ಬೆಂಗಳೂರು: ಐಎಎಸ್ ಆಧಿಕಾರಿ ರೋಹಿಣಿ ಸಿಂಧೂರಿ (IAS Officer Rohini Sindhuri) ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆಯನ್ನು (Defamation Case) ರದ್ದುಗೊಳಿಸಲು (Roopa Vs Sinduri) ಕರ್ನಾಟಕ ಹೈಕೋರ್ಟ್ (Karnataka High Court) ನಿರಾಕರಿಸಿದೆ. ಇದು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ (IPS Officer Roopa Moudgil) ಅವರಿಗೆ ಭಾರಿ ಹಿನ್ನಡೆಯಾಗಿ ಪರಿಣಮಿಸಿದೆ.
ರೂಪಾ ಮೌದ್ಗಿಲ್ ಅವರು ಫೇಸ್‌ಬುಕ್, ಪತ್ರಿಕೆ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುವ ಮೂಲಕ ಮಾನಹಾನಿ ಮಾಡಿದ್ದಾರೆ. ಹಾಗಾಗಿ, ಅವರಿಂದ ಒಂದು ಕೋಟಿ ರೂಪಾಯಿಗಳನ್ನು ಪರಿಹಾರವಾಗಿ ಕೊಡಿಸಬೇಕು. ಅವರ ವಿರುದ್ಧ ಸೂಕ್ತ ದಂಡನೀಯ ಕ್ರಮ ಕೈಗೊಳ್ಳಬೇಕು ಎಂದು ಕೋರಿ ರೋಹಿಣಿ ಸಿಂಧೂರಿ ನಗರದ 24ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿಟನ್ ಕೋರ್ಟ್‌ನಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.
ಇದನ್ನು ಪ್ರಶ್ನಿಸಿ ರೂಪಾ ಮೌದ್ಗಿಲ್ ಅವರು ಕೋರ್ಟ್ ಮೊರೆ ಹೊಕ್ಕಿದ್ದರು. ನಡುವೆ ಕೆಲವು ವಿಚಾರಣೆಗಳು ನಡೆದು ರೋಹಿಣಿ ಅವರ ವಿರುದ್ಧ ಮಾತನಾಡದಂತೆ, ಯಾವುದೇ ಪೋಸ್ಟ್ ಮಾಡದಂತೆ ಆದೇಶ ನೀಡಲಾಗಿತ್ತು. ರೂಪಾ ಅವರು ಅದನ್ನು ಪ್ರಶ್ನಿಸಿದಾಗ ತಡೆಯಾಜ್ಞೆ ತೆರವಾಗಿತ್ತು. ಇದೀಗ ಮಾನನಷ್ಟ ಮೊಕದ್ದಮೆಯನ್ನೇ ರದ್ದುಪಡಿಸಬೇಕೆಂಬ ಅರ್ಜಿಯ ವಿಚಾರಣೆ ನಡೆದು ಮನವಿಯನ್ನು ರದ್ದು ಮಾಡಿದೆ. ಈ ವಿಚಾರಣೆಯ ತೀರ್ಪನ್ನು ನೀಡಿರುವ ಹೈಕೋರ್ಟ್ ಯಾವ ಕಾರಣಕ್ಕಾಗಿ ಮಾನನಷ್ಟ ಮೊಕದ್ದಮೆ ರದ್ದು ಮಾಡಲು ಸಾಧ್ಯವಿಲ್ಲ ಎಂಬ ವಿವರಣೆ ನೀಡಿದೆ.
ತಮ್ಮ ಫೇಸ್ ಬುಕ್ ಖಾಸಗಿ ಖಾತೆಯಲ್ಲಿ ಪೋಸ್ಟ್ ಮಾಡಿದ ಹೇಳಿಕೆಗಳು ಮತ್ತು ಮಾಧ್ಯಮದ ಮುಂದೆ ನೀಡಿದ ಹೇಳಿಕೆಗಳನ್ನು ಪರಿಶೀಲಿಸಿದರೆ, ಅರ್ಜಿದಾರರಾದ ರೂಪಾ ಅವರು ಕ್ರಿಮಿನಲ್ ವಿಚಾರಣೆಯನ್ನು ಎದುರಿಸಬೇಕಾಗುತ್ತದೆ ಎಂದು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಹೇಳಿದ್ದಾರೆ.
ಫೇಸ್‌ಬುಕ್ ಖಾತೆಯಲ್ಲಿ ಮಾಡಿದ ಪೋಸ್ಟ್‌ಗಳು ಮತ್ತು ಮುದ್ರಣ ಮಾಧ್ಯಮದ ಮುಂದೆ ನೀಡಿದ ಹೇಳಿಕೆಗಳು ಆರೋಪದ ಅಡಿಯಲ್ಲಿ ಬರುತ್ತವೆಯೇ ಎಂಬ ಪ್ರಶ್ನೆಯು ವಿಚಾರಣೆಯ ವಿಷಯವಾಗಿದೆ ಎಂದು ಕೋರ್ಟ್ ಹೇಳಿದೆ.
ಪೋಸ್ಟ್‌ಗಳು ಪ್ರಾಮಾಣಿಕವಾಗಿವೆ ಎಂದ ವಕೀಲರು
ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರ ನಡವಳಿಕೆಯನ್ನು ಸಾರ್ವಜನಿಕರಿಗೆ ತೋರಿಸುವ ಪೋಸ್ಟ್‌ಗಳು ಮತ್ತು ಹೇಳಿಕೆಗಳು ಪ್ರಾಮಾಣಿಕವಾಗಿವೆ. ಮತ್ತು ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿಗಳಿಗೆ ಸಂಬಂಧ ಪಟ್ಟ ವಿಚಾರಗಳಾಗಿರುವುದರಿಂದ ಮಾನನಷ್ಟ ಮೊಕದ್ದಮೆ ವ್ಯಾಪ್ತಿಗೆ ಬರುವುದಿಲ್ಲ ಎಂದು ರೂಪಾ ಪರ ವಕೀಲರು ವಾದಿಸಿದರು.
ಸಿಆರ್ ಪಿಸಿ ಸೆಕ್ಷನ್ 197ರ ಅಡಿಯಲ್ಲಿ ರೂಪಾ ಮೌದ್ಗಿಲ್ ಅವರು ರಕ್ಷಣೆಗೆ ಅರ್ಹರು ಎನ್ನುವುದು ಅವರ ವಾದವಾಗಿತ್ತು. ಐಪಿಸಿಯ ಸೆಕ್ಷನ್ 499 ರ ಅಡಿಯಲ್ಲಿ ಮಾನನಷ್ಟದ ಅಗತ್ಯ ಅಂಶಗಳು ಈ ಪ್ರಕರಣದಲ್ಲಿ ತೃಪ್ತಿ ಹೊಂದಿಲ್ಲ ಎಂದು ವಾದಿಸಿದರು.
ಇದನ್ನೂ ಓದಿ: Sindhuri Vs Roopa : ಶಾಸಕರ ಜತೆ ಸಂಧಾನ ಅಂದ್ರೆ ಏನರ್ಥ? ಸಿಂಧೂರಿ ವಿರುದ್ಧ IPS ರೂಪಾ ಗರಂ, 19 ಆರೋಪಗಳ ಚಾರ್ಜ್‌ಶೀಟ್
ನ್ಯಾಯಾಧೀಶರು ಇದಕ್ಕೆ ಕೊಟ್ಟ ಉತ್ತರವೇನು?
ಸಾರ್ವಜನಿಕ ನೌಕರರೊಬ್ಬರು ಆಕೆಗೆ ನಿಯೋಜಿಸಲಾದ ಕರ್ತವ್ಯಗಳ ವ್ಯಾಪ್ತಿಗೆ ಒಳಪಡದ ಯಾವುದೇ ಕಾರ್ಯದಲ್ಲಿ ಭಾಗಿಯಾಗಿದ್ದರೆ ಅಂತಹ ದುಷ್ಕೃತ್ಯವನ್ನು ಅವನ / ಅವಳ ಅಧಿಕಾರಿಯ ಕರ್ತವ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ ಎಂಬುದನ್ನು ನ್ಯಾಯಮೂರ್ತಿಗಳು ಉಲ್ಲೇಖಿಸಿದರು. ಸಾರ್ವಜನಿಕ ಸೇವೆಯಲ್ಲಿರುವ ವ್ಯಕ್ತಿ ತನ್ನ ಅಥವಾ ಅವನ ಸ್ವಂತ ಲಾಭ ಅಥವಾ ಸಂತೋಷಕ್ಕಾಗಿ ಮಾಡಿದ ಕಾರ್ಯಗಳನ್ನು ಅಧಿಕಾರದ ಅಡಿಯಲ್ಲಿರಬಹುದು. ಆದರೆ ಅಂತಹ ಕೃತ್ಯಗಳು ವಿನಾಯಿತಿ ತತ್ವದ ಅಡಿಯಲ್ಲಿ ಬರುವುದಿಲ್ಲ ಎಂದು ಹೇಳಿದರು. ಅಂದರೆ ರೂಪಾ ಮೌದ್ಗಿಲ್ ಅವರು ಮಾಡಿದ್ದು ಅವರ ಕರ್ತವ್ಯದ ವ್ಯಾಪ್ತಿಗೆ ಬರುವುದಿಲ್ಲ. ರೋಹಿಣಿ ಸಿಂಧೂರಿ ಅವರು ಕರ್ತವ್ಯದ ವ್ಯಾಪ್ತಿ ಮೀರಿ ವ್ಯವಹರಿಸಿದ್ದಾರೆ ಎಂದು ಹೇಳಲಾಗುವುದಿಲ್ಲ ಎಂಬರ್ಥವನ್ನು ಅವರು ಧ್ವನಿಸಿದರು.
ಏನಿದು ಐಎಎಸ್ ವರ್ಸಸ್ ಐಪಿಎಸ್ ಜಗಳ?
ಐಪಿಎಸ್ ಅಧಿಕಾರಿಯಾಗಿರುವ ರೂಪಾ ಅವರು 2023ರ ಫೆಬ್ರವರಿ 18 ಮತ್ತು 19ರಂದು ತಮ್ಮ ಫೇಸ್‌ಬುಕ್ ಅಕೌಂಟ್‌ನಲ್ಲಿ ರೋಹಿಣಿ ಸಿಂಧೂರಿ ಅವರ ಬಗ್ಗೆ ಸಾಲು ಸಾಲು ಆರೋಪಗಳನ್ನು ಮಾಡಿದ್ದರು. ರೋಹಿಣಿ ಸಿಂಧೂರಿ ಅವರು ಮನೆ ಹಾಳು ಕೆಲಸ ಮಾಡುತ್ತಿದ್ದಾರೆ. ಜಿಲ್ಲಾಧಿಕಾರಿಯಾಗಿದ್ದ ಡಿ.ಕೆ. ರವಿ ಅವರ ಸಾವನ್ನೂ ತಳುಕು ಹಾಕಿದ ರೂಪಾ ಅವರು ಇತರ ಐಎಎಸ್ ಅಧಿಕಾರಿಗಳಿಗೆ ಅಸಭ್ಯ ಚಿತ್ರಗಳನ್ನು ರಾತ್ತಿ ಹೊತ್ತು ಕಳುಹಿಸುತ್ತಿದ್ದಾರೆ. ಬೇರೆ ಐಎಎಸ್ ಅಧಿಕಾರಿಗಳ ಮನೆ ಒಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದು ಭಾರಿ ಸಂಚಲನವನ್ನು ಸೃಷ್ಟಿಸಿತ್ತು. ಇದರ ವಿರುದ್ಧ ರೋಹಿಣಿ ಸಿಂಧೂರಿ ಅವರು ಕೋರ್ಟ್ ಮೆಟ್ಟಿಲು ಹತ್ತಿದ್ದರು. ಈ ನಡುವೆ, ರಾಜ್ಯ ಸರ್ಕಾರ ಇಬ್ಬರೂ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಲ್ಲದೆ, ಅವರನ್ನು ಸೇವೆಯಿಂದ ಮುಕ್ತಿಗೊಳಿಸಿ ರಜೆ ಮೇಲೆ ಕಳುಹಿಸಿತ್ತು. ಈಗ ಇಬ್ಬರೂ ಅಧಿಕಾರಗಳಿಗೆ ಮರಳಿ ಹುದ್ದೆಯನ್ನು ತೋರಿಸಲಾಗಿದೆ. ಅದರ ನಡುವೆ ಕೋರ್ಟ್‌ನಲ್ಲಿ ವಿಚಾರಣೆ ಮುಂದುವರಿದಿದೆ.