ಬೆಂಗಳೂರು: ರಾಜ್ಯದ ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹಮದ್ ಖಾನ್ (Zameer Ahmed Khan) ಅವರು ತಮ್ಮ ವಿರುದ್ಧದ ಎಸಿಬಿ ತನಿಖೆ (ACB Enquiry) ರದ್ದು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ರಾಜ್ಯ ಹೈಕೋರ್ಟ್ (Karnataka High Court) ವಜಾಗೊಳಿಸಿದೆ.
ಜಮೀರ್ ಅಹಮದ್ ಖಾನ್ ಅವರು ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ 2031% ಹೆಚ್ಚು ಅಕ್ರಮ ಆಸ್ತಿ ಗಳಿಸಿದ್ದಾರೆಂದು ಎಸಿಬಿ ಕೇಸ್ ದಾಖಲಿಸಿತ್ತು. 2019ರ ಜೂನ್ನಲ್ಲಿ, ಜಮೀರ್ ಮತ್ತು ಐ-ಮಾನಿಟರಿ ಅಡ್ವೈಸರಿ (IMA Case) ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕ ಮೊಹಮ್ಮದ್ ಮನ್ಸೂರ್ ಖಾನ್ ನಡುವಿನ ಕೆಲವು ವಹಿವಾಟಿನ ಕುರಿತು ಜಾರಿ ನಿರ್ದೇಶನಾಲಯದಿಂದ ವರದಿಯನ್ನು ಪಡೆದ ನಂತರ ಎಸಿಬಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಪ್ರಕರಣದ ತನಿಖೆಯ ರದ್ದು ಕೋರಿ ಜಮೀರ್ ಅಹ್ಮದ್ ಖಾನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರು ಅರ್ಜಿಯ ವಿಚಾರಣೆ ನಡೆಸಿ ವಜಾಗೊಳಿಸಿದರು. ಆ ಮೂಲಕ ಭ್ರಷ್ಟಾಚಾರ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿತು.
ಏನಿದು ಪ್ರಕರಣ?
2019ರಲ್ಲಿ ಐಎಂಎ ವಂಚನೆ ಹಗರಣ ಬಯಲಿಗೆ ಬಂದಿತ್ತು. ಜಮೀರ್ ಅಹಮದ್ ಖಾನ್ ಮತ್ತು ಐ-ಮಾನಿಟರಿ ಅಡ್ವೈಸರಿ ಪ್ರೈವೇಟ್ ಲಿಮಿಟೆಡ್‌ನ ಪ್ರವರ್ತಕ ಮೊಹಮ್ಮದ್ ಮನ್ಸೂರ್ ಖಾನ್ ನಡುವಿನ ಕೆಲವು ವಹಿವಾಟಿನ ಬಗ್ಗೆ ಪ್ರಕರಣ ದಾಖಲಾಗಿತ್ತು. ಈ ಕುರಿತು ಜಾರಿ ನಿರ್ದೇಶನಾಲಯದಿಂದ (ED) ವರದಿಯನ್ನು ಪಡೆದ ನಂತರ ಎಸಿಬಿ ಅವರ ವಿರುದ್ಧ ಪ್ರಕರಣ ದಾಖಲಿಸಿತ್ತು.
ಐಎಂಎ ವಂಚನೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಜಾರಿ ನಿರ್ದೇಶನಾಲಯ ಮನ್ಸೂರ್ ಖಾನ್ ವಿಚಾರಣೆ ನಡೆಸಿತ್ತು. ಆಗ ತಾನು ಜಮೀರ್ ಖಾನ್ ಅವರಿಗೆ 63 ಕೋಟಿ ರೂ. ಪಾವತಿಸಿದ್ದಾಗಿ ಹೇಳಿದ್ದ. ಇದು ಫ್ಲ್ಯಾಟ್ ಖರೀದಿಗೆ ನೀಡಿದ ಹಣ ಎಂದು ಹೇಳಿದ್ದ. ಇತ್ತ ಜಾರಿ ನಿರ್ದೇಶನಾಲಯವು ರಾಜ್ಯದ ಎಸಿಬಿಗೆ ಮಾಹಿತಿಯನ್ನು ನೀಡಿ ಜಮೀರ್ ಖಾನ್ ಅವರ ಆಸ್ತಿಯ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿತ್ತು. ಅದರಂತೆ. 2021ರ ಆಗಸ್ಟ್‌ನಲ್ಲಿ ಎಸಿಬಿ ಅಧಿಕಾರಿಗಳು ಜಮೀರ್ ಅವರ ಕಚೇರಿ ಹಾಗೂ ನಿವಾಸದ ಮೇಲೆ ದಾಳಿ ನಡೆಸಿ ತಪಾಸಣೆ ನಡೆಸಿ ಕೆಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. ಜಮೀರ್ ಖಾನ್ ಅವರು ತಮ್ಮ ಗೊತ್ತಾದ ಆದಾಯ ಮೂಲಕ್ಕಿಂತ 80.44 ಕೋಟಿ ಹೆಚ್ಚುವರಿ ಸಂಪತ್ತು ಹೊಂದಿದೆ ಎಂದು ಎಸಿಬಿ ಹೇಳಿತ್ತು.
ಇದನ್ನೂ ಓದಿ : Zameer Ahmed : ಬಿಜೆಪಿಯವರು ಮುಸ್ಲಿಂ ಸ್ಪೀಕರ್ ಎದುರು ನಮಸ್ಕಾರ್ ಸಾಬ್ ಅಂತ ನಿಂತ್ಕೋಬೇಕು: ಜಮೀರ್ ಹೇಳಿಕೆಗೆ ಬಿಜೆಪಿ ಕೆಂಡ
ಈ ನಡುವೆ, ಜಮೀರ್ ಖಾನ್ ತನ್ನ ವಿರುದ್ಧದ ಎಸಿಸಿ ತನಿಖೆಯನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರು. ಜತೆಗೆ ರಾಜ್ಯ ಹೈಕೋರ್ಟ್‌ನಲ್ಲಿ ಎಸಿಬಿ ತನಿಖೆಗೆ ತಡೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದೀಗ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ, ಅರ್ಜಿಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಆದರೆ, ಪ್ರಕರಣದ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇರುವ ಹಿನ್ನೆಲೆಯಲ್ಲಿ ಹೈಕೋರ್ಟ್ ಆದೇಶ ತಡೆಹಿಡಿಯುವಂತೆ ಜಮೀರ್ ಪರ ವಕೀಲರು ಮಾಡಿದರು. ಇದನ್ನು ಪರಿಗಣಿಸಿದ ನ್ಯಾಯಪೀಠ 30 ದಿನಗಳ ಕಾಲ ತನ್ನ ತೀರ್ಪನ್ನು ಅಮಾನತಿನಲ್ಲಿಟ್ಟಿದೆ.