Site icon Vistara News

Shakti scheme : ಮಹಿಳೆಯರ ಉಚಿತ ಪ್ರಯಾಣಕ್ಕಿಂತ ಮೊದಲು ಬಸ್‌ ಸಂಚಾರದಲ್ಲಿ ಸಮಸ್ಯೆ ಇರಲಿಲ್ಲವೇ?

Shakti scheme

ಬೆಂಗಳೂರು: ಸರ್ಕಾರ ಆರಂಭ ಮಾಡಿದ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರ ಉಚಿತ ಸಂಚಾರಕ್ಕೆ (Free Bus Service) ಅವಕಾಶ ನೀಡುವ ಶಕ್ತಿ ಯೋಜನೆಯೇ (Shakti scheme) ಬಸ್‌ಗಳ ಸಂಚಾರ ಸಮಸ್ಯೆಯ ಮೂಲವೇ? ಅದಕ್ಕಿಂತ ಮೊದಲು ಈ ಸಮಸ್ಯೆಗಳು ಇರಲಿಲ್ಲವೇ? ಹಿಂದೆ ಎಲ್ಲವೂ ಸುಗಮವಾಗಿತ್ತಾ? ಈ ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಯಿತೇ?- ಇಂಥ ಕೆಲವು ಖಡಕ್‌ ಪ್ರಶ್ನೆಗಳನ್ನು ಕೇಳಿದೆ ರಾಜ್ಯ ಹೈಕೋರ್ಟ್‌ (Karnataka High Court).

ಶಕ್ತಿ ಯೋಜನೆ ಜಾರಿಗೆ ಬಂದಂದಿನಿಂದ ಬಸ್‌ಗಳಲ್ಲಿ ಪ್ರಯಾಣಿಕರ ದಟ್ಟಣೆ ಜಾಸ್ತಿಯಾಗಿದೆ. ಮಕ್ಕಳಿಗೆ ಶಾಲೆಗೆ ಹೋಗಲು ಸಮಸ್ಯೆಯಾಗುತ್ತಿದೆ, ಹಿರಿಯ ನಾಗರಿಕರು ತೊಂದರೆಯಲ್ಲಿದ್ದಾರೆ ಎಂಬ ಅಂಶಗಳನ್ನು ಉಲ್ಲೇಖಿಸಿ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ್ದ ಅರ್ಜಿಯೊಂದರ ವಿಚಾರಣೆ ವೇಲೆ ಕೋರ್ಟ್‌ ಈ ಪ್ರಶ್ನೆಗಳನ್ನು ಕೇಳಿದೆ.

ಬೆಂಗಳೂರಿನ ವಿವಿಧ ಕಾನೂನು ಕಾಲೇಜುಗಳ ಕಾನೂನು ವಿದ್ಯಾರ್ಥಿಗಳಾದ ಅಶ್ವಿನ್ ಶಂಕರ್ ಭಟ್, ನೇಹಾ ವೆಂಕಟೇಶ್ ಮತ್ತು ಯಾಶಿಕಾ ಸರವಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ ಮತ್ತು ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ನೇತೃತ್ವದ ವಿಭಾಗೀಯ ಪೀಠದಲ್ಲಿ ನಡೆಯಿತು.

ಈ ಅರ್ಜಿಯ ವಿಚಾರಣೆಯ ಸಂದರ್ಭದಲ್ಲಿ ಎಲ್ಲ ಸಮಸ್ಯೆಗಳಿಗೆ ಶಕ್ತಿ ಯೋಜನೆಯೇ ಮೂಲವೇ? ಸಮಸ್ಯೆಗಳು ಹಿಂದೆ ಇರಲಿಲ್ಲವೇ? ಎನ್ನುವ ತೀಕ್ಷ್ಣ ಪ್ರಶ್ನೆಯನ್ನು ಕೋರ್ಟ್‌ ಕೇಳಿತು.

ಹೈಕೋರ್ಟ್‌ ಕೇಳಿದ್ದೇನು? ಕೊಟ್ಟ ಸಲಹೆ ಏನು?

  1. ರಾಜ್ಯದಲ್ಲಿ ಶಕ್ತಿ ಯೋಜನೆ ಆರಂಭವಾಗುವ ಮೊದಲು ಬಸ್‌ಗಳ ಸಂಚಾರ ಸುಗಮವಾಗಿತ್ತಾ?
  2. ಯೋಜನೆಯಿಂದಾಗಿಯೇ ಬಸ್‌ಗಳಲ್ಲಿ ದಟ್ಟಣೆ ಉಂಟಾಗಿದೆಯೇ? ಯಾವ ರೂಟ್‌ಗಳಲ್ಲಿ (ಮಾರ್ಗ) ಪ್ರಯಾಣಿಕರ ದಟ್ಟಣೆ ಇದೆ?
  3. ಸಾರ್ವಜನಿಕ ಬಸ್‌ಗಳಲ್ಲಿ ಇಷ್ಟೇ ಜನರಿರಬೇಕು ಎಂಬ ನಿಯಮವಿದೆಯೇ? ಅರ್ಜಿ ಸಲ್ಲಿಸುವ ಮೊದಲು ಸಾರಿಗೆ ನಿಯಮಗಳನ್ನು ಅಧ್ಯಯನ ನಡೆಸಿಲ್ಲವೇಕೆ?
  4. ಯೋಜನೆಯು ದುರ್ಬಲ ವರ್ಗಗಳಿಗೆ ಉಚಿತ ಪ್ರಯಾಣದ ಸೌಲಭ್ಯ ನೀಡಿದೆಯಲ್ಲವೇ? ಮುಂಬೈ ಲೋಕಲ್ ರೈಲುಗಳ ದಟ್ಟಣೆಯ ಬಗ್ಗೆ ನಿಮಗೆ ಅರಿವಿದೆಯೇ?- ಎಂದು ಕೋರ್ಟ್‌ ಪ್ರಶ್ನಿಸಿದೆ.
  5. ಸೂಕ್ತ ಅಧ್ಯಯನ ಮತ್ತು ಸಿದ್ಧತೆಯೊಂದಿಗೆ ಮತ್ತೊಮ್ಮೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಬಹುದು. ಅಲ್ಲಿವರೆಗೆ ಈ ಅರ್ಜಿಯನ್ನು ವಾಪಸ್‌ ಪಡೆಯಬಹುದು.

ಇದನ್ನೂ ಓದಿ : Shakti Scheme : ಶಕ್ತಿ ಯೋಜನೆ ನಿಲ್ಲಲ್ಲ, ಇನ್ನೂ 10 ವರ್ಷ ಓಡುತ್ತೆ: ಸರ್ಕಾರದ ಸ್ಪಷ್ಟನೆ

ಕಾನೂನು ವಿದ್ಯಾರ್ಥಿಗಳ ಅರ್ಜಿಯಲ್ಲಿ ಏನಿತ್ತು?

ಯೋಜನೆಯಿಂದ ಆರ್ಥಿಕ ಸಂಕಷ್ಟದ ಜೊತೆಗೆ ದಿನನಿತ್ಯ ಆವಾಂತರಗಳು ಸೃಷ್ಟಿಯಾಗುತ್ತಿವೆ ಕಾನೂನು ವಿದ್ಯಾರ್ಥಿಗಳು ಸಲ್ಲಿಸಿದ ಅರ್ಜಿಯ ಸಾರಾಂಶವಾಗಿತ್ತು.

1. ಶಕ್ತಿ ಯೋಜನೆ ಜಾರಿಗೆ ಬಂದಾಗಿನಿಂದ ಬಸ್‌ಗಳಲ್ಲಿ ಜನದಟ್ಟಣೆ ಹೆಚ್ಚಾಗಿದೆ. ಬಸ್‌ಗಳಲ್ಲಿ ಸೀಟು ಪಡೆದುಕೊಳ್ಳಲು ಗಲಾಟೆ, ಹೊಡೆದಾಟ ಸಂಭವಿಸಿದ ಘಟನೆಗಳು ನಡೆದಿವೆ.

2. ಹಿರಿಯ ನಾಗರಿಕರು, ಮಕ್ಕಳು ಬಸ್‌ಗಳಲ್ಲಿ ಹತ್ತಲು ಆಗುತ್ತಿಲ್ಲ. ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ಶಾಲಾ-ಕಾಲೇಜು ತಲುಪಲು ಆಗುತ್ತಿಲ್ಲ.

3. ಬಸ್ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಚಿತ ವರ್ತನೆ, ಅಹಿತಕರ ಘಟನೆಗಳು ನಡೆಯುತ್ತಿವೆ. ಬಸ್ ನಿಲ್ದಾಣ ಮತ್ತು ಸರ್ಕಾರಿ ಬಸ್‌ಗಳು ಯುದ್ಧ ಭೂಮಿ, ಮೀನು ಮಾರುಕಟ್ಟೆಯಂತಾಗಿವೆ.

4. ಯೋಜನೆ ಜಾರಿಗೆ ಬಂದಾಗಿನಿಂದ ಮೂರು ಕೋಟಿ ಮಹಿಳೆಯರು ಉಚಿತವಾಗಿ ಬಸ್‌ಗಳಲ್ಲಿ ಪ್ರಯಾಣ ಮಾಡಿದ್ದಾಾರೆ. ಇದರಿಂದ ವಾರಕ್ಕೆ 100 ಕೋಟಿ ರೂಪಾಯಿ ತೆರಿಗೆದಾರರ ಹಣ ಸರ್ಕಾರಕ್ಕೆ ನಷ್ಟವಾಗುತ್ತಿದೆ.

5. ಶಕ್ತಿ ಯೋಜನೆಗೆ ವಾರ್ಷಿಕ 3,200 ರಿಂದ 3,400 ಕೋಟಿ ರೂಪಾಯಿ ವೆಚ್ಚವಾಗಲಿದೆ. ಇದು ಜನರ ಹಣ.

ಕಾನೂನು ವಿದ್ಯಾರ್ಥಿಗಳು ಕೊಟ್ಟಿದ್ದ ಸಲಹೆಗಳೇನು?

  1. ಶಾಲಾ ಮಕ್ಕಳು ಹಿರಿಯ ನಾಗರಿಕರಿಗೆ ಬಸ್ ಹತ್ತಿ-ಇಳಿಯಲು ಸೂಕ್ತ ವ್ಯವಸ್ಥೆ ಮಾಡಬೇಕು.
  2. ದೂರದ ಊರುಗಳಿಗೆ ತೆರಳುವ ಬಸ್‌ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಬಸ್‌ಗಳಲ್ಲಿ ಹತ್ತಲು ಮೊದಲು ಅವಕಾಶ ಮಾಡಿಕೊಡಬೇಕು.
  3. ದೂರದ ಊರುಗಳಿಗೆ ನಿಂತು ಪ್ರಯಾಣಿಸುವುದನ್ನು ನಿಷೇಧಿಸಬೇಕು.
  4. ಟಿಕೆಟ್ ಪಡೆದವರಿಗೆ ಶೇ.50ರಷ್ಟು ಸೀಟುಗಳನ್ನು ಮೀಸಲಿಡಬೇಕು.
  5. ಕಿಟಿಕಿ ಹಾಗೂ ಚಾಲಕರ ದ್ವಾರದ ಮೂಲಕ ಪ್ರಯಾಣಿಕರು ಹತ್ತುವುದನ್ನು ನಿರ್ಬಂಧಿಸಬೇಕು.
  6. ಶಾಲಾ ಮಕ್ಕಳಿಗೆ ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಬೇಕು.

Exit mobile version