Site icon Vistara News

ಹಿಂದುಗಳನ್ನು ಅಲ್ಪಸಂಖ್ಯಾತ ಎಂದು ಘೋಷಿಸುವುದು ನಮ್ಮ ಕೆಲಸವಲ್ಲ: ಸುಪ್ರೀಂ ಕೋರ್ಟ್‌

supreme court

ನವ ದೆಹಲಿ: ಇತರ ಸಮುದಾಯಗಳ ಜನತೆ ಅಧಿಕವಾಗಿರುವ ರಾಜ್ಯಗಳಲ್ಲಿ ಹಿಂದುಗಳನ್ನು ಅಲ್ಪಸಂಖ್ಯಾತರೆಂದು ಘೋಷಿಸುವುದು ನಮ್ಮ ಕೆಲಸವಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಅಲ್ಪಸಂಖ್ಯಾತ ಸ್ಥಾನಮಾನದ ಘೋಷಣೆಯಲ್ಲಿ ಹಲವಾರು ಐತಿಹಾಸಿಕ ಅಂಶಗಳು, ಅಂಕಿಸಂಖ್ಯೆಗಳು ಕೆಲಸ ಮಾಡುತ್ತವೆ, ಹೀಗಾಗಿ ಇದು ನ್ಯಾಯಾಂಗದ ಪರಿಧಿಯಿಂದ ಆಚೆಗಿದೆ ಎಂದು ನ್ಯಾಯಮೂರ್ತಿಗಳಾದ ಉದಯ್‌ ಯು. ಲಲಿತ್‌ ಹಾಗೂ ಎಸ್.ರವೀಂದ್ರ ಭಟ್‌ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.

ಅಲ್ಪಸಂಖ್ಯಾತ ಸ್ಥಾನಮಾನ ಘೋಷಿಸುವುದು ಕೋರ್ಟ್‌ಗಳಿಗೆ ಸಂಬಂಧಿಸಿದ್ದಲ್ಲ. ಇದನ್ನು ರಾಜ್ಯವಾರು ಪ್ರಕರಣ ನೋಡಿ ಪರಿಶೀಲಿಸಬೇಕು. ಹಕ್ಕುಗಳ ನಿರಾಕರಣೆಗೆ ಸಂಬಂಧಿಸಿ ಬಲವಾದ ಸಾಕ್ಷ್ಯಾಧಾರಗಳಿದ್ದರೆ ಅದನ್ನು ನಮಗೆ ತೋರಿಸಬಹುದು. ಹೊರತುಪಡಿಸಿ ಸಾರಾಸಗಟಾಗಿ ಸ್ಥಾನಮಾನ ಘೋಷಣೆ ಸಾಧ್ಯವಿಲ್ಲ ಎಂದು ಪೀಠ ಹೇಳಿತು.

ಈ ಕುರಿತು ನಾಗರಿಕ ಹಿತಾಸಕ್ತಿ ಅರ್ಜಿಯನ್ನು ಜೂನ್‌ನಲ್ಲಿ ಸಲ್ಲಿಸಲಾಗಿತ್ತು. ಕ್ರೈಸ್ತರು, ಮುಸ್ಲಿಮರು, ಸಿಕ್ಖ್‌, ಬೌದ್ಧರು, ಪಾರ್ಸಿಗಳು ಹಾಗೂ ಜೈನರಿಗೆ ನೀಡಲಾಗಿರುವ ಅಲ್ಪಸಂಖ್ಯಾತ ಸ್ಥಾನಮಾನ ಹಾಗೂ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ ಕಾಯಿದೆ-1992 ಮತ್ತು ಎನ್‌ಸಿಎಂ ಶೈಕ್ಷಣಿಕ ಸಂಸ್ಥೆಗಳ ಕಾಯಿದೆ-2004ರ ಅಡಿಯಲ್ಲಿ ಅಲ್ಪಸಂಖ್ಯಾತರಿಗೆ ಲಭ್ಯವಿರುವ ಶೈಕ್ಷಣೀಕ ಸಂಸ್ಥೆಗಳ ಸ್ಥಾಪನೆಯ ಹಕ್ಕುಗಳನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲಾಗಿತ್ತು. ದೇವಿಕಂಡನ್‌ ಠಾಕುರ್‌ಜಿ ಎಂಬವರು ಅರ್ಜಿ ಸಲ್ಲಿಸಿದ್ದರು.

1957ರಿಂದಲೇ ಈ ಬಗ್ಗೆ ಚರ್ಚೆ ಚಾಲ್ತಿಯಲ್ಲಿದೆ. ಇದನ್ನು ರಾಜ್ಯವಾರು ಪರಿಹರಿಸಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಈ ಹಿಂದೆಯೂ ಹೇಳಿದೆ. ಈಗ ಯಾಕೆ ಈ ಪ್ರಶ್ನೆಯನ್ನು ಎತ್ತುತ್ತಿದ್ದೀರಿ ಎಂದು ಕೋರ್ಟ್‌ ಪ್ರಶ್ನಿಸಿತು. 1957ರಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪಿನ ಪ್ರಕಾರ ಆಯಾ ರಾಜ್ಯದ ಜನಸಂಖ್ಯೆಯನ್ನನುಸರಿಸಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಬೇಕು. ʼʼಹಿಂದುಗಳು ಎಲ್ಲಿ ಅಲ್ಪಸಂಖ್ಯಾತರಾಗಿದ್ದಾರೆ ಎಂದು ನೀವು ದಾಖಲೆ ಸಹಿತ ತೋರಿಸಿದರೆ ನಾವು ಆ ಬಗೆಗೆ ಏನಾದರೂ ನಿರ್ಣಯ ತೆಗೆದುಕೊಳ್ಳಲು ಸಾಧ್ಯ. ಆದರೆ ಜನರಲ್‌ ಆಗಿ ಏನೂ ಹೇಳಲು ಸಾಧ್ಯವಿಲ್ಲʼʼ ಎಂದು ಕೋರ್ಟ್‌ ಹೇಳಿದೆ.

ಇದನ್ನೂ ಓದಿ: IBPS PO Recruitment 2022 | ಬ್ಯಾಂಕ್‌ಗಳ 6,432 ಪ್ರೊಬೆಷನರಿ ಆಫೀಸರ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ಹಿಂದೂಗಳು ಲಡಾಖ್‌ನಲ್ಲಿ ಕೇವಲ 1%, ಮಿಜೋರಾಂನಲ್ಲಿ 2.75%, ಲಕ್ಷದ್ವೀಪದಲ್ಲಿ 2.77%, ಜಮ್ಮು ಮತ್ತು ಕಾಶ್ಮೀರದಲ್ಲಿ 4%, ನಾಗಾಲ್ಯಾಂಡ್‌ನಲ್ಲಿ 8.74%, ಮೇಘಾಲಯದಲ್ಲಿ 11.52%, ಅರುಣಾಚಲ ಪ್ರದೇಶದಲ್ಲಿ 29%, ಪಂಜಾಬ್‌ನಲ್ಲಿ 38.49%, ಮತ್ತು ಮಣಿಪುರದಲ್ಲಿ 41.29% ಮಾತ್ರ ಇದ್ದಾರೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಎನ್‌ಎಂಸಿ (ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗ) ಮತ್ತು ಅಲ್ಪಸಂಖ್ಯಾತ ಶಿಕ್ಷಣ ಆಯೋಗದ ರಚನೆಯನ್ನೂ ಈ ಅರ್ಜಿ ಪ್ರಶ್ನಿಸಿದ್ದು, ಕೇಂದ್ರವು ಈ ಸಂಸ್ಥೆಗಳನ್ನು “ಒಡೆದು ಆಳಲು” ರಚಿಸಿದೆ ಎಂದು ವಾದಿಸಿದ್ದಾರೆ.

ಮೇ ತಿಂಗಳಲ್ಲಿ ನೀಡಿದ ಆದೇಶದ ಪ್ರಕಾರ, ಈ ವಿಚಾರದಲ್ಲಿ ಎಲ್ಲ ಕಕ್ಷಿಗಳನ್ನು ಸಮಾಲೋಚಿಸಲು ಮತ್ತು ರಾಜ್ಯದೊಳಗೆ ಜನಸಂಖ್ಯೆಯ ಆಧಾರದ ಮೇಲೆ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬಹುದೇ ಎಂಬುದರ ಕುರಿತು ವರದಿಯನ್ನು ಸಲ್ಲಿಸಲು ಆಗಸ್ಟ್ 30 ರವರೆಗೆ ಕೇಂದ್ರಕ್ಕೆ ಅವಕಾಶವನ್ನು ನ್ಯಾಯಮೂರ್ತಿ ಕೌಲ್ ಅವರ ಪೀಠ ನೀಡಿದೆ. ಇತರ ಸಮುದಾಯಗಳಿಗಿಂತ ಸಂಖ್ಯೆ ಕಡಿಮೆ ಇರುವ ರಾಜ್ಯಗಳಲ್ಲಿ ಹಿಂದೂಗಳಿಗೆ ಅಲ್ಪಸಂಖ್ಯಾತ ಸ್ಥಾನಮಾನವನ್ನು ನೀಡಬಹುದೇ ಎಂದು ಪರಿಶೀಲಿಸಲು ರಾಜ್ಯಗಳೊಂದಿಗೆ ವಿಶಾಲ ಸಮಾಲೋಚನೆ ಪ್ರಾರಂಭಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.

ಇದನ್ನೂ ಓದಿ: ಮೋದಿ ಅವಧಿಯಲ್ಲಿ ಸರ್ಕಾರಿ ಸೇವೆಗೆ ಅತಿ ಹೆಚ್ಚು ಅಲ್ಪಸಂಖ್ಯಾತರ ಸೇರ್ಪಡೆ: ಅಂಕಿ ಅಂಶ ಮುಂದಿಟ್ಟ ಕೇಂದ್ರ ಸಚಿವ ನಕ್ವಿ

Exit mobile version