ಬೆಂಗಳೂರು: ಕರ್ನಾಟಕ ಹೈಕೋರ್ಟ್ (Karnataka High Court) ಮುಖ್ಯ ನ್ಯಾಯಮೂರ್ತಿಯಾಗಿ (Chief Justice of Karnataka High Court) ಗುಜರಾತ್ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಗಳಾಗಿರುವ ಎನ್.ವಿ ಅಂಜಾರಿಯಾ (NV Anjaria) ಅವರನ್ನು ನೇಮಕ ಮಾಡಲಾಗಿದೆ. ಸುಪ್ರೀಂ ಕೋರ್ಟ್ ಕೊಲಿಜಿಯಂ (Supreme Court Collegium) ಬುಧವಾರ ಈ ಶಿಫಾರಸು ಮಾಡಿದ್ದು, ಸದ್ಯವೇ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪಿ.ಎಸ್ ದಿನೇಶ್ ಕುಮಾರ್ (PS Dinesh Kumar) ಅವರು ಫೆಬ್ರವರಿ 24ರಂದು ನಿವೃತ್ತರಾಗಲಿದ್ದಾರೆ. ಅವರ ಸ್ಥಾನವನ್ನು ಅಂಜಾರಿಯಾ ತುಂಬಲಿದ್ದಾರೆ.
ನ್ಯಾ. ಅಂಜಾರಿಯಾ ಅವರು 2011ರ ನವೆಂಬರ್ 21ರಂದು ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಹೈಕೋರ್ಟ್ ನ್ಯಾಯಾಧೀಶರಾಗಿ ಬಡ್ತಿ ಪಡೆಯುವ ಮೊದಲು, ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್, ಸಾಂವಿಧಾನಿಕ, ಕಂಪೆನಿ ಕಾನೂನು, ಕಾರ್ಮಿಕ ಮತ್ತು ಸೇವಾ ವಿಷಯಗಳಲ್ಲಿ ವಕೀಲಿಕೆ ಮಾಡಿದ್ದರು ಮತ್ತು ಸಿವಿಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಅವರು ಪರಿಣತಿ ಹೊಂದಿದ್ದಾರೆ.
“ನ್ಯಾ. ಅಂಜಾರಿಯಾ ಅವರ ಹೆಸರನ್ನು ಶಿಫಾರಸ್ಸು ಮಾಡುವಾಗ, ಕೊಲಿಜಿಯಂ ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳಲ್ಲಿ, ನ್ಯಾಯಮೂರ್ತಿ ಆಶಿಶ್ ಜೆ ದೇಸಾಯಿ ಅವರು ಪ್ರಸ್ತುತ ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂಬ ಅಂಶವನ್ನು ಗಣನೆಗೆ ತೆಗೆದುಕೊಂಡಿದೆ. ನ್ಯಾ. ದೇಸಾಯಿ ಅವರ ಮಾತೃ ಹೈಕೋರ್ಟ್ ಗುಜರಾತ್ ಹೈಕೋರ್ಟ್ ಆಗಿದೆ. ನ್ಯಾಯಮೂರ್ತಿ ಆಶಿಶ್ ಜೆ ದೇಸಾಯಿ ಅವರು ಜುಲೈ 4, 2024ರಂದು ಅಧಿಕಾರದಿಂದ ನಿವೃತ್ತರಾಗಲಿದ್ದಾರೆ” ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ಎಲ್ಲಾ ಸಂಬಂಧಿತ ಅಂಶಗಳನ್ನು ಗಣನೆಗೆ ತೆಗೆದುಕೊಂಡು, ನ್ಯಾಯಮೂರ್ತಿ ಅಂಜಾರಿಯಾ ಅವರನ್ನು ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ಎಲ್ಲಾ ಅಂಶಗಳಲ್ಲಿ ಸೂಕ್ತ ಎಂದು ಪರಿಗಣಿಸಲಾಗಿದೆ ಎಂದು ಕೊಲಿಜಿಯಂ ಹೇಳಿದೆ.
ಇದನ್ನೂ ಓದಿ : Karnataka High Court : ವೃದ್ಧೆಗೆ ಮಗ, ಮೊಮ್ಮಗಳಿಂದಲೇ ಮೋಸ; ಹೈಕೋರ್ಟ್ ತಪರಾಕಿ
ನ್ಯಾಯಮೂರ್ತಿ ಅಂಜಾರಿಯಾ ಅವರ ಹಿನ್ನೆಲೆ
1965ರ ಮಾರ್ಚ್ 23ರಂದು ಅಹಮದಾಬಾದ್‌ನಲ್ಲಿ ಜನಿಸಿದ ಅಂಜಾರಿಯಾ 1988ರಲ್ಲಿ ಎ.ಎ. ಶಾ ಕಾನೂನು ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದರು. ಆನಂತರ ವಕೀಲಿಕೆ ವೃತ್ತಿ ಕೈಗೊಂಡು ಸಿವಿಲ್, ಸಾಂವಿಧಾನಿಕ, ಕಂಪನಿ, ಕಾಮ್ಕಿ ಮತ್ತು ಸೇವಾ ವಿಷಯಗಳ ವ್ಯಾಜ್ಯಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಅದಕ್ಕೂ ಮುನ್ನ ಅವರು ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್ ಮತ್ತು ಸಾಂವಿಧಾನಿಕ ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. 2011ರ ನವೆಂಬರ್ 21ರಿಂದ ಎನ್.ವಿ. ಅಂಜಾರಿಯಾ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.