- ಉಡುಪಿ ಜಿಲ್ಲೆಯ ಬೈಂದೂರು ತಾಲ್ಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಾಲಯದ ಪಕ್ಕದಲ್ಲೇ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.
- ದೇವಾಲಯ ಸುತ್ತಲಿನ ಸರ್ವೇ ನಂ 12ರಲ್ಲಿನ ಜಮೀನು ಸ್ವಾಧೀನಪಡಿಸಿಕೊಳ್ಳಲು ಸಚಿವಾಲಯವು 2023ರ ಅಕ್ಟೋಬರ್ 10 ರಂದು ಅಧಿಸೂಚನೆ ಹೊರಡಿಸಿತ್ತು.
- ಈ ಅಧಿಸೂಚನೆಗೆ ಆಕ್ಷೇಪಿಸಿ 2023ರ ಅಕ್ಟೋಬರ್ 26ರಂದು ಊರಿನ ಜನರ ವತಿಯಿಂದ ಮನವಿ ಪತ್ರ ಸಲ್ಲಿಸಲಾಗಿತ್ತಾದರೂ ಸಚಿವಾಲಯ ಪರಿಗಣಿಸಿಲ್ಲ ಎಂದು ಹೇಳಲಾಗಿದೆ.
- ಅಧಿಸೂಚನೆ ಪ್ರಕಾರ ದೇವಸ್ಥಾನದ ಸಮೀಪದಲ್ಲೇ ಹೆದ್ದಾರಿ ನಿರ್ಮಾಣವಾಗಲಿದೆ. ಈ ಮಾರ್ಗದಲ್ಲಿ ನಿತ್ಯ 15 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುತ್ತದೆ.
- ಹೆದ್ದಾರಿ ನಿರ್ಮಾಣವಾದರೆ ದೇವಸ್ಥಾನದ ಕಟ್ಟಡಕ್ಕೆ ಅಪಾಯ ಒದಗಲಿದೆ. ಗರ್ಭಗುಡಿ ಕಂಪಿಸಲಿದೆ.
- ದೇವಸ್ಥಾನದ ಧಾರ್ಮಿಕ ರಥೋತ್ಸವ ನೇರವೇರಿಸಲು ಅಡ್ಡಿ ಸೇರಿದಂತೆ ಅನೇಕ ಸಮಸ್ಯೆ ಉಂಟಾಗಲಿವೆ.
ಸಾರ್ವಜನಿಕರ ಬೇಡಿಕೆ ಏನು?
- ದೇವಾಲಯದ ಪಕ್ಕದಲ್ಲೇ ಹೆದ್ದಾರಿ ನಿರ್ಮಾಣ ಮಾಡುವ ಪ್ಲ್ಯಾನ್ ಕೈಬಿಟ್ಟು ಪರ್ಯಾಯ ರಸ್ತೆಯನ್ನು ಕಂಡುಕೊಳ್ಳಬೇಕು.
- ಈಗ ಬಿಡುಗಡೆ ಮಾಡಿರುವ ಸಚಿವಾಲಯದ ಅಧಿಸೂಚನೆ ರದ್ದುಪಡಿಸಬೇಕು.
- ದೇವಾಲಯದ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ನಿರ್ಬಂಧ ಹೇರಬೇಕು.
- ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಪರ್ಯಾರ್ಯ ಮಾರ್ಗ ಕಂಡುಕೊಳ್ಳುವಂತೆ ನಿರ್ದೇಶಿಸಬೇಕು.