Site icon Vistara News

Naming Game : ಬದುಕಿರುವ ರಾಜಕಾರಣಿಗಳ ಹೆಸರನ್ನು ಕಟ್ಟಡ, ಪಾರ್ಕ್‌ಗೆ ಇಡಬಹುದೇ?; ಕೋರ್ಟ್‌ನಲ್ಲಿ ವಿಚಾರಣೆ

Naming Game Shamanur SS Mallikarjun

ಬೆಂಗಳೂರು: ದೇಶದಲ್ಲಿ ಈ ಹಿಂದೆ ಆಡಳಿತ ನಡೆಸಿದ ರಾಜಕಾರಣಿಗಳ ಹೆಸರನ್ನು ಕಟ್ಟಡಗಳಿಗೆ, ಪಾರ್ಕ್‌ ಮತ್ತಿತರ ಸಾರ್ವಜನಿಕ ಸ್ಥಳಗಳಿಗೆ (Buildings and Public Places) ನೀಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ (Naming Game). ದೇಶದಲ್ಲಿ ಬಹುಪಾಲು ಪ್ರಮುಖ ಸಂಸ್ಥೆಗಳು ರಾಜಕಾರಣಿಗಳ ಹೆಸರಿನಲ್ಲಿ ಇರುವುದಕ್ಕೆ ಇದೇ ಕಾರಣ. ಹಾಗಿದ್ದರೆ ಇದು ಸರಿಯೇ ಎಂಬುದಕ್ಕೆ ಸಂಬಂಧಿಸಿ ಒಂದು ಕೋರ್ಟ್‌ ವಿಚಾರಣೆ (Karnataka High court) ಆರಂಭಗೊಂಡಿದೆ.

ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಸರ್ಕಾರಿ ಕಟ್ಟಡ ಹಾಗೂ ಇನ್ನಿತರ ಸ್ಥಳಗಳಿಗೆ ಬದುಕಿರುವ ರಾಜಕಾರಣಿಗಳ ನಾಮಕರಣ ಮಾಡುವುದನ್ನು ಆಕ್ಷೇಪಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಹೈಕೋರ್ಟ್‌ನಲ್ಲಿ ವಿಚಾರಣೆ ಶುರುವಾಗಿದ್ದು ನೋಟಿಸ್‌ಗಳು ಜಾರಿಯಾಗಿವೆ.

ಈ ಪ್ರಕರಣದಲ್ಲಿ ರಾಜ್ಯದ ಹಾಲಿ ಸಚಿವರಾಗಿರುವ ಎಸ್‌ ಎಸ್‌ಮಲ್ಲಿಕಾರ್ಜುನ್ (SS Mallikarjun) ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರಿಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ನೋಟಿಸ್‌ ಜಾರಿಗೊಳಿಸಿದೆ. ಇದಕ್ಕೆ ಕಾರಣ ದಾವಣಗೆರೆಯ ಪುಣೆ-ಬೆಂಗಳೂರು ರಸ್ತೆಯಲ್ಲಿ ನಿರ್ಮಿಸಲಾಗಿರುವ ಹಳೆಯ ಬಸ್ ನಿಲ್ದಾಣಕ್ಕೆ ಶಾಮನೂರು ಶಿವಶಂಕರಪ್ಪ ಬಸ್ ನಿಲ್ದಾಣ ಎಂದು ಹೆಸರಿಟ್ಟಿರುವುದು. ದಾವಣಗೆರೆ ನಗರದ ಕುಡಿಯುವ ನೀರಿಗಾಗಿ ಬಳಸಲಾಗುತ್ತಿರುವ ಮತ್ತು ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ನಿರ್ಮಿಸಿ ನಿರ್ವಹಿಸಲಾಗುತ್ತಿರುವ ಕುಂದವಾಡ ಕೆರೆಯ ಹೆಸರನ್ನು ಎಸ್ ಎಸ್ ಮಲ್ಲಿಕಾರ್ಜುನ ಸಾಗರ ಎಂದು ಇರಿಸಿರುವುದು.

ಇಷ್ಟೇ ಅಲ್ಲ ಜಿಲ್ಲಾ ಪಂಚಾಯ್ತಿ ಸಭಾಂಗಣಕ್ಕೆ ಎಸ್ ಎಸ್ ಮಲ್ಲಿಕಾರ್ಜುನ ಸಭಾಂಗಣ ಎಂದೂ ಮಹಾನಗರ ಪಾಲಿಕೆಯ ಸಭಾಂಗಣಕ್ಕೆ ಡಾ. ಶಾಮನೂರು ಶಿವಶಂಕರಪ್ಪ ಸಭಾಂಗಣ ಎಂದೂ ನಾಮಕರಣ ಮಾಡಲಾಗಿದೆ. ನಗರದಲ್ಲಿನ ಪ್ರಮುಖ ಪಾರ್ಕ್‌ವೊಂದಕ್ಕೆ ಡಾ.ಶಾಮನೂರು ಶಿವಶಂಕರಪ್ಪ ಉದ್ಯಾನವನ ಎಂದು ಹೆಸರಿಡಲಾಗಿದೆ. ಹುಡ್ಕೊ ಬಡಾವಣೆಗೆ ಎಸ್‌ಎಸ್‌ಎಂ ನಗರ (ಎಸ್‌ ಎಸ್‌ ಮಲ್ಲಿಕಾರ್ಜುನ ನಗರ) ಎಂದು ಹೆಸರಿಡಲಾಗಿದೆ.

ಈ ರೀತಿ ಜೀವಂತ ಇರುವ ವ್ಯಕ್ತಿಗಳ ಹೆಸರನ್ನು ಇಡುವುದು ಹೈಕೋರ್ಟ್‌ ಈ ಹಿಂದೆ ನೀಡಿದ ಆದೇಶಗಳಿಗೆ ವಿರುದ್ಧವಾಗಿವೆ ಎಂದು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ವಿವರಿಸಲಾಗಿದೆ.

ದಾವಣಗೆರೆಯ ವಕೀಲ ಎ ಸಿ ರಾಘವೇಂದ್ರ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಇದನ್ನೂ ಓದಿ : Hookah Bar : ಹುಕ್ಕಾ, ಹುಕ್ಕಾಬಾರ್‌ ನಿಷೇಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ? ತೀರ್ಪು ಕಾಯ್ದಿರಿಸಿದ ಕೋರ್ಟ್‌

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಎಂ ವಿನೋದ್ ಕುಮಾರ್ ಅವರು ದಾವಣಗೆರೆ ನಗರದ ವಿವಿಧೆಡೆ ಸರ್ಕಾರದ ಅನುದಾನದಲ್ಲಿ ನಿರ್ಮಿಸಲಾದ ಅನೇಕ ಕಟ್ಟಡಗಳು, ಪಾರ್ಕ್, ಬಸ್ ನಿಲ್ದಾಣ, ರಸ್ತೆಗಳಿಗೆ ಶಾಮನೂರು ಶಿವಶಂಕರಪ್ಪ ಹಾಗೂ ಎಸ್ ಎಸ್ ಮಲ್ಲಿಕಾರ್ಜುನ ಅವರ ಹೆಸರುಗಳನ್ನು ಇರಿಸಲಾಗಿದ್ದು ಇದನ್ನು ತೆರವುಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದರು.

ಚನ್ನಗಿರಿ ಕ್ಷೇತ್ರದ ಮಾಜಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರ ಹೆಸರನ್ನು ತಾಲ್ಲೂಕು ಕ್ರೀಡಾಂಗಣಕ್ಕೆ ಇರಿಸಿದ್ದನ್ನು ಆಕ್ಷೇಪಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಹೈಕೋರ್ಟ್ 2012ರಲ್ಲಿ ಆದೇಶ ನೀಡಿದ್ದು, ಮಾಡಾಳ್‌ ವಿರೂಪಾಕ್ಷಪ್ಪ ಆಟದ ಮೈದಾನ ಎಂಬುದರ ಬದಲಿಗೆ ತಾಲ್ಲೂಕು ಆಟದ ಮೈದಾನ ಎಂದು ನಾಮಕರಣ ಮಾಡಲಾಗಿತ್ತು ಎಂಬ ಅಂಶವನ್ನು ಪೀಠದ ಗಮನಕ್ಕೆ ತಂದರು.

ವಾದ ಆಲಿಸಿದ ಪೀಠವು ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ದಾವಣಗೆರೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತ, ಜಿಲ್ಲಾ ಪಂಚಾಯ್ತಿ ಸಿಇಒ ಸೇರಿದಂತೆ ಪ್ರಕರಣದ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

Exit mobile version