Site icon Vistara News

Jayalalitha Case : ಜಯಲಲಿತಾ ಕೈಲಿದ್ದ 7 ಕೆಜಿ ಚಿನ್ನ, 11,344 ರೇಷ್ಮೆ ಸೀರೆ, 740 ಚಪ್ಪಲಿಗಳನ್ನು ಏನ್ಮಾಡ್ತಾರೆ?

Jayalalitha Case

ಬೆಂಗಳೂರು: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ (Former CM Jayalalitha) ಅವರಿಂದ 7 ಕೆಜಿ ಚಿನ್ನ, 11344 ರೇಷ್ಮೆ ಸೀರೆ ಸೇರಿದಂತೆ ಕೋಟ್ಯಂತರ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು (Materials Siezed from Jayalalitha) ವಶಪಡಿಸಿಕೊಳ್ಳಲಾಗಿತ್ತು. ಅವುಗಳನ್ನು ಈಗ ಏನು ಮಾಡುವುದು ಎಂಬ ಪ್ರಶ್ನೆ (Jayalalita Case) ಉದ್ಭವವಾಗಿದೆ. ಅದಕ್ಕೆ ಬೆಂಗಳೂರಿನ ಸಿಬಿಐ ವಿಶೇಷ ನ್ಯಾಯಾಲಯ (CBI Special Court) ಒಂದು ಸೂಚನೆಯನ್ನು ಕೊಟ್ಟಿದೆ.

ಜೆ ಜಯಲಲಿತಾ ಅವರ ವಿರುದ್ಧ ಗೊತ್ತಾದ ಆದಾಯ ಮೂಲಕ್ಕಿಂತ ಅಧಿಕ ಸಂಪತ್ತು (Dispropotionate asset Case) ಸಂಗ್ರಹಿಸಿದ ಗುರುತರ ಆರೋಪವಿತ್ತು. ಈ ಪ್ರಕರಣದಲ್ಲಿ ಅವರನ್ನು ಬಂಧಿಸಿ, ಜೈಲಿಗೆ ಹಾಕಿ, ಶಿಕ್ಷೆ ವಿಧಿಸಿದ್ದೂ ಆಗಿದೆ. ಈಗ ಅವರು ಇಲ್ಲ. ಹಾಗಿದ್ದರೆ ಅವರ ಕೈಯಿಂದ ವಶಪಡಿಸಿಕೊಂಡ ವಸ್ತುಗಳನ್ನು ಮುಂದೇನು ಮಾಡುವುದು ಎಂಬ ಪ್ರಶ್ನೆಗೆ ಈಗ ಕೋರ್ಟ್‌ ಉತ್ತರ ನೋಡಿದೆ.

ಹಾಗಿದ್ದರೆ ಜಯಲಲಿತಾ ಬಳಿ ಏನೆಲ್ಲ ಜಪ್ತಿ ಮಾಡಲಾಗಿತ್ತು?

7,040 ಗ್ರಾಂ ತೂಕದ 468 ಬಗೆಯ ಚಿನ್ನ ಹಾಗೂ ವಜ್ರಖಚಿತ ಆಭರಣಗಳು, 700 ಕೆ ಜಿ ತೂಕದ ಬೆಳ್ಳಿ ಆಭರಣಗಳು, 740 ದುಬಾರಿ ಚಪ್ಪಲಿಗಳು, 11,344 ರೇಷ್ಮೆ ಸೀರೆಗಳು, 250 ಶಾಲು, 12 ರೆಫ್ರಿಜೆರೇಟರ್, 10 ಟಿ ವಿ ಸೆಟ್ , 8 ವಿಸಿಆರ್, 1 ವಿಡಿಯೊ ಕ್ಯಾಮೆರಾ, 4 ಸಿಡಿ ಪ್ಲೇಯರ್, 2 ಆಡಿಯೋ ಡೆಕ್, 24 ಟೂ-ಇನ್ ಒನ್ ಟೇಪ್‌ ರೇಕಾರ್ಡರ್, 1,040 ವಿಡಿಯೋ ಕ್ಯಾಸೆಟ್, 3 ಐರನ್ ಲಾಕರ್, 1,93,202 ರೂಪಾಯಿ ನಗದು ಸೇರಿದಂತೆ ಹಲವು ವಸ್ತುಗಳು ಜಯಲಲಿತಾ ಅವರಿಂದ ಜಪ್ತಿ ಮಾಡಲಾಗಿತ್ತು.

ಹರಾಜು ಬೇಡ, ಸರ್ಕಾರಕ್ಕೆ ಕೊಡಿ ಎಂದ ಕೋರ್ಟ್‌

ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ವಿಶೇಷ ನ್ಯಾಯಾಲಯವು ಜಯಲಲಿತಾಗೆ ನಾಲ್ಕು ವರ್ಷ ಜೈಲು ಮತ್ತು 100 ಕೋಟಿ ರೂಪಾಯಿ ದಂಡ ವಿಧಿಸಿ 2014ರ ಸೆಪ್ಟೆಂಬರ್‌ 27ರಂದು ಆದೇಶಿಸಿತ್ತು. ಜೊತೆಗೆ ಜಪ್ತಿ ಮಾಡಲಾದ ಜಯಲಲಿತಾ ಅವರ ಬೆಲೆಬಾಳುವ ವಸ್ತುಗಳನ್ನು ಆರ್‌ಬಿಐ, ಎಸ್‌ಬಿಐಗೆ ಅಥವಾ ಸಾರ್ವಜನಿಕ ಹರಾಜು ಮೂಲಕ ಮಾರಾಟ ಮಾಡಬೇಕು. ಅದರಿಂದ ಬಂದ ಹಣವನ್ನು ದಂಡ ಮೊತ್ತಕ್ಕೆ ಹೊಂದಾಣಿಕೆ ಮಾಡಬೇಕು ಎಂದು ನಿರ್ದೇಶಿಸಿತ್ತು.

ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಅವರು ಜಯಲಲಿತಾ ಅವರ ವಸ್ತುಗಳ ವಿಲೇವಾರಿಗೆ ಕೈಗೊಂಡಿರುವ ಕ್ರಮದ ಮಾಹಿತಿ ನೀಡುವ ಸಂಬಂಧ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು.

ಆರ್‌ಟಿಐ ಕಾರ್ಯಕರ್ತ ಟಿ ನರಸಿಂಹ ಮೂರ್ತಿ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಚ್‌ ಎ ಮೋಹನ್‌ ಅವರು ಜಯಲಲಿತಾ ಅವರ ಒಡವೆಗಳನ್ನು ತಮಿಳುನಾಡು ಸರ್ಕಾರಕ್ಕೆ ಹಸ್ತಾಂತರಿಸಬೇಕು ಎಂದು ಕರ್ನಾಟಕದ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಪೊಲೀಸ್‌ ಇಲಾಖೆಗೆ ಆದೇಶಿಸಿದ್ದಾರೆ. ವಸ್ತುಗಳನ್ನು ಪರಿಶೀಲಿಸಿ ಪಡೆಯಲು ಕಾರ್ಯದರ್ಶಿ ಮಟ್ಟದಲ್ಲಿ ಸೂಕ್ತ ವ್ಯಕ್ತಿಗಳನ್ನು ನಿಯೋಜಿಸುವಂತೆ ತಮಿಳುನಾಡು ಸರ್ಕಾರದ ಗೃಹ ಇಲಾಖೆಗೆ ನ್ಯಾಯಾಲಯ ನಿರ್ದೇಶಿಸಿದೆ.

ಇದನ್ನೂ ಓದಿ : Ram Mandir : ತಮಿಳುನಾಡು ಸ್ಟಾಲಿನ ಸರ್ಕಾರ ಹಿಂದೂ ವಿರೋಧಿ ನಡೆಗೆ ಮದ್ರಾಸ್ ಹೈಕೋರ್ಟ್​ ಚಾಟಿ

ಜಯಲಲಿತಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ವಿಚಾರಣೆಗಾಗಿ ವೆಚ್ಚವಾಗಿರುವ ಐದು ಕೋಟಿ ಹಣವನ್ನು ಡಿಡಿ ರೂಪದಲ್ಲಿ ಕರ್ನಾಟಕ ಸರ್ಕಾರಕ್ಕೆ ಪಾವತಿಸುವಂತೆ ತಮಿಳುನಾಡು ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ.

ರಾಜ್ಯ ಸರ್ಕಾರಿ ವಿಶೇಷ ಅಭಿಯೋಜಕರಾಗಿರುವ ಕಿರಣ್ ಎಸ್. ಜವಳಿ ಅವರು ಜಪ್ತಿಯಾದ ಜಯಲಲಿತಾ ಅವರ ಆಸ್ತಿ-ವಸ್ತುಗಳ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಅದನ್ನು ಪರಿಗಣಿಸಿದ ನ್ಯಾಯಾಲಯ ಈ ಆದೇಶ ಮಾಡಿದೆ. ಜಪ್ತಿ ಮಾಡಲಾದ ಕೋಟ್ಯಂತರ ರೂಪಾಯಿ ಬೆಲೆಬಾಳುವ ವಸ್ತುಗಳನ್ನು ಹರಾಜು ಹಾಕುವ ಬದಲು ತಮಿಳುನಾಡು ಸರ್ಕಾರದ ಸುಪರ್ದಿಗೆ ನೀಡಿ ಎನ್ನುವುದು ಕೋರ್ಟ್‌ ಸೂಚನೆ.

Exit mobile version