Site icon Vistara News

Public Exam : 5, 8, 9ನೇ ತರಗತಿ ಪಬ್ಲಿಕ್ ಪರೀಕ್ಷೆ ಕಥೆ ಏನು? ಇಂದು ಹೈಕೋರ್ಟ್‌ ಇತ್ಯರ್ಥ ಸಾಧ್ಯತೆ

Public Exam high court

ಬೆಂಗಳೂರು: ರಾಜ್ಯದಲ್ಲಿ 5, 8, 9ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಲಾಗುತ್ತಿರುವ ಬೋರ್ಡ್‌ ಎಕ್ಸಾಂ‌ (Public Exam) ಅರ್ಧದಲ್ಲೇ ನಿಂತಿದೆ. ಶಾಲಾ ಶಿಕ್ಷಣ ಇಲಾಖೆಯು (School Education department) ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳ ಮಕ್ಕಳಿಗೆ ಈ ಬಾರಿ ಪಬ್ಲಿಕ್‌ ಪರೀಕ್ಷೆ ನಡೆಸಲು ಮುಂದಾಗಿತ್ತು. ಅದರ ವಿರುದ್ಧ ಖಾಸಗಿ ಶಾಲೆಗಳ ಒಕ್ಕೂಟ ರುಪ್ಸಾ ಹೈಕೋರ್ಟ್‌ (Karnataka High court) ಮೆಟ್ಟಿಲೇರಿತ್ತು. ಹೈಕೋರ್ಟ್‌ ಪರೀಕ್ಷೆಗೆ ಅನುಮತಿ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದ್ದರಿಂದ ಮಾರ್ಚ್‌ 12ರಂದು ಸುಪ್ರೀಂಕೋರ್ಟ್‌ ಪರೀಕ್ಷೆಗೆ (Supreme Court Stay) ತಡೆ ನೀಡಿದೆ. ವಿವಾದವನ್ನು ಹೈಕೋರ್ಟ್‌ನಲ್ಲೇ ಇತ್ಯರ್ಥಪಡಿಸಲು ಸೂಚಿಸಿದೆ. ಈ ನಡುವೆ ಮಾರ್ಚ್‌ 11ರಿಂದ ಆರಂಭಗೊಂಡ ಪರೀಕ್ಷೆಯನ್ನು ಮಧ್ಯದಲ್ಲೇ ನಿಲ್ಲಿಸಲಾಗಿದೆ. ಹೀಗಾಗಿ ಅತಂತ್ರ ಸ್ಥಿತಿ ನಿರ್ಮಾಣಗೊಂಡಿದೆ.

ರಾಜ್ಯ ಸರ್ಕಾರ ವಿವಾದವನ್ನು ಇತ್ಯರ್ಥಪಡಿಸಲು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬೇಕಾಗಿದೆ. ಆದರೆ, ಅದು ಸಾಧಕ ಬಾಧಕಗಳ ಚರ್ಚೆ ಮಾಡಿ ತೀರ್ಮಾನ ತೆಗೆದುಕೊಳ್ಳಬೇಕಾಗಿದೆ. ಇತ್ತ ಬೋರ್ಡ್‌ ಪರೀಕ್ಷೆಯನ್ನು ರದ್ದುಪಡಿಸಬೇಕು ಎಂದು ಕೋರಿ ರುಪ್ಸಾ ಬೆಂಬಲಿತ ಕೆಲವು ಪೋಷಕರು ಸಲ್ಲಿಸಿದ್ದ ಮೇಲ್ಮನವಿಯನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಬೇಕು ಎಂಬ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಶಿಕ್ಷಣ ಇಲಾಖೆಯ ಸುತ್ತೋಲೆ ರದ್ದತಿ ಕೋರಿದ ಅರ್ಜಿ

ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ 5, 8 ಮತ್ತು 9ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆ ನಡೆಸುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಎರಡು ಸುತ್ತೋಲೆಗಳನ್ನು ರದ್ದುಪಡಿಸಿದ್ದ ಹೈಕೋರ್ಟ್‌ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿತ್ತು. ಅದರ ವಿಚಾರಣೆ ವೇಳೆ ಅನುದಾನ ರಹಿತ ಶಾಲೆಗಳ ಕೆಲ ವಿದ್ಯಾರ್ಥಿಗಳು ಮತ್ತವರ ಪೂಷಕರ ಪರ ವಕೀಲರ ಮೆಮೊ ಸಲ್ಲಿಸಿ, ಸರ್ಕಾರ ಹೊರಡಿಸಿರುವ ಸುತ್ತೋಲೆಯಲ್ಲಿ ದೊಡ್ಡ ಮಟ್ಟದ ಸಾರ್ವಜನಿಕ ಹಿತಾಸಕ್ತಿ ಅಡಗಿದೆ. ಆದ್ದರಿಂದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡಬೇಕು ಎಂದು ನ್ಯಾಯಮೂರ್ತಿಗಳಾದ ಕೆ ಸೋಮಶೇಖರ್‌ ಮತ್ತು ರಾಜೇಶ್‌ ರೈ ಕೆ ಅವರ ನೇತೃತ್ವದ ವಿಭಾಗೀಯ ಪೀಠಕ್ಕೆ ಕೋರಿದರು.

ಈ ಮನವಿಯನ್ನು ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸಂಘ (ರುಪ್ಸಾ) ಪರ ವಕೀಲರು ಬೆಂಬಲಿಸಿದರು. ಬೋರ್ಡ್ ಮಟ್ಟದ ಮೌಲ್ಯಾಂಕನ ಪರೀಕ್ಷೆಗಳನ್ನು ಮುಂದೂಡಿ ಮಾರ್ಚ್‌ 12ರಂದು ರಾಜ್ಯ ಸರ್ಕಾರ ಮತ್ತೊಂದು ಸುತ್ತೋಲೆ ಹೊರಡಿಸಿದೆ. ಪರೀಕ್ಷೆ ನಡೆಸುವ ಸಂಬಂಧ ಅಧಿಸೂಚನೆಯನ್ನು ಹೈಕೋರ್ಟ್‌ ಏಕ ಸದಸ್ಯ ಪೀಠ ಹಾಗೂ ಸುಪ್ರೀಂ ಕೋರ್ಟ್‌ ಸಹ ರದ್ದುಪಡಿಸಿವೆ. ಇಂತಹ ಸಂದರ್ಭದಲ್ಲಿ ಸುತ್ತೋಲೆ ಹೊರಡಿಸಿಯೇ ಸರ್ಕಾರ ಪರೀಕ್ಷೆ ಮುಂದೂಡಿದೆ. ಈ ಸುತ್ತೋಲೆ ಹಿಂಪಡೆಯಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಮತ್ತೊಂದು ಮೊಮೊ ಸಲ್ಲಿಸಿದರು.

ಈ ಎರಡೂ ಮೆಮೊಗಳನ್ನು ತಿರಸ್ಕರಿಸಿದ ಪೀಠವು ಮೇಲ್ಮನವಿಯನ್ನು ವಿಚಾರಣೆ ನಡೆಸಿ ಶೀಘ್ರ ಸೂಕ್ತ ನಿರ್ಧಾರ ಪ್ರಕಟಿಸುವಂತೆ ಹೈಕೋರ್ಟ್‌ಗೆ (ವಿಭಾಗೀಯ ಪೀಠಕ್ಕೆ) ಸುಪ್ರೀಂ ಕೋರ್ಟ್‌ ಸೂಚಿಸಿದೆ. ಆದ್ದರಿಂದ ಅರ್ಜಿಯನ್ನು ವಿಸ್ತೃತ ಪೀಠಕ್ಕೆ ವರ್ಗಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿತು. ಅಂತೆಯೇ, ಮೇಲ್ಮನವಿಯ ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತು.

ಇಂದು ಮಹತ್ವದ ವಿಚಾರಣೆ ನಿರೀಕ್ಷೆ

ಇದೇ ಸಂದರ್ಭದಲ್ಲಿ ಬೋರ್ಡ್ ಮಟ್ಟದ ಪರೀಕ್ಷೆಗಳನ್ನು ನಡೆಸುವುದಕ್ಕೆ ಅವಕಾಶ ಕಲ್ಪಿಸಬೇಕು ಮತ್ತು ಅವಕಾಶ ಕಲ್ಪಿಸಬಾರದು ಎಂದು ಕೋರಿ ಎರಡು ಪ್ರತ್ಯೇಕ ಮಧ್ಯಂತರ ಅರ್ಜಿಗಳು ಸಲ್ಲಿಕೆಯಾಗಿವೆ. ಅವುಗಳ ವಿಚಾರಣೆಯನ್ನು ಇನ್ನಷ್ಟೇ ನಡೆಸಬೇಕಿದೆ.

ಇದಕ್ಕೂ ಮುನ್ನ ವಿಚಾರಣೆ ವೇಳೆ ಖಾಸಗಿ ಶಿಕ್ಷಣ ಸಂಸ್ಥೆಗ ಪರ ವಕೀಲರು, ಸರ್ಕಾರ ನಡೆಸುವುದಕ್ಕೆ ಮುಂದಾಗಿರುವ ಪರೀಕ್ಷಾ ಕ್ರಮ ಗೊಂದಲಗಳಿಂದ ಕೂಡಿದೆ. ಇದರಿಂದ ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಸರ್ಕಾರದ ಈ ಸುತ್ತೋಲೆ ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್ 22ಕ್ಕೆ ಸೀಮಿತವಾಗಿಲ್ಲ. ಇದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಅಲ್ಲದೆ, ಸರ್ಕಾರದ ಸುತ್ತೋಲೆಗಳನ್ನು ಸುಪ್ರೀಂ ಕೋರ್ಟ್ ಕಾನೂನುಬಾಹಿರ ಎಂದು ರದ್ದುಪಡಿಸಿದೆ. ಹೀಗಾಗಿ, ಸುತ್ತೋಲೆ ರದ್ದುಪಡಿಸಿರುವ ಕ್ರಮ ಸರಿಯಾಗಿದೆ ಎಂದು ವಿಭಾಗೀಯ ಪೀಠಕ್ಕೆ ವಿವರಿಸಿದರು.

ಇದನ್ನೂ ಓದಿ : Public Exam : ಸುಪ್ರೀಂ ಆದೇಶದಂತೆ 5,8, 9 ತರಗತಿ ಪರೀಕ್ಷೆ ಮುಂದೂಡಿಕೆ; ಶಿಕ್ಷಣ ಇಲಾಖೆ ಪ್ರಕಟಣೆ

ರಾಜ್ಯ ಸರ್ಕಾರದ ಪರ ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕ್ರಮ್ ಹುಯಿಲಗೋಳ ಅವರು ಅರ್ಜಿದಾರರು ವಿನಾಕಾರಣ ಪ್ರಕರಣ ಎಳೆದು ಹೋಗುತ್ತಿದ್ದಾರೆ. ಇದರಿಂದ ಮೇಲ್ಮನವಿ ಇತ್ಯರ್ಥಪಡಿಸಲು ವಿಳಂಬವಾಗಲಿದೆ. ಕರ್ನಾಟಕ ಶಿಕ್ಷಣ ಕಾಯಿದೆಯ ಸೆಕ್ಷನ್ ಪ್ರಕಾರ ರಾಜ್ಯ ಸರ್ಕಾರಕ್ಕೆ ಬೋರ್ಡ್‌ ಪರೀಕ್ಷೆ ನಡೆಸುವುದಕ್ಕೆ ಅವಕಾಶವಿದೆ. ಅದರಂತೆ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡರು.

ಇದೀಗ ಶುಕ್ರವಾರದ ವಿಚಾರಣೆಯಲ್ಲಿ ಪರೀಕ್ಷೆಗೆ ಸಂಬಂಧಿಸಿ ಒಂದು ತೀರ್ಮಾನ ಬರಬಹುದು ಎಂಬ ನಿರೀಕ್ಷೆಯಲ್ಲಿ ಮಕ್ಕಳ ಪೋಷಕರು ಇದ್ದಾರೆ.

Exit mobile version