Site icon Vistara News

Naadageethe row : ಹಾಗಿದ್ದರೆ ಕಿಕ್ಕೇರಿಯವರು ಮರದ ಮೇಲೇರಿ ಜೌನ್‌ಪುರಿ ರಾಗದಲ್ಲಿ ನಾಡಗೀತೆ ಹಾಡಬಹುದಾ?

Naadageethe row

ಬೆಂಗಳೂರು: ರಾಜ್ಯ ಹೈಕೋರ್ಟ್‌ನಲ್ಲಿ (Karnataka High Court) ನಡೆಯುತ್ತಿರುವ ನಾಡಗೀತೆ ವಿವಾದದ (Naadageethe row) ವಿಚಾರಣೆ ಅಂತಿಮವಾಗಿ ಯಾವ ತೀರ್ಮಾನಕ್ಕೆ ಬರುತ್ತದೆ ಎನ್ನುವುದು ಸ್ಪಷ್ಟವಿಲ್ಲ. ಆದರೆ, ಅದು ಸಾಗುತ್ತಿರುವ ದಾರಿ ಮಾತ್ರ ಕುತೂಹಲಕಾರಿಯಾಗಿದೆ! ಶುಕ್ರವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ (Justice Krishna S Dixit) ಅವರ ನೇತೃತ್ವದ ಏಕಸದಸ್ಯ ಪೀಠವು ಹಾಗಿದ್ದರೆ ನಾಡಗೀತೆಯನ್ನು ಯಾರು ಹೇಗೆ ಬೇಕಾದರೂ ಹಾಡಬಹುದೇ ಎಂದು ಕೇಳಿತು. ಅದಕ್ಕೆ ಅದು ಬಳಸಿದ ಉಪಮೆ ಇಂಟ್ರೆಸ್ಟಿಂಗ್‌ ಆಗಿತ್ತು!

“ಸುಗಮ ಸಂಗೀತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ (Kikkeri Krishnamurthy) ತಮ್ಮ ಜಮೀನಿನಲ್ಲಿರುವ ಮರದ ಎತ್ತರದ ಟೊಂಗೆಯ ತುದಿಯಲ್ಲಿ ಕುಳಿತು ‘ಜಯಭಾರತ ಜನನಿಯ ತನುಜಾತೆ’ ನಾಡಗೀತೆಯನ್ನು ಜೌನ್‌ಪುರಿ ರಾಗದಲ್ಲಿ ಹಾಡುತ್ತೇನೆ ಎಂದು ಹೇಳಿದರೆ ಏನು ಮಾಡುವುದು?”- ಎಂದು ನ್ಯಾಯಮೂರ್ತಿಕೃಷ್ಣ ಎಸ್‌. ದೀಕ್ಷಿತ್‌ ಕೇಳಿದರು.

ದಿವಂಗತ ಮೈಸೂರು ಅನಂತಸ್ವಾಮಿ ಸಂಯೋಜಿಸಿದ ಧಾಟಿಯಲ್ಲಿಯೇ ನಾಡಗೀತೆಯನ್ನು 2 ನಿಮಿಷ 30 ಸೆಕೆಂಡ್‌ಗಳಲ್ಲಿ ಹಾಡಬೇಕು ಎಂಬುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ 2022ರ ಸೆಪ್ಟೆಂಬರ್‌ 25ರಂದು ಹೊರಡಿಸಿದ ಆದೇಶವನ್ನು ಪ್ರಶ್ನಿಸಿ ಕಿಕ್ಕೇರಿ ಕೃಷ್ಣಮೂರ್ತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ಕೃಷ್ಣಮೂರ್ತಿ ಪರ ವಕೀಲರನ್ನು ನ್ಯಾಯಪೀಠ ಈ ರೀತಿಯಾಗಿ ಪ್ರಶ್ನಿಸಿತು.

ಕಿಕ್ಕೇರಿ ಕೃಷ್ಣಮೂರ್ತಿ ಪರವಾಗಿ ಕೋರ್ಟ್‌ನಲ್ಲಿದ್ದವರು ಹಿರಿಯ ವಕೀಲ ಅಶೋಕ ಹಾರನಹಳ್ಳಿ. ಅವರು ಜನಸಾಮಾನ್ಯರು ಇಂಥದ್ದೇ ರಾಗದಲ್ಲಿ ಹಾಡಬೇಕು ಎಂಬ ಷರತ್ತು ಸರಿಯಲ್ಲ. ರಾಜ್ಯ ಸರ್ಕಾರ ನಮ್ಮ ಸಂಗೀತದ ಸ್ವಾತಂತ್ರ್ಯವನ್ನು ಕಸಿದುಕೊಂಡಿದೆ. ಹೀಗಾಗಿ, ಸರ್ಕಾರ ಇದರ ಔಚಿತ್ಯವನ್ನು ಮನವರಿಕೆ ಮಾಡಿಕೊಡಬೇಕು ಎಂದು ಕೋರಿದರು.

ಆದೇಶ ಅಧಿಕೃತ ಕಾರ್ಯಕ್ರಮ, ಸಾರ್ವಜನಿಕ ಸಮಾರಂಭಕ್ಕೆ ಸೀಮಿತ

ಇದಕ್ಕೆ ಉತ್ತರಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎಸ್‌ ಎ ಅಹ್ಮದ್‌ ಅವರು ಸರ್ಕಾರ ಈ ಆದೇಶವನ್ನು ಸಂವಿಧಾನದ 162ನೇ ವಿಧಿಯಡಿ ತನಗಿರುವ ಪರಮಾಧಿಕಾರವನ್ನು ಬಳಸಿ ಇಂತಹುದೇ ರಾಗದಲ್ಲಿ ಹಾಡುವಂತೆ ನಿರ್ಬಂಧ ವಿಧಿಸಿದೆ. ಇದನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮಗಳು ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಮೈಸೂರು ಅನಂತಸ್ವಾಮಿ ಸಂಯೋಜಿಸದ ಧಾಟಿಯಲ್ಲೇ ಹಾಡುವಂತೆ ಆದೇಶಿಸಲಾಗಿದೆ ಎಂದು ಸಮರ್ಥಿಸಿಕೊಂಡರು.

ಹಾಗಿದ್ದರೆ ಮನಸ್ಸಿಗೆ ಬಂದ ಹಾಗೆ ಹಾಡಲು ಸರ್ಕಾರದ ನಿರ್ಬಂಧ ಸರಿಯೇ?

ಆದರೆ, ಪೀಠ ಇದನ್ನು ಒಪ್ಪಲಿಲ್ಲ. ಈ ಪ್ರಕರಣದಲ್ಲಿ ಅರ್ಜಿದಾರರು ಎತ್ತಿರುವ ಪ್ರಶ್ನೆಯ ಅನುಸಾರ ಅವರ ತಮ್ಮ ಮನಸ್ಸಿಗೆ ಬಂದ ರಾಗದಲ್ಲಿ ಹಾಡಲು ನೀವೇಕೆ ನಿರ್ಬಂಧಿಸಿದ್ದೀರಿ ಎಂಬುದೇ ಆಗಿದೆ. ಅಂತೆಯೇ, ಸರ್ಕಾರ ಇಂತಹ ಆದೇಶ ಹೊರಡಿಸುವಾಗ ಅದಕ್ಕಿರುವ ಶಾಸನಾತ್ಮಕ ಅಧಿಕಾರಗಳೇನು ಮತ್ತು ಯಾರು, ಯಾವಾಗ ಎಂತಹ ಸಂದರ್ಭಗಳಲ್ಲಿ ನಿಮ್ಮ ಈ ನಿ‌ರ್ಬಂಧ ಪಾಲಿಸಬೇಕು ಎಂಬುದನ್ನು ಪೀಠಕ್ಕೆ ಖಚಿತವಾಗಿ ವಿವರಿಸಿ ಎಂದು ನಿರ್ದೇಶಿಸಿತು.

ಬೇರೆ ರಾಜ್ಯಗಳಲ್ಲೂ ನಾಡಗೀತೆಗೆ ರಾಗದ ನಿರ್ಬಂಧ ಇದೆಯೇ?

ಈ ನಡುವೆ, ಮಧ್ಯಂತರ ಅರ್ಜಿದಾರರಾದ ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮೃತ್ಯುಂಜಯ ದೊಡ್ಡವಾಡ ಪರ ವಕೀಲರಾದ ಸಿ ಎಚ್‌ ಹನುಮಂತರಾಯ ಅವರು ನಾಡಗೀತೆಗಳನ್ನು 1919ರಲ್ಲಿ ಒಡಿಶಾದಲ್ಲಿ, 1965ರಲ್ಲಿ ಆಂಧ್ರಪ್ರದೇಶ, 2004ರಲ್ಲಿ ಕರ್ನಾಟಕ ನಂತರ ಏಳು ರಾಜ್ಯಗಳಲ್ಲಿ ಅಳವಡಿಸಿಕೊಳ್ಳಲಾಗಿದೆ. ಇನ್ನೈದು ರಾಜ್ಯಗಳಲ್ಲಿ ಅನಧಿಕೃತವಾಗಿ ಶಾಲಾ ಕಾಲೇಜು, ರಾಜ್ಯ ಸರ್ಕಾರ ಪ್ರಾಯೋಜಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಾಡಗೀತೆಯನ್ನು ಹಾಡುವ ಪರಿಪಾಠ ಇದೆ ಎಂದರು. ಆದರೆ, ಯಾವ ರಾಜ್ಯದಲ್ಲೂ ನಾಡಗೀತೆಯನ್ನು ಇಂಥದ್ದೇ ಧಾಟಿಯಲ್ಲಿ ಹಾಡಬೇಕೆಂಬುದಕ್ಕೆ ಕೈಗೊಳ್ಳಲಾದ ನಿರ್ಣಯದ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಲಾಗಿಲ್ಲ. ದೇಶದಲ್ಲೇ ಮೊಟ್ಟ ಮೊದಲ ಬಾರಿಗೆ ಇಂತಹುದೊಂದು ಸಂದಿಗ್ಧವನ್ನು ಹೊಂದಿದ ಪ್ರಕರಣ ಇದಾಗಿದೆ. ಆದ್ದರಿಂದ, ಇದಕ್ಕೆ ತುಂಬಾ ಮಹತ್ವವಿದೆ ಎಂದು ವಿವರಿಸಿದರು. ಮಧ್ಯಂತರ ಅರ್ಜಿದಾರರ ಪರ ವಕೀಲ ಎಚ್‌ ಸುನಿಲ್‌ ಕುಮಾರ್‌ ವಕಾಲತ್ತು ವಹಿಸಿದ್ದಾರೆ.

ಮುಂದಿನ ವಿವರಣೆ ಸರ್ಕಾರ ಮೆಮೊ ಕೊಟ್ಟ ಬಳಿಕ

ವಾದ–ಪ್ರತಿವಾದಿ ಆಲಿಸಿದ ಪೀಠವು ಸರ್ಕಾರ ತಾನು ಯಾವಾಗ ಈ ಪ್ರಕರಣದಲ್ಲಿ ವಾದ ಮಂಡಿಸಲು ಸನ್ನದ್ಧ ಎಂಬುದನ್ನು ಪೀಠಕ್ಕೆ ಮುಂಚಿತವಾಗಿ ಮೆಮೊ ಸಲ್ಲಿಸಿದ ನಂತರ ವಿಚಾರಣೆ ಮುಂದುವರಿಸಲಾಗುವುದು ಎಂದು ಹೇಳಿತು. ಅಂದರೆ, ಇನ್ನು ಸರ್ಕಾರ ತಾನಾಗಿ ಈ ವಿಚಾರಣೆಗೆ ತಾನು ಸಿದ್ಧ ಎಂದು ಹೇಳಬೇಕು. ಬಳಿಕವೇ ನಡೆಯಲಿದೆ. ಅಲ್ಲಿಯವರೆಗೆ ಅಲ್ಪ ವಿರಾಮ.

Exit mobile version