ಬೆಂಗಳೂರು: ಒಂದು ವೇಳೆ ಹೆಂಡತಿ ಇನ್ನೊಬ್ಬನ ಜತೆ ಅಕ್ರಮ ಸಂಬಂಧ (Illicit Relationship) ಹೊಂದಿರುವುದು ನಿಜವಾಗಿದ್ದರೆ ಆಕೆಗೆ ಗಂಡ ಜೀವನಾಂಶ ಕೊಡಬೇಕಾಗಿಲ್ಲ ಎಂದು ರಾಜ್ಯ ಹೈಕೋರ್ಟ್ ಹೇಳಿದೆ. ಪರಿತ್ಯಕ್ತ ಗಂಡ ತನಗೆ ಜೀವನಾಂಶ ಕೊಡಬೇಕು ಎಂಬ ಮಹಿಳೆಯ ವಾದವನ್ನು (ಕೋರ್ಟ್ ತಿರಸ್ಕರಿಸಿದೆ.
ಈ ಪ್ರಕರಣ ಏನೆಂದರೆ, ಅವರಿಬ್ಬರು ಮದುವೆಯಾಗಿ ಕೆಲವು ಕಾಲ ಜತೆಯಾಗಿದ್ದರು. ಬಳಿಕ ಬೇರೆಯಾಗಿದ್ದರು. ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆಯಡಿ ತನಗೆ ವಸತಿ ಹಾಗೂ ಹಣಕಾಸಿನ ನೆರವು ನೀಡಬೇಕು ಎಂದು ಕೋರಿ ಕೌಟುಂಬಿಕ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ಒಪ್ಪಿದ್ದ ಮ್ಯಾಜಿಸ್ಟ್ರೇಟ್ ₹1,500 ನಿರ್ವಹಣಾ ವೆಚ್ಚ, ₹1,000 ವಸತಿ ಬಾಡಿಗೆ ಮತ್ತು ₹5,000 ಪರಿಹಾರಕ್ಕೆ ಆದೇಶಿಸಿದ್ದರು.
ಆದರೆ, ಗಂಡ ಇದನ್ನು ಒಪ್ಪಿರಲಿಲ್ಲ. ತನ್ನ ಪತ್ನಿ ಅಕ್ರಮ ಸಂಬಂಧ ಹೊಂದಿದ್ದಾಳೆ. ಹಾಗಾಗಿ ಆಕೆ ಪರಿಹಾರಕ್ಕೆ ಅರ್ಹಳಲ್ಲ ಎನ್ನುವುದು ಅವನ ವಾದವಾಗಿತ್ತು. ಆಗ ಅವಳು ಕೂಡಾ ನನ್ನ ಗಂಡನಿಗೂ ಅಕ್ರಮ ಸಂಬಂಧವಿತ್ತು ಎಂದು ವಾದಿಸಿದ್ದಳು. ಆದರೆ, ಕೋರ್ಟ್ ಆಕೆಯ ವಾದವನ್ನು ಒಪ್ಪಲಿಲ್ಲ. ಆಕೆಗೆ ಅಕ್ರಮ ಸಂಬಂಧ ಇರುವುದು ಸಾಕ್ಷಿ ಮೂಲಕ ಋಜುವಾತಾಗಿದ್ದರಿಂದ ಆಕೆ ಪರಿಹಾರಕ್ಕೆ ಅರ್ಹಳಲ್ಲ ಎಂಬ ತೀರ್ಪನ್ನು ನೀಡಿದೆ.
ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆ ಸೆಕ್ಷನ್ 12ರ ಅಡಿ ಮಹಿಳೆ ಸಲ್ಲಿಸಿದ್ದ ಆದೇಶ ಮರುಪರಿಶೀಲನಾ ಅರ್ಜಿಯನ್ನು ನ್ಯಾಯಮೂರ್ತಿ ರಾಜೇಂದ್ರ ಬದಾಮಿಕರ್ ಅವರ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿದೆ.
ಯಾಕೆ ಪರಿಹಾರ ಕೊಡಲಾಗಿಲ್ಲ ಎಂದರೆ..
- ಲಭ್ಯವಿರುವ ಸಾಕ್ಷಿಗಳ ಪ್ರಕಾರ ಅರ್ಜಿದಾರ ಪತ್ನಿಯು ತನ್ನ ಪತಿಗೆ ಪ್ರಾಮಾಣಿಕವಾಗಿರಲಿಲ್ಲ.
- ಮತ್ತೊಬ್ಬ ವ್ಯಕ್ತಿಯ ಜೊತೆ ಆಕೆ ಅಕ್ರಮ ಸಂಬಂಧ ಹೊಂದಿದ್ದು, ಆತನ ಜೊತೆ ನೆಲೆಸಿದ್ದಳು.
- ಮತ್ತೊಬ್ಬರ ಜೊತೆ ಅಕ್ರಮ ಸಂಬಂಧ ಹೊಂದಿದ್ದು, ಅವರ ಜೊತೆ ನೆಲೆಸಿರುವಾಗ ಆಕೆ ಜೀವನಾಂಶ ಕೋರುವ ಸಂದರ್ಭ ನಿರ್ಮಾಣವಾಗದು.
- ತಾನು ಕಾನೂನಾತ್ಮಕವಾಗಿ ಪತಿಯನ್ನು ವಿವಾಹವಾಗಿದ್ದೇನೆ ಎಂಬ ವಾದವನ್ನು ಒಪ್ಪಲಾಗದು. ಏಕೆಂದರೆ ಆಕೆ ಪ್ರಾಮಾಣಿಕವಾಗಿರಲಿಲ್ಲ ಮತ್ತು ವ್ಯಭಿಚಾರದ ಜೀವನ ನಡೆಸುತ್ತಿದ್ದಳು.
- ಪತಿಯೂ ಸಂಬಂಧಿಯ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಪತ್ನಿ ಹೇಳಿದ್ದಾರೆ. ಪತ್ನಿ ಜೀವನಾಂಶ ಕೋರುತ್ತಿರುವುದರಿಂದ ಆಕೆ ತಾನು ಪ್ರಾಮಾಣಿಕಳು ಎಂಬುದನ್ನು ಸಾಬೀತುಪಡಿಸಬೇಕು.
- ಆಕೆ ಪ್ರಾಮಾಣಿಕಳಲ್ಲ ಎಂದ ಮೇಲೆ ಆಕೆಯು ತನ್ನ ಪತಿಯತ್ತ ಬೆರಳು ಮಾಡಲಾಗದು.
ವ್ಯಭಿಚಾರ ಕ್ರೌರ್ಯ ಎಂಬ ಆಧಾರದಲ್ಲೇ ಮದುವೆ ರದ್ದಾಗಿತ್ತು
ನಿಜವೆಂದರೆ ಈ ಇಬ್ಬರ ನಡುವಿನ ಸಂಬಂಧ ಹಾಳಾಗಲು ಮತ್ತು ಕೋರ್ಟ್ ಅವರ ಸಂಬಂಧ ಮುರಿದುಕೊಳ್ಳುವ ಪ್ರಸ್ತಾಪಕ್ಕೆ ಒಪ್ಪಿಕೊಳ್ಳಲು ವ್ಯಭಿಚಾರವೇ ಕಾರಣವಾಗಿತ್ತು. ತನ್ನ ಪತ್ನಿಯು ಬೇರೊಬ್ಬನ ಜತೆ ಸಂಬಂಧ ಹೊಂದಿರುವುದನ್ನು ಗಂಡ ಸಾಕ್ಷಿ ಮೂಲಕ ಋಜುವಾತು ಮಾಡಿದ್ದರು. ವ್ಯಭಿಚಾರವೂ ಕ್ರೌರ್ಯ ಎಂದು ಹೇಳಿ ಕೌಟುಂಬಿಕ ನ್ಯಾಯಾಲಯವು ಮದುವೆಯನ್ನು ರದ್ದುಪಡಿಸಿತ್ತು ಎಂದು ಪತಿಯ ಪರ ವಕೀಲರು ವಾದಿಸಿದ್ದರು.
ಇದನ್ನೂ ಓದಿ: Allahabad High Court: ‘ಸಪ್ತಪದಿ’ ತುಳಿಯದ ಮದ್ವೆ ಮದುವೆಯೇ ಅಲ್ಲ! ಅಲಹಾಬಾದ್ ಹೈಕೋರ್ಟ್
ಆದರೆ, ಅವನು ನನ್ನನ್ನು ಕಾನೂನು ಪ್ರಕಾರ ಮದುವೆಯಾಗಿದ್ದಾನೆ. ಹೀಗಾಗಿ ಬಿಡುಗಡೆಯ ಸಂದರ್ಭದಲ್ಲಿ ಜೀವನಾಂಶ ನೀಡಬೇಕು ಎನ್ನುವುದು ಮಹಿಳೆಯ ವಾದವಾಗಿತ್ತು. ಅದರ ಜತೆಗೆ ತಾನು ಅಕ್ರಮ ಸಂಬಂಧ ಹೊಂದಿರುವುದು ವ್ಯಭಿಚಾರ ಎಂದಾದರೆ ಆತ ಹೊಂದಿರುವ ಅಕ್ರಮ ಸಂಬಂಧವೂ ವ್ಯಭಿಚಾರವೇ ಎಂದು ಹೇಳಿದ್ದಳು. ಆದರೆ ಕೋರ್ಟ್ ಆಕೆಯ ವಾದವನ್ನು ಒಪ್ಪಲಿಲ್ಲ. ವ್ಯಭಿಚಾರದ ನೆಲೆಯಲ್ಲಿ ಪರಸ್ಪರ ಬೇರ್ಪಡಲು ಅವಕಾಶ ನೀಡಲಾಗಿದೆ. ಈಗ ಕೇಳುತ್ತಿರುವುದು ಮಾಸಾಶನ ಮತ್ತು ಪರಿಹಾರವಾಗಿರುವುದರಿಂದ ಅದರ ಬಗ್ಗೆ ಚರ್ಚೆ ಅನಗತ್ಯ ಎಂದಿತ್ತು.