ಬೆಂಗಳೂರು: ಕರ್ನಾಟಕ ರಾಜ್ಯ ಹೈಕೋರ್ಟ್‌ಗೆ (Karnataka High court) ಅಕ್ಟೋಬರ್ 16ರಿಂದ 21ರವರೆಗೆ ದಸರಾ ರಜೆ (Dasara Holiday) ಘೋಷಣೆಯಾಗಿದೆ. ಈ ಸಂದರ್ಭದಲ್ಲಿ ಎದುರಾಗುವ ತುರ್ತು ಅರ್ಜಿಗಳ ವಿಚಾರಣೆಗಾಗಿ ರಜಾಕಾಲೀನ ಪೀಠಗಳು (Holiday Benches) ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠದಲ್ಲಿ ಕರ್ತವ್ಯ ನಿರ್ವಹಸಲಿವೆ ಎಂದು ಪ್ರಕಟಣೆ ತಿಳಿಸಿದೆ.
ನ್ಯಾಯಿಕ ರಿಜಿಸ್ಟ್ರಾರ್ ಎಂ ಚಂದ್ರಶೇಖರ್ ರೆಡ್ಡಿ ಅವರು ಈ ವಿಷಯವನ್ನು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ. ಅದರ ಜತೆಗೆ ರಜಾಕಾಲೀನ ಪೀಠಗಳ ವಿವರವನ್ನೂ ಒದಗಿಸಿದ್ದಾರೆ.
ಬೆಂಗಳೂರು ಪೀಠದಲ್ಲಿ ಯಾರು ಇರುತ್ತಾರೆ?
ಬೆಂಗಳೂರು ಪೀಠದಲ್ಲಿ ನ್ಯಾಯಮೂರ್ತಿಗಳಾದ ಬಿ ಎಂ ಶ್ಯಾಮ್ ಪ್ರಸಾದ್ ಮತ್ತು ಟಿ ವೆಂಕಟೇಶ್ ನಾಯ್ಕ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಲಿದ್ದು, ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಮತ್ತು ನ್ಯಾಯಮೂರ್ತಿ ಟಿ ಜಿ ಶಿವಶಂಕರೇ ಗೌಡ ಅವರ ನೇತೃತ್ವದ ಏಕಸದಸ್ಯ ಪೀಠಗಳು ತುರ್ತು ಪ್ರಕರಣಗಳ ವಿಚಾರಣೆ ನಡೆಸಲಿವೆ.
ಧಾರವಾಡ ಪೀಠದ ರಜಾ ಕಾಲೀನ ನ್ಯಾಯಮೂರ್ತಿಗಳು ಇವರು
ಧಾರವಾಡ ಪೀಠದಲ್ಲಿ ನ್ಯಾಯಮೂರ್ತಿಗಳಾದ ಕೆ.ಎಸ್ ಹೇಮಲೇಖಾ ಮತ್ತು ಅನಿಲ್ ಬಿ. ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳನ್ನು ವಿಚಾರಣೆ ನಡೆಸಲಿದೆ. ಆನಂತರ ಉಭಯ ನ್ಯಾಯಮೂರ್ತಿಗಳು ಪ್ರತ್ಯೇಕವಾಗಿ ಏಕಸದಸ್ಯ ಪೀಠದಲ್ಲಿ ಕುಳಿತು ಪ್ರಕರಣಗಳ ವಿಚಾರಣೆ ನಡೆಸಲಿದ್ದಾರೆ.
ಕಲಬುರ್ತಿ ಪೀಠದಲ್ಲಿ ಯಾರಿರುತ್ತಾರೆ?
ಕಲಬುರ್ಗಿ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಚ್ ಟಿ ನರೇಂದ್ರ ಪ್ರಸಾದ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠವು ಮೊದಲಿಗೆ ವಿಭಾಗೀಯ ಪೀಠದ ಪ್ರಕರಣಗಳ ವಿಚಾರಣೆ ನಡೆಸಲಿದ್ದು, ಆನಂತರ ಏಕಸದಸ್ಯ ಪೀಠಗಳು ಪ್ರತ್ಯೇಕವಾಗಿ ಪ್ರಕರಣಗಳ ವಿಚಾರಣೆ ನಡೆಸಲಿದೆ.
ಇದನ್ನೂ ಓದಿ: High Court : ಎರವಲು ಸೇವೆ ಎರಡು ವರ್ಷ ಕಡ್ಡಾಯ ಎಂಬ ನಿಯಮವಿಲ್ಲ ಎಂದ ಹೈಕೋರ್ಟ್
ಯಾವ ಯಾವ ಪ್ರಕರಣಗಳ ವಿಚಾರಣೆ ನಡೆಯುತ್ತದೆ?
ತುರ್ತಾಗಿ ಆಗಬೇಕಾದ ಮಧ್ಯಂತರ ತಡೆಯಾಜ್ಞೆ, ನಿರ್ದೇಶನ ಮತ್ತು ತಾತ್ಕಾಲಿಕ ಪ್ರತಿಬಂಧಕಾದೇಶದಂಥ ಪ್ರಕರಣಗಳನ್ನು ಮಾತ್ರ ವಿಚಾರಣೆಗೆ ಪರಿಗಣಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೇಲಿನ ಪ್ರಕರಣಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ರಜಾಕಾಲೀನ ಪೀಠದ ವಿಚಾರಣೆಯ ದಿನ ಹೊರತುಪಡಿಸಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಸಲ್ಲಿಸಬಹುದಾಗಿದೆ. ರಜಾಕಾಲೀನ ಪೀಠದ ವಿಚಾರಣೆಯ ದಿನದಂದು ಅರ್ಜಿ ಸಲ್ಲಿಕೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 3.30 ರವರೆಗೆ ಅವಕಾಶ ಇರಲಿದೆ. ಇದರೊಂದಿಗೆ ಇ-ಫೈಲಿಂಗ್ ಪೋರ್ಟಲ್ ಮೂಲಕ ಇ-ಫೈಲಿಂಗ್ ಮಾಡಬಹುದಾಗಿದೆ ಎಂದು ರಿಜಿಸ್ಟ್ರಾರ್ ಮತ್ತು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.