ಬೆಂಗಳೂರು: ಸಾಮಾಜಿಕ ಜಾಲತಾಣಗಳ ಬಳಕೆಗೆ (Social Media Usage) ವಯೋಮಿತಿ ನಿಗದಿ (fixing Age limit) ಪಡಿಸುವ ಬಗ್ಗೆ ಕೇಂದ್ರ ಸರಕಾರ (Central Government) ಚಿಂತನೆ ನಡೆಸಬೇಕು ಎಂಬ ಗಂಭೀರ ಅಭಿಪ್ರಾಯವನ್ನು ರಾಜ್ಯ ಹೈಕೋರ್ಟ್ (Karnataka High court) ವ್ಯಕ್ತಪಡಿಸಿದೆ. ಇದು ಸಾಮಾಜಿಕವಾಗಿಯೂ ಭಾರಿ ಚರ್ಚೆಗೆ ಕಾರಣವಾಗಿದ್ದು, ಈ ರೀತಿಯ ನಿರ್ಬಂಧ ಸಾಧ್ಯವೇ ಎಂದು ಪೋಷಕರು ಕೇಳುತ್ತಿದ್ದಾರೆ.
ಹೆಚ್ಚಿನ ಸಂಖ್ಯೆಯ ಮಕ್ಕಳು ಸಾಮಾಜಿಕ ತಾಣಗಳಿಗೆ ಅಡಿಕ್ಟ್ (Addiction to Social Media) ಆಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್‌ನ ಈ ಅಭಿಪ್ರಾಯ ಸಾಕಷ್ಟು ಕುತೂಹಲ ಕೆರಳಿಸಿದೆ. ಮತದಾನಕ್ಕೆ 21 ವರ್ಷ ನಿಗದಿ ಮಾಡಿರುವ ರೀತಿಯಲ್ಲಿಯೇ ಸಾಮಾಜಿಕ ಜಾಲತಾಣ ಬಳಕೆ ಮಾಡಲು ವಯೋಮಿತಿ ನಿಗದಿ ಮಾಡುವ ನಿಟ್ಟಿನಲ್ಲಿ ಚಿಂತನೆ ನಡೆಸಬೇಕು ಎನ್ನುವುದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಕೊಟ್ಟ ಸಲಹೆ.
ಯಾವ ಪ್ರಕರಣದ ವಿಚಾರಣೆ ವೇಳೆ ಈ ಅಭಿಮತ?
ಕೇಂದ್ರ ಸರ್ಕಾರವು 2021ರ ಫೆಬ್ರವರಿ ಮತ್ತು 2022ರ ಅವಧಿಯಲ್ಲಿ ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ ಮಾಡಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ಅರ್ಜಿಯೊಂದರ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆದಿತ್ತು. ಈ ಅರ್ಜಿಯನ್ನು ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ (ಹಿಂದಿನ ಟ್ವಿಟರ್) ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮಂಗಳವಾರ ನ್ಯಾಯಮೂರ್ತಿಗಳಾದ ಜಿ. ನರೇಂದರ್ ಮತ್ತು ವಿಜಯಕುಮಾರ್ ಎ. ಪಾಟೀಲ್ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು.
ವಾದ-ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ, ‘ಸಾಮಾಜಿಕ ಮಾಧ್ಯಮ ನಿಷೇಧಿಸುವುದು ಉತ್ತಮ. ಇದರಿಂದ ಸಾಕಷ್ಟು ಒಳ್ಳೆಯದಾಗುತ್ತದೆ. ಈಗ ಶಾಲೆಗೆ ಹೋಗುವ ಮಕ್ಕಳೂ ಅದಕ್ಕೆ ದಾಸರಾಗಿದ್ದಾರೆ. ಕನಿಷ್ಠ ಪಕ್ಷ ಕೇಂದ್ರ ಸರ್ಕಾರ ಸಾಮಾಜಿಕ ಮಾಧ್ಯಮ ಬಳಕೆಗೆ ವಯೋಮಿತಿ ನಿಗದಿಪಡಿಸಬೇಕು’ ಎಂದು ಮೌಖಿಕವಾಗಿ ಹೇಳಿತು.
17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ?. ಬಳಕೆದಾರರಿಗೆ ಕನಿಷ್ಠ 21 ವರ್ಷ ವಯಸ್ಸಾಗಿರಬೇಕು. ಏಕೆಂದರೆ ಆ ವಯಸ್ಸಿನವರಿಗೆ ಮತದಾನದ ಹಕ್ಕು ನೀಡಲಾಗಿದೆ’ ಎಂದು ಪೀಠವು ಮೌಖಿಕವಾಗಿ ಹೇಳಿತು. ಇದೇ ವೇಳೆ ಪೀಠವು ಮಧ್ಯಂತರ ಅರ್ಜಿಗೆ ಸಂಬಂಧಿಸಿದ ಆದೇಶವನ್ನು ಬುಧವಾರ ಪ್ರಕಟಿಸುವುದಾಗಿ ಹೇಳಿ, ವಿಚಾರಣೆ ಮುಂದೂಡಿತು.
ಇದನ್ನೂ ಓದಿ: World Social Media Day : ಸಾಮಾಜಿಕ ಜಾಲತಾಣಗಳು ಮಕ್ಕಳಿಗೆ ಹೇಗೆ ಅಪಾಯಕಾರಿ?
ಸಾಮಾಜಿಕ ಜಾಲತಾಣಕ್ಕೂ ಆಧಾರ್ ದೃಢೀಕರಣ ಬರಲಿ ಎಂದ ಹೈಕೋರ್ಟ್
ಕೇಂದ್ರ ಸರ್ಕಾರ ಪ್ರತಿನಿಧಿಸಿದ್ದ ವಕೀಲರು ‘ಕೆಲವು ಆನ್‌ಲೈನ್ ಗೇಮ್ ಆಡಲು ಕಾನೂನಿನ ಪ್ರಕಾರ ಈಗ ಆಧಾರ್ ಮತ್ತು ಇತರೆ ದಾಖಲೆಗಳನ್ನು ಸಲ್ಲಿಸಬೇಕು’ ಎಂದರು. ಆಗ ಪೀಠವು ‘ಹಾಗಾದರೆ ಆ ಕ್ರಮಗಳನ್ನು ಸಾಮಾಜಿಕ ಮಾಧ್ಯಮ ಬಳಕೆ ಮಾಡುವವರಿಗೆ ಏಕೆ ವಿಸ್ತರಿಸಿಲ್ಲ. ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ’ ಎಂದಿತು.
ಎಕ್ಸ್ ಕಾರ್ಪ್ ಬಳಕೆದಾರರಿಗೆ ಯಾವುದೇ ಮಾಹಿತಿ ನೀಡದೇ ಖಾತೆ ನಿರ್ಬಂಧಿಸಿರುವುದು ಸರಿಯೇ? ಎಂದು ಕೇಳಿದ ನ್ಯಾಯಪೀಠ, ವಿಚಾರ ಸಾರ್ವಜನಿಕವಾಗಿದ್ದರೆ ಅದು ಜನರಿಗೆ ತಿಳಿಯುತ್ತದೆ. ಇದನ್ನು ಯಾರಾದರೂ ಪ್ರಶ್ನಿಸಿ, ಮಾನಹಾನಿ ದಾವೆ ಹೂಡಿದರೆ ಎಕ್ಸ್ ಕಾರ್ಪ್‌ಗೆ ಪರಿಹಾರವೇನು? ಇದಕ್ಕಾಗಿ ನಿಯಮದಲ್ಲಿ ನೀವು ಸಡಿಲಿಕೆ ಮಾಡಬೇಕಿದೆ. ಎಕ್ಸ್ ಕಾರ್ಪ್‌ಗೆ ವಿನಾಯಿತಿ ನೀಡಬೇಕು. ನಿಮ್ಮ ಎಚ್ಚರಿಕೆಗೆ ಅನುಗುಣವಾಗಿ ಖಾತೆ ನಿರ್ಬಂಧವನ್ನು ಎಕ್ಸ್ ಕಾರ್ಪ್ ಮಾಡುತ್ತಿದೆ. ನೀವು (ಕೇಂದ್ರ ಸರ್ಕಾರ) ಅವರ ಕೈಬಿಟ್ಟರೆ ಹೇಗೆ ಎಂದು ಕೇಳಿತು.