ಬೆಂಗಳೂರು: ಲೈಂಗಿಕ ಕಾರ್ಯಕರ್ತೆಯ (Sex worker) ಹತ್ಯೆ ಪ್ರಕರಣದಲ್ಲಿ ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ್ದ ಕೆಳ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದ ರಾಜ್ಯ ಹೈಕೋರ್ಟ್ (Karnataka High court) ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಇದು ಒಂದು 13 ವರ್ಷದ ಹಿಂದೆ ನಡೆದ, ಭಾರಿ ಸಂಚಲನ ಸೃಷ್ಟಿಸಿದ್ದ ಪ್ರಕರಣ (Murder Case).
2010ರ ಸೆಪ್ಟೆಂಬರ್ 18ರಂದು ಲೈಂಗಿಕ ಕಾರ್ಯಕರ್ತೆಯೊಬ್ಬರು ಮೈಸೂರಿನ ಎಸ್‌ಆರ್ ರಸ್ತೆಯಲ್ಲಿ ಗ್ರಾಹಕರೊಂದಿಗೆ ವ್ಯವಹರಿಸುತ್ತಿದ್ದಳು. ಆಗ ಅಲ್ಲಿಗೆ ಬಂದ ಗಿರೀಶ್ ಎಂಬ ವ್ಯಕ್ತಿ ಆಕೆಯನ್ನು ಆಟೊರಿಕ್ಷಾದಲ್ಲಿ ಸಬ್ ಅರ್ಬನ್ ಬಸ್ ನಿಲ್ದಾಣದ ಪಕ್ಕದಲ್ಲಿರುವ ಲಾಡ್ಜ್‌ಗೆ ಕರೆದೊಯ್ದಿದ್ದ. ದೇವಸ್ಥಾನಕ್ಕೆ ಬಂದಿದ್ದ ಪತಿ-ಪತ್ನಿ ಎಂದು ಪರಿಚಯಿಸಿಕೊಂಡು ಲಾಡ್ಜ್ ರಿಜಿಸ್ಟರ್‌ನಲ್ಲಿ ಹೆಸರನ್ನು ರವಿ ಎಂದು ನಮೂದು ಮಾಡಿ ಕೊಠಡಿ ಪಡೆದುಕೊಂಡಿದ್ದ.
ಅಂದು ರಾತ್ರಿ ಕೊಠಡಿಗೆ ಆಹಾರ ಮತ್ತು ಪಾನೀಯಗಳನ್ನು ತರಿಸಿಕೊಂಡಿದ್ದರು. ಆಕೆಯನ್ನು ಒಬ್ಬ ಗ್ರಾಹಕನಾಗಿ ಚೆನ್ನಾಗಿ ಬಳಸಿಕೊಂಡ ಗಿರೀಶ್ ಅಲ್ಲಿಗೇ ತನ್ನ ಕೆಲಸವನ್ನು ಮುಗಿಸಲಿಲ್ಲ. ಆಕೆಯ ಕತ್ತು ಹಿಸುಕಿ ಅವಳ ಚಿನ್ನಾಭರಣಗಳು, ನೋಕಿಯಾ ಮೊಬೈಲ್ ಫೋನ್ ಮತ್ತು ಸ್ವಲ್ಪ ಹಣ ಕಸಿದು ಪರಾರಿಯಾಗಿದ್ದ. ಬಳಿಕ ಚಿನ್ನಾಭರಣಗಳನ್ನು ಗಿರಿವಿ ಇಟ್ಟು ಹಣ ಪಡೆದುಕೊಂಡಿದ್ದನು.
ಮರು ದಿನ ಬೆಳಗ್ಗೆ ಪ್ರಕರಣ ಬೆಳಕಿಗೆ ಬಂದ ಬಳಿಕ ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಆರೋಪಿ ಗಿರೀಶ್ ವಿಚಾರ ಬಯಲಿಗೆ ಬಂತು. ಆತನನ್ನು ಬಂಧಿಸಲಾಯಿತು. ಪ್ರಕರಣ ವಿಚಾರಣೆ ನಡೆಯಿತು. 2016ರ ಏಪ್ರಿಲ್ 25ರಂದು ಮೈಸೂರಿನ ಏಳನೇ ಹೆಚ್ಚುವರಿ ಸತ್ರ ನ್ಯಾಯಾಧೀಶರು ಆರೋಪಿಯನ್ನು ಖುಲಾಸೆಗೊಳಿಸಿ ಆದೇಶಿಸಿದ್ದರು.
ಅತ್ಯಾಚಾರ, ದರೋಡೆ, ಕೊಲೆ ಆರೋಪದಲ್ಲಿ ಅಪರಾಧಿಯನ್ನು ಖುಲಾಸೆಗೊಳಿಸಿದ್ದ ಮೈಸೂರಿನ ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಮೈಸೂರಿನ ಲಷ್ಕರ್ ಪೊಲೀಸ್ ಠಾಣೆ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್ ಬಿ ಪ್ರಭಾಕರ್ ಶಾಸ್ತ್ರಿ ಮತ್ತು ಅನಿಲ್ ಬಿ ಕಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ಪುರಸ್ಕರಿಸಿದೆ.
ಅತ್ಯಾಚಾರದಿಂದ ಮುಕ್ತಿ, ಕೊಲೆಗೆ ಶಿಕ್ಷೆ
ನ್ಯಾಯಾಲಯವು ಅತ್ಯಾಚಾರ ಪ್ರಕರಣದಿಂದ ಆರೋಪಿ ಗಿರೀಶ್‌ನನ್ನು ಮುಕ್ತಗೊಳಿಸಿದ್ದು, ಕೊಲೆ ಮತ್ತು ದರೋಡೆ ಆರೋಪದಲ್ಲಿ ಶಿಕ್ಷೆ ವಿಧಿಸಿದೆ. ಕೊಲೆ ಆರೋಪಕ್ಕೆ ಜೀವಾವಧಿ ಶಿಕ್ಷೆಯ ಜೊತೆಗೆ 30 ಸಾವಿರ ರೂಪಾಯಿ ದಂಡ, ಕೊಲೆ ಮಾಡುವುದಕ್ಕೂ ಮುನ್ನ ಆಕೆಯನ್ನು ಅಪಹರಣ ಮಾಡಿದ್ದ ಆರೋಪದಲ್ಲಿ 7 ವರ್ಷ ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿದೆ. ಎರಡು ಶಿಕ್ಷೆಗಳೂ ಒಟ್ಟಿಗೆ ಜಾರಿಯಾಗಲಿವೆ.
ದಂಡದ ಮೊತ್ತದ ಪೈಕಿ 35 ಸಾವಿರ ರೂಪಾಯಿಯನ್ನು ಮೃತ ಮಹಿಳೆಯ ಪುತ್ರನಿಗೆ ಪಾವತಿಸಬೇಕು. ಇನ್ನುಳಿದ 5 ಸಾವಿರ ರೂಪಾಯಿಯನ್ನು ರಾಜ್ಯ ಸರ್ಕಾರಕ್ಕೆ ಪಾವತಿ ಮಾಡುವಂತೆ ಸೂಚನೆ ನೀಡಿರುವ ಪೀಠವು ಮುಂದಿನ 45 ದಿನಗಳಲ್ಲಿ ವಿಚಾರಣಾಧೀನ ನ್ಯಾಯಾಲಯದ ಮುಂದೆ ಶರಣಾಗುವಂತೆ ದೋಷಿಗೆ ಸೂಚಿಸಿದೆ.
ಇದನ್ನು ಓದಿ: ಅರ್ಧ ಗಂಟೆ ಅಕ್ರಮ ಸೆರೆಯಾಗಿದ್ದ ವ್ಯಕ್ತಿಗೆ ಪೊಲೀಸರಿಂದಲೇ 50 ಸಾವಿರ ರೂ. ಪರಿಹಾರ ಒದಗಿಸಿದ ದಿಲ್ಲಿ ಹೈಕೋರ್ಟ್!
ಅತ್ಯಾಚಾರ ಪ್ರಕರಣ ಯಾಕೆ ಲಾಗೂ ಆಗುವುದಿಲ್ಲ?
ಈ ಪ್ರಕರಣದಲ್ಲಿ ಅತ್ಯಾಚಾರವನ್ನು ಪರಿಗಣಿಸದೆ ಕೊಲೆಯನ್ನು ಮಾತ್ರ ಯಾಕೆ ಪರಿಗಣಿಸಲಾಗಿದೆ ಎಂಬುದಕ್ಕೆ ಕೋರ್ಟ್ ವಿವರಣೆ ನೀಡಿದೆ.
- ಆರೋಪಿ ಗ್ರಾಹಕರಂತೆ ಲೈಂಗಿಕ ಕಾರ್ಯಕರ್ತೆಯನ್ನು ಲಾಡ್ಜ್‌ಗೆ ಕರೆದೊಯಿದ್ದು, ಆಕೆಯೂ ಕೂಡಾ ಆತನನ್ನು ಗ್ರಾಹಕನಂತೆ ಪರಿಗಣಿಸಿದ್ದಳು.
- ಆಕೆ ಸಾವಿಗೂ ಮುನ್ನಾ ಎಷ್ಟು ಬಾರಿ ಬಲವಂತದಿಂದ ಲೈಂಗಿಕತೆಗೆ ಒಳಗಾಗಿದ್ದಳು ಎಂಬುದಕ್ಕೆ ಪುರಾವೆ ಇಲ್ಲ.
- ಮೃತಪಟ್ಟಿರುವ ಮಹಿಳೆಯು ಲೈಂಗಿಕ ಕಾರ್ಯಕರ್ತೆ ಎಂಬುದಕ್ಕೆ ಆರೋಪಿಯು ಆಕೆಯನ್ನು ಕೊಲೆ ಮಾಡುವ ಮೊದಲು ಅತ್ಯಾಚಾರ ಮಾಡಿದ್ದಾನೆ ಎಂದು ತೀರ್ಮಾನಿಸುವುದು ಸುರಕ್ಷಿತವಲ್ಲ.