Site icon Vistara News

JOB NEWS : ಆರು ತಿಂಗಳಲ್ಲಿ ಸರ್ಕಾರಿ ಇಲಾಖೆಗಳ ಎಲ್ಲಾ ಬ್ಯಾಕ್‌ ಲಾಗ್‌ ಹುದ್ದೆ ಭರ್ತಿಗೆ ಹೈಕೋರ್ಟ್‌ ಆದೇಶ

Back log jobs

ಬೆಂಗಳೂರು: ರಾಜ್ಯದ ಎಲ್ಲಾ ಇಲಾಖೆಗಳು (Departments of Governments) ಮತ್ತು ಸಂಸ್ಥೆಗಳಲ್ಲಿ (Government Institutions) ಖಾಲಿ ಇರುವ ಬ್ಯಾಕ್‌ಲಾಗ್‌ ಹುದ್ದೆಗಳನ್ನು (Backlog Post) ಆರು ತಿಂಗಳ ಒಳಗೆ ಭರ್ತಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ (Karnataka High court) ರಾಜ್ಯ ಸರ್ಕಾರಕ್ಕೆ (Karnataka government) ಆದೇಶ ನೀಡಿದೆ.

ಎಲ್ಲ ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್‌ಲಾಕ್ ಹುದ್ದೆಗಳ ನೇಮಕಾತಿಗೆ (JOB NEWS) ಅಧಿಸೂಚನೆ ಹೊರಡಿಸುವುದೂ ಸೇರಿದಂತೆ ಎಲ್ಲ ಪ್ರಕ್ರಿಯೆಗಳನ್ನು ಕ್ಷಿಪ್ರಗತಿಯಲ್ಲಿ ನಡೆಸಿ ಆರು ತಿಂಗಳಲ್ಲಿ ಪೂರ್ಣಗೊಳಿಸಬೇಕು ಎಂದು ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ನ್ಯಾಯಪೀಠ ಸೂಚನೆ ನೀಡಿದೆ. ಬೆಂಗಳೂರಿನ ಪಟ್ಟಂದೂರು ಅಗ್ರಹಾರದ ನಿವಾಸಿ ಎಂ. ಮಂಜುನಾಥ್ ಪ್ರಸಾದ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ವೇಳೆ ಈ ಸೂಚನೆ ನೀಡಲಾಗಿದೆ.

ಯಾವ ಪ್ರಕರಣದಲ್ಲಿ ಅರ್ಜಿ ಸಲ್ಲಿಕೆ?

ಬೆಂಗಳೂರಿನ ವೈದ್ಯಕೀಯ ಮಹಾ ವಿದ್ಯಾಲಯದಲ್ಲಿರುವ ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿ ಮಾಡುವಂತೆ ಕೋರಿ ಅರ್ಜಿದಾರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ಏಕ ಸದಸ್ಯ ಪೀಠ, ಸಂಬಂಧಪಟ್ಟ ಪ್ರಾಧಿಕಾರಗಳಿಗೆ ಸೂಕ್ತ ಮನವಿ ಸಲ್ಲಿಸುವಂತೆ ಸೂಚನೆ ನೀಡಿ ಅರ್ಜಿಯನ್ನು ಇತ್ಯರ್ಥ ಪಡಿಸಿತ್ತು. ಆದರೆ, ಅರ್ಜಿದಾರರ ಮನವಿಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿರಲಿಲ್ಲ. ಇದನ್ನು ಪ್ರಶ್ನಿಸಿ ಅರ್ಜಿದಾರರು ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರ ಪರ ಮತ್ತು ಸರ್ಕಾರದ ವಾದ ಏನಾಗಿತ್ತು?

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಬ್ಯಾಕ್ ಲಾಗ್ ಹುದ್ದೆಗಳ ಮೀಸಲಾತಿ ನೇಮಕಾತಿಗಳಾಗಿವೆ. ಈ ಹುದ್ದೆಗಳನ್ನ ಭರ್ತಿ ಮಾಡದೆ ಖಾಲಿ ಉಳಿಸಿದಲ್ಲಿ ದೀನದಲಿತರ ಅಭಿವೃದ್ಧಿಯ ವಿಚಾರದಲ್ಲಿ ರಾಜ್ಯ ಸರ್ಕಾರದ ಉದ್ದೇಶವೇ ವಿಫಲವಾದಂತಾಗಲಿದೆ ಎಂದು ಹೇಳಿದ್ದರು. ಅಲ್ಲದೆ, ಸಂವಿಧಾನದ ಪರಿಚ್ಛೇದ 14 ಮತ್ತು 16 ಗಳ ಉಲ್ಲಂಘನೆಯಾಗಲಿದೆ ಎಂದು ವಾದ ಮಂಡಿಸಿದ್ದರು.

ಇದನ್ನು ಆಕ್ಷೇಪಿಸಿದ ಸರ್ಕಾರದ ಪರ ವಕೀಲರು ಏಕ ಸದಸ್ಯ ಪೀಠ ನೀಡಿರುವ ಆದೇಶ ಸಮಂಜಸವಾಗಿದ್ದು, ಮೇಲ್ಮನವಿ ಅರ್ಜಿ ವಜಾಗೊಳಿಸಬೇಕು ಎಂದು ಕೋರಿದ್ದರು. ಆದರೆ, ಹೈಕೋರ್ಟ್‌ ಮೇಲ್ಮನವಿಯನ್ನು ಎತ್ತಿಹಿಡಿದಿದೆ.

ಬ್ಯಾಕ್‌ಲಾಗ್‌ ಹುದ್ದೆಗಳ ಬಗ್ಗೆ ಹೈಕೋರ್ಟ್‌ ಅಭಿಮತ ಏನು?

  1. ದಲಿತ ಸಮುದಾಯಗಳಿಗೆ ಮೀಸಲಾಗಿರುವ ಹುದ್ದೆಗಳನ್ನು ಭರ್ತಿ ಮಾಡದೆ ಉಳಿಸಿಕೊಳ್ಳುವುದು ಸಂವಿಧಾನ ಈ ಸಮುದಾಯಗಳಿಗೆ ನೀಡಿದ ಸೌಲಭ್ಯಗಳನ್ನು ನಿರಾಕರಿಸಿದಂತೆ. ಜೊತೆಗೆ, ಸರ್ಕಾರಿ ಉದ್ಯೋಗಗಳಲ್ಲಿ ಅವರ ಪ್ರಾತಿನಿಧ್ಯ ಕಸಿದು ಕೊಂಡಂತೆ ಆಗುತ್ತದೆ.
  2. ರಾಜ್ಯ ಸರ್ಕಾರ ರಚನೆ ಮಾಡಿದ್ದ ಸಂಪುಟ ಉಪ ಸಮಿತಿಯು ಬ್ಯಾಕ್‌ಲಾಗ್ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ನೀಡಿದ್ದ ಆದೇಶದಂತೆ ಎಲ್ಲ ಇಲಾಖೆಗಳಿಗೆ ಪತ್ರ ಬರೆದು ಹುದ್ದೆಗಳ ಭರ್ತಿಗೆ ನಿರ್ದೇಶನ ನೀಡಿತ್ತು ಎಂದು ನೆನಪಿಸಿದೆ.
  3. ಖಾಲಿ ಹುದ್ದೆಗಳನ್ನು ಮುಂದುವರಿಸುವ ಸಂಬಂಧ ಅಂಕಿ ಅಂಶಗಳನ್ನು ನೋಡಿದ ಬಳಿಕವೂ ಅರ್ಜಿ ವಜಾಗೊಳಿಸುವಂತೆ ಸರ್ಕಾರದ ಪರ ವಕೀಲರ ವಾದ ಮಂಡಿಸಿರುವುದು ವಿಚಿತ್ರವಾಗಿದೆ.
  4. ನೊಂದ ಸಾರ್ವಜನಿಕ ವ್ಯಕ್ತಿಯೊಬ್ಬರು ನ್ಯಾಯಲಯದಲ್ಲಿ ಕಾನೂನು ಹೋರಾಟ ನಡೆಸಿ ಗೆಲವು ಸಾಧಿಸಿದಲ್ಲಿ ಸರ್ಕಾರ ಸಂತೋಷ ಪಡಬೇಕು. ಅದು ಬಿಟ್ಟು ವಾದಕ್ಕೆ ಇಳಿಯುವುದು ಸರಿಯಲ್ಲ.

ಇದನ್ನೂ ಓದಿ: Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?

ಏನಿದು ಬ್ಯಾಕ್‌ಲಾಗ್‌ ಹುದ್ದೆ ಅಂದರೆ?

ಬ್ಯಾಕ್‌ಲಾಗ್‌ ಅಂದರೆ ಒಂದು ನಿರ್ದಿಷ್ಟ ಹುದ್ದೆಗೆ ಇಂಥಹುದೇ ಮೀಸಲಾತಿಯನ್ನು ನಿಗದಿ ಮಾಡಲಾಗಿರುತ್ತದೆ. ಆ ಜಾಗಕ್ಕೆ ಆ ಮೀಸಲಾತಿಯವರನ್ನೇ ನೇಮಕ ಮಾಡಬೇಕು ಎಂಬ ನಿಯಮವಿದೆ. ಆದರೆ, ಒಮ್ಮೆ ಈ ಹುದ್ದೆ ಖಾಲಿಯಾದರೆ ಅವುಗಳನ್ನು ಭರ್ತಿ ಮಾಡದೆ ಖಾಲಿ ಬಿಡುವ ಸಮಸ್ಯೆ ಎದುರಾಗಿದೆ. ಆ ಹುದ್ದೆಗೆ ಬೇಕಾದ ವಿದ್ಯಾರ್ಹತೆಯವರು ಸಿಗಲಿಲ್ಲ ಎಂಬಿತ್ಯಾದಿ ಕಾರಣಗಳನ್ನು ನೀಡಲಾಗುತ್ತದೆ. ಕೆಳಹಂತಗಳಲ್ಲಿರುವವರನ್ನು ಆ ಹುದ್ದೆಗೆ ಪ್ರಮೋಟ್‌ ಮಾಡುವ ಅವಕಾಶವಿದ್ದರೂ ನಿರಾಕರಿಸಲಾಗುತ್ತಿದೆ. ಹೀಗಾಗಿ ರಾಜ್ಯದಲ್ಲಿ ಸಾವಿರಾರು ಹುದ್ದೆಗಳು ಬ್ಯಾಕ್‌ ಲಾಗ್‌ ಆಗಿ ಉಳಿದಿವೆ.

Exit mobile version