ಬೆಂಗಳೂರು: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET Exam) ಸ್ನಾತಕೋತ್ತರ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಪರೀಕ್ಷೆ ಬರೆದ ಎಲ್ಲರಿಗೂ ಅವಕಾಶ ನೀಡಿರುವ ಕ್ರಮಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ರಾಜ್ಯ ಹೈಕೋರ್ಟ್ (Karnataka High court) ಕೂಡಾ ಕೇಂದ್ರ ಸರ್ಕಾರಕ್ಕೆ ನೋಟಿಸ್ (Notice to Central Government) ಜಾರಿಗೊಳಿಸಿದೆ.
ಕಳೆದ ಹತ್ತು ವರ್ಷಗಳಿಂದ ನೀಟ್-ಪಿಜಿ ಕಟ್ ಆಫ್ ಅಂಕಗಳು (NEET Eligibility) ಶೇ.50ರಷ್ಟಿತ್ತು. ಅಂದರೆ ನೀಟ್ ಪರೀಕ್ಷೆಯಲ್ಲಿ ಕನಿಷ್ಠ 50% ಅಂಕ ಪಡೆದವರು ಮಾತ್ರ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲು ಅವಕಾಶವಿತ್ತು ಆದರೆ, 2023ನೇ ಸಾಲಿನ ನೀಟ್-ಪಿಜಿ ಕೌನ್ಸೆಲಿಂಗ್‌ಗೆ ಹಾಜರಾಗಲು ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಲಾಗಿದೆ. ಈ ಸಂಬಂಧ ಎಂಸಿಸಿ 2023ರ ಸೆಪ್ಟೆಂಬರ್ 20ರಂದು ಅಧಿಸೂಚನೆ ಹೊರಡಿಸಿತ್ತು. ಇದರ ಪ್ರಕಾರ, ಕೌನ್ಸೆಲಿಂಗ್‌ಗೆ ಹಾಜರಾಗಲು ನೀಟ್ ಪರೀಕ್ಷೆ ಒಂದು ಮಾನದಂಡವೇ ಅಲ್ಲ. ನೀಟ್ ಪರೀಕ್ಷೆ ಬರೆದಿದ್ದರೆ ಸಾಕು. ಅದರಲ್ಲಿ ಶೂನ್ಯ ಅಂಕ ಬಂದರೂ ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಬಹುದು ಎಂಬ ನಿಯಮ ಮಾಡಿದಂತಾಗಿದೆ.
ಇದನ್ನು ಪ್ರಶ್ನಿಸಿ ಹುಬ್ಬಳ್ಳಿಯ ಮನೋವಿಜ್ಞಾನದ ವೈದ್ಯ ಹಾಗೂ ವಕೀಲ ಡಾ. ವಿನೋದ್ ಕುಲಕರ್ಣಿ ಅವರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಕೇಂದ್ರದ ಮೆಡಿಕಲ್ ಕೌನ್ಸೆಲಿಂಗ್ ಸಮಿತಿ (ಎಂಸಿಸಿ) ಸೇರಿದಂತೆ ಇತರ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿದ ಪೀಠವು ವಿಚಾರಣೆಯನ್ನು ಮುಂದೂಡಿದೆ.
ಅರ್ಜಿದಾರರ ವಾದ ಏನಾಗಿತ್ತು?
- ಕಳೆದ ಹತ್ತು ವರ್ಷಗಳಿಂದ ನೀಟ್-ಪಿಜಿ ಕಟ್ ಆಫ್ ಅಂಕಗಳು ಶೇ.50ರಷ್ಟಿತ್ತು. ಆದರೆ, 2023ನೇ ಸಾಲಿನ ನೀಟ್-ಪಿಜಿ ಕೌನ್ಸೆಲಿಂಗ್ ಹಾಜರಾಗಲು ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿ ಎಂಸಿಸಿ 2023ರ ಸೆಪ್ಟೆಂಬರ್ 20ರಂದು ಅಧಿಸೂಚನೆ ಹೊರಡಿಸಿದೆ.
- ಕಟ್ ಆಫ್ ಅಂಕ ಶೂನ್ಯಕ್ಕೆ ಇಳಿಸಿದ್ದರಿಂದ ನೀಟ್ ಪಿಜಿಗೆ ಹಾಜರಾದ ಪ್ರತಿಯೊಬ್ಬ ಅಭ್ಯರ್ಥಿ ತನ್ನಿಷ್ಟದ ಪಿಜಿ ಸೀಟ್ ಪಡೆದುಕೊಳ್ಳಬಹುದು.
- ಹೀಗಾದರೆ ದೇಶವು ಮುಂದೆ ವೈದ್ಯರನ್ನು ಉತ್ಪಾದಿಸುವ ದಾಸ್ತಾನು ಮಳಿಗೆ ಅಥವಾ ಉಗ್ರಾಣ ಆಗಲಿದೆ.
- ಪಿಜಿ ಪ್ರವೇಶಕ್ಕೆ ಮೆರಿಟ್ ಮಾತ್ರ ಮಾನದಂಡವಾಗಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಬಾರಿ ಹೇಳಿದೆ.
- ಕೌನ್ಸೆಲಿಂಗ್ ಕಟ್ ಆಫ್ ಶೂನ್ಯಕ್ಕೆ ಇಳಿಸುವುದರಿಂದ ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿ ಇನ್ನಷ್ಟು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಇದನ್ನೂ ಓದಿ: NEET PG 2023: ನೀಟ್ ಎಕ್ಸಾಮ್ ಬರೆದ ಎಲ್ಲರೂ ಕೌನ್ಸೆಲಿಂಗ್‌ಗೆ ಅರ್ಹರು! ರೂಲ್ಸ್ ಚೇಂಜ್ ಆಗಿದ್ದೇಕೆ?
ನೀಟ್ ಪಿಜಿ ಕೌನ್ಸೆಲಿಂಗ್ ಕಟ್ ಆಫ್ ಅಂಕಗಳನ್ನು ಶೂನ್ಯಕ್ಕೆ ಇಳಿಸಿ 2023ರ ಸೆಪ್ಟೆಂಬರ್ 20ರಂದು ಎಂಸಿಸಿ ಹೊರಡಿಸಿರುವ ಅಧಿಸೂಚನೆಯನ್ನು ಹಿಂಪಡೆಯುವಂತೆ ನಿರ್ದೇಶನ ನೀಡಬೇಕು ಹಾಗೂ ಹಿಂದಿನ ಶೇ.50ರಷ್ಟು ಕಟ್ ಆಫ್ ಅಂಕಗಳ ಪದ್ಧತಿಯಂತೆಯೇ ಕೌನ್ಸೆಲಿಂಗ್ ನಡೆಸುವಂತೆ ಆದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು.