ಬೆಂಗಳೂರು: ಯಾವುದೇ ಒಬ್ಬ ಸರ್ಕಾರಿ ಅಧಿಕಾರಿಯನ್ನು ಲಂಚ ಸ್ವೀಕಾರದ (Corruption Case) ಆರೋಪದಲ್ಲಿ ಬಂಧಿಸಬೇಕು ಎಂದಾದರೆ ಲಂಚ ಸ್ವೀಕಾರದ ಬಗ್ಗೆ ದಾಖಲೆ ಇದ್ದರೆ ಸಾಲದು, ಲಂಚ ಕೇಳಿದ್ದಕ್ಕೂ ದಾಖಲೆ ಇರಬೇಕು ಎಂದು ರಾಜ್ಯ ಹೈಕೋರ್ಟ್ (Karnataka High Court) ಅಭಿಪ್ರಾಯಪಟ್ಟಿದೆ. ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ (Retired Sub registrar) ಶ್ರೀಕಾಂತ್ ವಿರುದ್ಧ ಎಸಿಬಿ ಪೊಲೀಸರು (CCB Police raid) ದಾಖಲಿಸಿದ್ದ ಲಂಚ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಹೈಕೋರ್ಟ್‌ನ ಈ ಅಭಿಪ್ರಾಯ ಲಂಚ ಪ್ರಕರಣಗಳ ಹೆಸರಿನಲ್ಲಿ ನಡೆಯುವ ಕೆಲವೊಂದು ದ್ವೇಷ ಸಾಧನೆ, ಅಧಿಕಾರಿಗಳನ್ನು ಸಿಕ್ಕಿಸಿ ಹಾಕುವ ಪ್ರಯತ್ನಗಳಿಗೆ ಕಡಿವಾಣ ಹಾಕುತ್ತದೆ ಎಂದು ಹೇಳಲಾಗಿದೆ. ಅದರ ಜತೆಗೆ ಲಂಚದ ಆರೋಪ ಮಾಡುವಾಗ, ಅಧಿಕಾರಿಗಳು ಬಂಧಿಸುವಾಗ ಇನ್ನಷ್ಟು ಎಚ್ಚರಿಕೆ ವಹಿಸಬೇಕು ಎಂಬುದನ್ನು ಸೂಚಿಸುತ್ತದೆ.
ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಸಂದರ್ಭದಲ್ಲಿ ‘ಬೇಡಿಕೆ ಮತ್ತು ಸ್ವೀಕಾರ’ ಕುರಿತು ಸ್ಪಷ್ಟ ಪುರಾವೆಗಳಿರಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಗದಗದ ನಿವೃತ್ತ ಸಬ್ ರಿಜಿಸ್ಟ್ರಾರ್ ಶ್ರೀಕಾಂತ್ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಲಂಚ ಪ್ರಕರಣವನ್ನು ರದ್ದುಪಡಿಸಿದೆ.
ಏನಿದು ಪ್ರಕರಣ? ಹೈಕೋರ್ಟ್ ಹೀಗೆ ಹೇಳಿದ್ದೇಕೆ?
ಗದಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಿಬ್ಬಂದಿ ಸಾರ್ವಜನಿಕರ ಕೆಲಸ ನಿರ್ವಹಣೆಗಾಗಿ ಲಂಚ ಕೇಳಲಾಗುತ್ತಿದೆ? ಹೀಗಾಗಿ, ಕಚೇರಿಗೆ ಖುದ್ದಾಗಿ ಭೇಟಿ ನೀಡಿ ಸತ್ಯಾಂಶ ಪರಿಶೀಲಿಸಬೇಕು ಹಾಗೂ ಅಗತ್ಯ ಕ್ರಮ ಜರುಗಿಸಬೇಕು ಎಂದು ಕೋರಿ 2019ರಲ್ಲಿ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಡಿವೈಎಸ್‌ಪಿಗೆ ಅನಾಮಧೇಯ ದೂರು ನೀಡಲಾಗಿತ್ತು.
ಈ ಸಂಬಂಧ ಕ್ರಿಮಿನಲ್ ಪ್ರಕರಣ ದಾಖಲಿಸಿಕೊಂಡಿದ್ದ ಎಸಿಬಿ ಪೊಲೀಸರು, ಗದಗ ಸಬ್ ರಿಜಿಸ್ಟ್ರಾರ್ ಕಚೇರಿಗೆ ಭೇಟಿ ನೀಡಿ ಶೋಧಿಸಿದ್ದರು. ಈ ವೇಳೆ ಸಬ್ ರಿಜಿಸ್ಟ್ರಾರ್ ಕೈಯಲ್ಲಿ 9,390 ರೂ.ಗಳು ಇದ್ದವು. ಆ ಹಣ ವಶಪಡಿಸಿಕೊಂಡಿದ್ದ ಎಸಿಬಿ ಪೊಲೀಸರು, ಶ್ರೀಕಾಂತ್ ವಿರುದ್ಧ ಲಂಚಕ್ಕೆ ಬೇಡಿಕೆಯಿಟ್ಟ ಹಾಗೂ ಲಂಚ ಸ್ವೀಕರಿಸಿದ ಆರೋಪದ ಮೇಲೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣಾ ನ್ಯಾಯಾಲಯ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿತ್ತು. ಈ ನಡುವೆ, ಲಂಚ ಸ್ವೀಕಾರ ಆರೋಪದ ಮೇಲೆ ತಮ್ಮ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಶ್ರೀಕಾಂತ್ ಅವರು ಹೈಕೋರ್ಟ್ ಮೊರೆ ಹೊಕ್ಕಿದ್ದರು.
ಅರ್ಜಿದಾರ ಶ್ರೀಕಾಂತ್ ಹೇಳಿದ್ದೇನು?
ಆ ಮೊತ್ತವನ್ನು ಕಚೇರಿಯಲ್ಲಿ ದಾಖಲೆಗಳ ನೋಂದಣಿಗಾಗಿ ಶುಲ್ಕ ಸ್ವೀಕರಿಸಲಾಗಿತ್ತು. ಆದರೆ, ಇದು ಲಂಚ ಎಂದು ಸುಳ್ಳಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಶ್ರೀಕಾಂತ್ ಹೇಳಿದ್ದರು.
ಹೈಕೋರ್ಟ್ ಹೇಳಿದ್ದೇನು?
- ಭ್ರಷ್ಟಾಚಾರ ತಡೆ ಕಾಯ್ದೆಯಡಿ ಸೆಕ್ಷನ್ 7(ಎ) ಪ್ರಕಾರ ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ದಾಳಿ ನಡೆಸುವಂತಹ ಸಂದರ್ಭದಲ್ಲಿ ಆರೋಪಿ ಸರ್ಕಾರಿ ಅಧಿಕಾರಿ ಮುಂದೆ ಕೆಲಸ ಬಾಕಿಯಿದ್ದು, ಅದನ್ನು ನಿರ್ವಹಿಸಲು ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿರಬೇಕಾಗುತ್ತದೆ ಹಾಗೂ ಲಂಚ ಸ್ವೀಕರಿಸಿರಬೇಕಾಗುತ್ತದೆ. ಆಗಷ್ಟೇ ಆರೋಪ ಸಾಬೀತುಪಡಿಸಲು ಸಾಧ್ಯವಿದೆ.
- ಅರ್ಜಿದಾರರು ಬೇಡಿಕೆಯಿಟ್ಟು ಲಂಚ ಸ್ವೀಕರಿಸಿದ್ದಾರೆ ಎಂಬ ಅಂಶವನ್ನು ಸಾಬೀತುಪಡಿಸುವ ದಾಖಲೆಗಳು ಇಲ್ಲ.
- ಎಸಿಬಿ ಅಧಿಕಾರಿಗಳು ಶೋಧನೆ ವೇಳೆ ಅರ್ಜಿದಾರರು ಬೇಡಿಕೆಯಿಟ್ಟ ಲಂಚ ಸ್ವೀಕರಿಸಿದ ಘಟನೆಯ ಪಂಚನಾಮೆ ಮಾಡಿಲ್ಲ.
- ಹೀಗಾಗಿ ಪ್ರಕರಣ ವಿಚಾರಣೆಗೆ ಮುಂದುವರೆಸಿದರೆ ಕಾನೂನಿನ ದುರ್ಬಳಕೆಯಾಗಲಿದೆ ಎಂದು ಅಭಿಪ್ರಾಯಪಟ್ಟು ಅರ್ಜಿದಾರರ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.