ಬೆಂಗಳೂರು: ನನಗೆ ಸಕ್ಕರೆ ಕಾಯಿಲೆ (Diabetes Mellitus) ಇದೆ. ನನ್ನ ಆರೋಗ್ಯ ಸಮಸ್ಯೆಯಿಂದಾಗಿ ಪತ್ನಿಗೆ ಜೀವನಾಂಶ (Marriage Alimony) ಕೊಡಲು ಆಗುವುದಿಲ್ಲ ಎಂದು ಹೇಳಿದ ವ್ಯಕ್ತಿಯೊಬ್ಬರಿಗೆ ರಾಜ್ಯ ಹೈಕೋರ್ಟ್ (Karnataka High court) ತಪರಾಕಿ ನೀಡಿದೆ. ಸಕ್ಕರೆ ಕಾಯಿಲೆ ಏನೂ ದೊಡ್ಡ ರೋಗ ಅಲ್ಲ (Diabetes in manageable). ಅದನ್ನು ನಿರ್ವಹಿಸಬಹುದು. ಅದರ ಹೆಸರು ಹೇಳಿ ಜೀವನಾಂಶ ನೀಡೋದನ್ನು ತಪ್ಪಿಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಅನಂತ್ ಕುಮಾರ್ ಕೆ.ಜಿ ವರ್ಸಸ್ ಯೋಗಿತಾ ಅನಂತ್ ಕುಮಾರ್ ಪ್ರಕರಣದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ಜಗತ್ತಿನಲ್ಲಿ ಸಾಕಷ್ಟು ಜನರು ಇಂಥ ಯಾತನೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆ ಆಗಿರುವುದರಿಂದ ಇವುಗಳನ್ನು ಸುಲಭವಾಗಿ ನಿರ್ವಹಿಸಬಹುದು ಎಂದು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ನೇತೃತ್ವದ ಏಕಸದಸ್ಯ ಪೀಠವು ಹೇಳಿದೆ. ಪರಿತ್ಯಕ್ತ ಪತ್ನಿಗೆ ಮಾಸಿಕ ₹10,000 ಜೀವನಾಂಶ ಪಾವತಿಸುವಂತೆ ಆದೇಶಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿದ್ದ ಪತಿಯ ಅರ್ಜಿಯನ್ನು ನ್ಯಾಯಾಲಯವು ವಜಾ ಮಾಡಿದೆ.
“ಅರ್ಜಿದಾರರು ತಾನು ಸಕ್ಕರೆ ಕಾಯಿಲೆ ಮತ್ತು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡಿರುವುದು ಮಾನ್ಯವಾಗುವುದಿಲ್ಲ. ಜಗತ್ತಿನಾದ್ಯಂತ ಇಂಥ ಕಾಯಿಲೆಯಿಂದ ಸಾಕಷ್ಟು ಜನರು ಯಾತನೆ ಅನುಭವಿಸುತ್ತಿದ್ದಾರೆ. ವೈದ್ಯಕೀಯ ವಿಜ್ಞಾನದಲ್ಲಿನ ಬೆಳವಣಿಗೆಯ ಹಿನ್ನೆಲೆಯಲ್ಲಿ ಅವುಗಳನ್ನು ನಿರ್ವಹಿಸಬಹುದಾಗಿದೆ. ಸರಿಯಾದ ವೈದ್ಯಕೀಯ ಆರೈಕೆಯೊಂದಿಗೆ ಅವುಗಳನ್ನು ನಿರ್ವಹಿಸಲಾಗುವುದಿಲ್ಲ ಎಂಬ ಅರ್ಜಿದಾರರ ವಾದ ಸರಿಯಲ್ಲ” ಎಂದು ನ್ಯಾಯಾಲಯ ಹೇಳಿದೆ.
ಅರ್ಜಿದಾರರ ವಾದವೇನಾಗಿತ್ತು?
- ಕೌಟುಂಬಿಕ ನ್ಯಾಯಾಲಯ ಮಾಸಿಕ 10000 ರೂ. ಜೀವನಾಂಶ ಪಾವತಿಸಲು ಹೇಳಿದೆ. ಇದು ದುಬಾರಿಯಾಗಿದೆ.
- ನಾನು ಸಕ್ಕರೆ ಕಾಯಿಲೆಯ ಯಾತನೆಯಿಂದ ಬಳಲುತಿದ್ದು, ಅದರ ನಿರ್ವಹಣೆಗೇ ನನಗೆ ಹೆಚ್ಚಿನ ಹಣ ಬೇಕಾಗುತ್ತದೆ.
- ಪತ್ನಿಯು ಕೆಲಸ ಮಾಡುತ್ತಿದ್ದು, ಮಗುವಿನ ಕಸ್ಟಡಿಯನ್ನು ಪಡೆದಿರುವುದರಿಂದ ಆಕೆಗೆ ಜೀವನಾಂಶದ ಅಗತ್ಯವಿಲ್ಲ.
ಕೋರ್ಟ್ ಹೇಳಿದ್ದೇನು?
- ಮದುವೆ ಮತ್ತು ಮಗುವಿನ ಬಗ್ಗೆ ಪತಿ-ಪತ್ನಿಯರಿಗೆ ಯಾವುದೇ ಆಕ್ಷೇಪಗಳಿಲ್ಲ.
- ಪತ್ನಿಗೆ ಬದುಕಿಗೆ ಬೇರೆ ಉದ್ಯೋಗ ಇದೆ ಎಂಬುದನ್ನು ತೋರಿಸಲಾಗಿಲ್ಲ.
- ಕಾನೂನು, ಧರ್ಮ ಮತ್ತು ನ್ಯಾಯದ ಪ್ರಕಾರ ಸಮರ್ಥ ವ್ಯಕ್ತಿಯು ತನ್ನ ಕುಟುಂಬ ನೋಡಿಕೊಳ್ಳಬೇಕು ಎಂದು ಹೇಳುತ್ತದೆ.
- ಸಿಆರ್‌ಪಿಸಿ ಸೆಕ್ಷನ್ 125, ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24 ಮತ್ತು ಕೌಟುಂಬಿಕ ದೌರ್ಜನ್ಯದಿಂದ ಮಹಿಳೆಯರ ರಕ್ಷಣೆ ಕಾಯಿದೆಯಲ್ಲೂ ಇದನ್ನೇ ಹೇಳಲಾಗಿದೆ.
- ಇದುವರೆಗೆ ಯಾವುದೇ ಜೀವನಾಂಶ ಪಾವತಿಸಿಲ್ಲ ಏಕೆ ಎಂಬುದಕ್ಕೆ ವ್ಯಕ್ತಿಯು ಸೂಕ್ತವಾದ ವಿವರಣೆಯನ್ನು ನೀಡಿಲ್ಲ.
- ಜೀವನ ವೆಚ್ಚ ಹೆಚ್ಚಾಗಿದ್ದು, ತಾನು ಮತ್ತು ಮಗುವನ್ನು ಪತ್ನಿ ನೋಡಿಕೊಳ್ಳಬೇಕಿದೆ. ಹೀಗಾಗಿ ₹10,000 ಜೀವನಾಂಶ ಹೆಚ್ಚಾಯಿತು ಎಂಬ ವಾದ ಸರಿಯಲ್ಲ.
ಇದೀಗ ಕೋರ್ಟ್ ಜೀವನಾಂಶ ಕೊಡಲೇಬೇಕು ಎಂದು ಸೂಚಿಸಿರುವುದರಿಂದ ಪತಿಯ ಮುಂದಿನ ನಿಲುವು ಏನಾಗಿರುತ್ತದೆ ಎಂದು ಕಾದು ನೋಡಬೇಕಾಗಿದೆ.
ಇದನ್ನೂ ಓದಿ: Roopa Vs Sindhuri : ಮಾನನಷ್ಟ ಮೊಕದ್ದಮೆ ರದ್ದತಿಗೆ ಹೈಕೋರ್ಟ್ ನಕಾರ; IPS ರೂಪಾಗೆ ಭಾರಿ ಹಿನ್ನಡೆ