ಬೆಂಗಳೂರು: 2023ರ ಡಿಸೆಂಬರ್ 11ರಂದು ಬೆಳಗಾವಿ ಜಿಲ್ಲೆಯ (Belagavi News) ಹೊಸ ವಂಟಮುರಿ ಗ್ರಾಮದಲ್ಲಿ (Vantamuri Case) ಮಹಿಳೆಯೊಬ್ಬರನ್ನು ಮನೆಯಿಂದ ಹೊರಗೆಳೆದು ತಂದು ಬೆತ್ತಲೆಯಾಗಿ ಮೆರವಣಿಗೆ (Naked parade) ನಡೆಸಿ ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿದ ಭೀಕರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಬುಧವಾರ ಸುಮಾರು 1,100 ಪುಟಗಳ ಆರೋಪ ಪಟ್ಟಿಯನ್ನು (Chargesheet by CID) ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಿಐಡಿ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಕುಮಾರ್ ಅವರು ಬೆಳಗಾವಿಯ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮೋಹನ್ ಪ್ರಭು ಅವರ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆ ಮಾಡಿದರು.
ಸಂತ್ರಸ್ತ ಮಹಿಳೆಯ ಪುತ್ರ ಅದೇ ಗ್ರಾಮದ ಯುವತಿಯನ್ನು ಪ್ರೇಮಿಸಿ ಆಕೆಯೊಂದಿಗೆ ಪರಾರಿಯಾಗಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಯುವಕನ ತಾಯಿಯನ್ನು ಯುವತಿಯ ಕಡೆಯವರು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ್ದರು. ಈ ಸಂಬಂಧ ಬೆಳಗಾವಿಯ ಕಾಕತಿ ಠಾಣೆಯಲ್ಲಿ 2023ರ ಡಿಸೆಂಬರ್ 11ರಂದು ಎಫ್‌ಐಆರ್ ದಾಖಲಾಗಿತ್ತು.
ಪ್ರಕರಣದಲ್ಲಿ 13 ಆರೋಪಿಗಳನ್ನು ಬಂಧಿಸಲಾಗಿದ್ದು, ಒಬ್ಬ ಬಾಲಾಪರಾಧಿಯಾಗಿದ್ದಾನೆ. ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 109, 114, 117, 143, 147, 148, 307, 323, 324, 326, 341, 342, 353, 354, 354(b), 355, 392, 427, 452, 504, 506 ಜೊತೆಗೆ 149, 37 ಮತ್ತು 34, ಆಸ್ತಿ ನಾಶ ಮತ್ತು ನಷ್ಟ ತಡೆ ಕಾಯಿದೆ 2(ಎ) ಅಡಿ ಪ್ರಕರಣ ದಾಖಲಿಸಲಾಗಿತ್ತು. ಬಾಲಾಪರಾಧಿಯ ವಿರುದ್ಧ ಇಂದು ಬಾಲನ್ಯಾಯ ಮಂಡಳಿಯಲ್ಲಿ ಆರೋಪ ಪಟ್ಟಿ ಸಲ್ಲಿಕೆ ಮಾಡಲಾಗಿದೆ.
ಈ ಪ್ರಕರಣದ ಮಾಧ್ಯಮ ವರದಿ ಆಧಾರಿಸಿ ಕರ್ನಾಟಕ ಹೈಕೋರ್ಟ್ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸಿತ್ತು. ಬಳಿಕ ರಾಜ್ಯ ಸರ್ಕಾರ ಕೂಡಾ ಸಿಐಡಿ ತನಿಖೆಗೆ ಆದೇಶ ನೀಡಿತ್ತು.
ಇದನ್ನೂ ಓದಿ : Naked Parade : ಜ.1ರೊಳಗೆ ಸಂತ್ರಸ್ತ ಮಹಿಳೆಗೆ ಭೂಮಿ ಹಸ್ತಾಂತರ ; ಹೈಕೋರ್ಟ್ ಗಡುವು
ಏನಿದು ಭಯಾನಕ ವಂಟಮುರಿ ಪ್ರಕರಣ?
ವಂಟಮುರಿ ಗ್ರಾಮದ ದುಂಡಪ್ಪ ಅಶೋಕ ನಾಯಕ್ ಹಾಗೂ ಅದೇ ಗ್ರಾಮದ ಪ್ರಿಯಾಂಕಾ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಗೆ ಪೋಷಕರ ವಿರೋಧ ವ್ಯಕ್ತವಾಗಿತ್ತು. ಯುವತಿಯ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಲ್ಲದೇ ಅಂದೇ ದಿನಾಂಕ ಮದುವೆ ನಿಗದಿ ಮಾಡಲು ಯುವತಿಯ ಕುಟುಂಬಸ್ಥರು ಸಿದ್ಧತೆ ಮಾಡಿಕೊಂಡಿದ್ದರು.
ಮನೆಯಲ್ಲಿ ಮದುವೆ ಸಂಭ್ರಮಕ್ಕೆ ಸಿದ್ಧತೆಯಾಗುತ್ತಿದ್ದರೆ ಇತ್ತ ಯುವತಿ ಪ್ರೀತಿಸಿದ ಯುವಕ ದುಂಡಪ್ಪ ಜೊತೆ ರಾತ್ರೋರಾತ್ರಿ ಮನೆ ಬಿಟ್ಟು ಊರಿಂದ ಪರಾರಿಯಾಗಿದ್ದಳು. ಮಗಳು ಮನೆ ಬಿಟ್ಟು ಹೋಗಿರುವ ಕಾರಣ ರೊಚ್ಚಿಗೆದ್ದ ಯುವತಿಯ ಕುಟುಂಬಸ್ಥರು ಯುವಕನ ಮನೆಯವರನ್ನು ಟಾರ್ಗೆಟ್ ಮಾಡಿದ್ದಾರೆ.
ರೊಚ್ಚಿಗೆದ್ದ ಯುವತಿ ಕುಟುಂಬಸ್ಥರು ಯುವಕನ ಮನೆ ಮೇಲೆ ದಾಳಿ ನಡೆಸಿ ರಾತ್ರೋರಾತ್ರಿ ಮನೆಯನ್ನು ಸಂಪೂರ್ಣ ಧ್ವಂಸಗೊಳಿಸಿದ್ದರು. ಅಲ್ಲದೇ ಯುವಕನ ಅಜ್ಜಿ ಮತ್ತು ತಾಯಿಯ ಮೇಲೆ ಹಲ್ಲೆ ನಡೆಸಿ, ತಾಯಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದರು. ಬಳಿಕ ಗ್ರಾಮದಲ್ಲಿನ ಕಂಬಕ್ಕೆ ಕಟ್ಟಿ ಅಮಾನವೀಯವಾಗಿ ಹಲ್ಲೆ ಮಾಡಿದ್ದರು.
ಹಲ್ಲೆ ನಡೆದ ದಿನವಾದ ಡಿಸೆಂಬರ್ 11ರಂದು ಪ್ರೇಮಿಗಳು ದೇವಸ್ಥಾನದಲ್ಲಿ ಮದುವೆಯಾಗಿದ್ದರು. ಜನವರಿ 30ರಂದು ಅವರ ಮದುವೆಯನ್ನು ಬೆಳಗಾವಿಯ ಉದ್ಯಮ ಭಾಗದ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ್ದಾರೆ.
ಈ ಘಟನೆ ರಾಜ್ಯಾದ್ಯಂತ ಭಾರಿ ಸದ್ದು ಮಾಡಿತ್ತು. ರಾಜ್ಯ ಹೈಕೋರ್ಟ್ ಈ ಪ್ರಕರಣದಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದೆ. ಸಂತ್ರಸ್ತ ಮಹಿಳೆಗೆ ನೀಡಬೇಕಾದ ಸವಲತ್ತುಗಳನ್ನು ಕೂಡಾ ಕಾಲಮಿತಿಯೊಳಗೆ ನೀಡುವಂತೆ ಅದು ಸೂಚನೆ ನೀಡಿದೆ.