Site icon Vistara News

Murugha Shri : ಲೈಂಗಿಕ ದೌರ್ಜನ್ಯ ಪ್ರಕರಣ; ಮುರುಘಾಶ್ರೀಗೆ ಕೊನೆಗೂ ಜಾಮೀನು; ಬಿಡುಗಡೆ ಆಗ್ತಾರಾ?

murugha Seer Gets bail in sexual harrassment Case

ಬೆಂಗಳೂರು: ಮಠದ ಹಾಸ್ಟೆಲ್‌ನಲ್ಲಿರುವ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ (Sexual Harrassment) ನಡೆಸಿದ ಆರೋಪದಲ್ಲಿ 14 ತಿಂಗಳ ಹಿಂದೆ ಜೈಲು ಸೇರಿದ್ದ ಚಿತ್ರದುರ್ಗದ ಮುರುಘಾಮಠದ (Chitradurga murughamatt) ಡಾ. ಶಿವಮೂರ್ತಿ ಮುರುಘಾಶರಣರಿಗೆ (Shivamoorthi Murugha Sharanaru) ಕೊನೆಗೂ ಜಾಮೀನು ಸಿಕ್ಕಿದೆ. ಆದರೆ, ಇದು ಒಂದು ಪ್ರಕರಣದಲ್ಲಿ ಸಿಕ್ಕಿರುವ ಜಾಮೀನು (Murugha Shri gets bail), ಇನ್ನೊಂದರಲ್ಲಿ ಇನ್ನೂ ಜಾಮೀನು ಸಿಗದೆ ಇರುವುದರಿಂದ ಅವರು ಜೈಲಿನಿಂದ ಬಿಡುಗಡೆಯಾಗುವುದಿಲ್ಲ!

ಹೈಕೋರ್ಟ್ ನ್ಯಾಯಮೂರ್ತಿ ಶ್ರೀನಿವಾಸ್ ಹರೀಶ್ ಕುಮಾರ್ ಅವರು ಮುರುಘಾಶರಣರಿಗೆ ಜಾಮೀನು ನೀಡಿದ್ದಾರೆ. ಅದರ ಜತೆಗೆ ಹಲವು ಷರತ್ತುಗಳನ್ನು ಕೂಡಾ ವಿಧಿಸಿದ್ದಾರೆ. ಒಂದೊಮ್ಮೆ ಜೈಲಿನಿಂದ ಬಿಡುಗಡೆಯಾದರೂ ಚಿತ್ರದುರ್ಗ ಜಿಲ್ಲೆ ಪ್ರವೇಶಿಸುವಂತಿಲ್ಲ ಮತ್ತು ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಶ್ರೀಗಳ ಮೇಲೆ ಎರಡು ಪ್ರಕರಣಗಳು ದಾಖಲಾಗಿದ್ದು, ಅವುಗಳ ಪೈಕಿ ಒಂದರಲ್ಲಿ ಮಾತ್ರ ಈಗ ಜಾಮೀನು ಸಿಕ್ಕಿದೆ. ಅತ್ಯಂತ ಮಹತ್ವದ ಪೋಕ್ಸೋ ಪ್ರಕರಣದಲ್ಲಿ ಅವರಿಗೆ ಇನ್ನೂ ಜಾಮೀನು ಸಿಕ್ಕಿಲ್ಲ. ಹಾಗಾಗಿ ಅವರು ಜೈಲಿನಲ್ಲೇ ಉಳಿಯಬೇಕಾಗುತ್ತದೆ.

ಏನಿದು ಮುರುಘಾಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣ?

2022ರ ಆಗಸ್ಟ್‌ 26ರಂದು ಇಡೀ ನಾಡೇ ಬೆಚ್ಚಿಬೀಳಿಸುವ ಸುದ್ದಿಯೊಂದು ಮೈಸೂರಿನಿಂದ ಹೊರಬಿದ್ದಿತ್ತು. ಚಿತ್ರದುರ್ಗದ ಬೃಹನ್ಮಠದ ಆಡಳಿತದಲ್ಲಿರುವ ವಿದ್ಯಾರ್ಥಿ ನಿಲಯದ ಹಲವು ವಿದ್ಯಾರ್ಥಿನಿಯರಿಗೆ ಮುರುಘಾ ಶ್ರೀ ಲೈಂಗಿಕ ದೌರ್ಜನ್ಯವೆಸಗುತ್ತಿದ್ದಾರೆ ಎಂದು ಇಬ್ಬರು ವಿದ್ಯಾರ್ಥಿನಿಯರು ಮೈಸೂರಿನ ಒಡನಾಡಿ ಸೇವಾ ಸಂಸ್ಥೆಯ ಮೂಲಕ ಮೈಸೂರಿನ ನಜರಾಬಾದ್‌ ಠಾಣೆಗೆ ದೂರು ನೀಡಿದ್ದರು.

ತಮ್ಮನ್ನು ಸ್ವಾಮೀಜಿಗಳು ಲೈಂಗಿಕವಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದರಲ್ಲಿ ಹಾಸ್ಟೆಲ್‌ನ ವಾರ್ಡನ್‌ ರಶ್ಮಿ ಅವರ ಕುಮ್ಮಕ್ಕೂ ಇದೆ. ಸ್ವಾಮೀಜಿಯವರಿಗೆ ಏನನ್ನೋ ತೆಗೆದುಕೊಂಡು ಹೋಗಿ ಕೊಡುವಂತೆ ವಾರ್ಡನ್ ಅವರೇ ಕಳುಹಿಸುತ್ತಿದ್ದರು. ಸ್ವಾಮೀಜಿಯ ಕೋಣೆಗೆ ಹೋದಾಗ ಅವರು ಹಣ್ಣುಗಳನ್ನು ಕೊಡುತ್ತಿದ್ದರು. ಅದರಿಂದ ಮತ್ತು ಬರುವಂತಾಗುತ್ತಿತ್ತು. ಬಳಿಕ ಅವರು ಲೈಂಗಿಕ ದೌರ್ಜನ್ಯ ಎಸಗುತ್ತಿದ್ದರು ಎಂದು ದೂರಿನಲ್ಲಿ ತಿಳಿಸಿದ್ದರು.

ಹಾಸ್ಟೆಲ್‌ನಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ಸ್ವಾಮೀಜಿ ಮತ್ತು ವಾರ್ಡನ್‌ ಕಿರುಕುಳ ತಾಳಲಾರದೆ ಅಲ್ಲಿಂದ ತಪ್ಪಿಸಿಕೊಂಡು ಬೆಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಅವರು ಬೆಂಗಳೂರಿನಲ್ಲಿ ಯಾರ ಕೈಗೋ ಸಿಕ್ಕಿ ಪೊಲೀಸರಿಂದ ರಕ್ಷಿಸಲ್ಪಟ್ಟಿದ್ದರು. ಆಗ ಈ ಮಾಹಿತಿ ಮಠದ ಮಾಜಿ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್‌ ಮತ್ತು ಅವರ ಪತ್ನಿ ಸೌಭಾಗ್ಯ ಬಸವರಾಜನ್‌ ಅವರು ಬೆಂಗಳೂರಿನಿಂದ ಚಿತ್ರದುರ್ಗಕ್ಕೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಅವರನ್ನು ಮೈಸೂರಿಗೆ ಕರೆದುಕೊಂಡು ಹೋಗಿ ದೂರು ಕೊಡಿಸಲಾಗಿತ್ತು.

ಒಂದೆರಡು ದಿನಗಳ ಕಾಲ ಈ ವಿಚಾರದಲ್ಲಿ ಚರ್ಚೆಗಳು ನಡೆದವಾದರೂ ಶ್ರೀಗಳ ಬಂಧನ ಆಗಿರಲಿಲ್ಲ. ಆದರೆ ಯಾವಾಗ ಬಂಧನ ಶತಸ್ಸಿದ್ಧ ಎಂದು ಖಾತ್ರಿಯಾಯಿತೋ ಆಗ ಅವರು ತಪ್ಪಿಸಿಕೊಳ್ಳಲು ಯತ್ನಿಸಿದರು. ಅವರನ್ನು ತಡೆದು ಬಂಧಿಸಲಾಯಿತು. ಮುರುಘಾ ಶರಣರನ್ನು 2022ರ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಲಾಗಿತ್ತು. ಬಳಿಕ ಹಲವು ಬಾರಿ ಅವರು ಜಾಮೀನು ಪಡೆಯಲು ಯತ್ನಿಸಿದ್ದರೂ ಚಿತ್ರದುರ್ಗದ ಸತ್ರ ನ್ಯಾಯಾಲಯ ಜಾಮೀನು ನೀಡಿರಲಿಲ್ಲ.

ಇದಕ್ಕೆ ಪ್ರತಿಯಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಎರಡೂ ಕಡೆಯ ವಾದ ವಿವಾದಗಳನ್ನು ಆಲಿಸಿದ ಕೋರ್ಟ್‌ ಆದೇಶವನ್ನು ಕಾದಿರಿಸಲಾಗಿತ್ತು. ಬುಧವಾರ ಕೋರ್ಟ್‌ ತೀರ್ಪನ್ನು ಪ್ರಕಟಿಸಿ ಜಾಮೀನು ನೀಡಿದೆ.

ಪಾಸ್‌ಪೋರ್ಟ್‌ ಸರಂಡರ್‌ಗೆ ಸೂಚನೆ

ಜಾಮೀನು ನೀಡಿದ ಕೋರ್ಟ್‌ ಶ್ರೀಗಳಿಗೆ ಹಲವು ಷರತ್ತುಗಳನ್ನು ವಿಧಿಸಿದೆ. ಇಬ್ಬರು ಪ್ರಭಾವಿ ವ್ಯಕ್ತಿಗಳು ಜಾಮೀನು ನೀಡಬೇಕು, ಎರಡು ಲಕ್ಷ ರೂ. ಶೂರಿಟಿ ನೀಡಬೇಕು, ಸಾಕ್ಷಿಗಳ ಮೇಲೆ ಯಾವುದೇ ಪ್ರಭಾವ ಬೀರುವಂತಿಲ್ಲ, ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಗೆ ಹಾಜರಾಗಬೇಕೆಂದು ಸೂಚನೆ ನೀಡಲಾಗಿದೆ.

Exit mobile version