Site icon Vistara News

Soujanya Case : ಸೌಜನ್ಯ ಸಾವಿನ ಮರುತನಿಖೆಗೆ ತಂದೆ ಮನವಿ; ಸರ್ಕಾರ, ಸಿಬಿಐಗೆ ಕೋರ್ಟ್‌ ನೋಟಿಸ್‌

Soujanya Case High Court

ಬೆಂಗಳೂರು: ಧರ್ಮಸ್ಥಳದಲ್ಲಿ 11 ವರ್ಷದ ಹಿಂದೆ ನಡೆದ ಸೌಜನ್ಯ ಎಂಬ ವಿದ್ಯಾರ್ಥಿನಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ (Soujanya Case) ಮರು ತನಿಖೆ ಕೋರಿ ಆಕೆಯ ತಂದೆ ರಾಜ್ಯ ಹೈಕೋರ್ಟ್‌ಗೆ (Karnataka High court) ಅರ್ಜಿ ಸಲ್ಲಿಸಿದ್ದಾರೆ. ಇದನ್ನು ಆಧರಿಸಿ ಹೈಕೋರ್ಟ್‌ ರಾಜ್ಯ ಸರ್ಕಾರ (Karnataka Government) ಮತ್ತು ಸಿಬಿಐಗೆ ನೋಟಿಸ್‌ ಜಾರಿ (Notice to CBI) ಮಾಡಿದೆ. 2012ರ ಅಕ್ಟೋಬರ್‌ 9ರಂದು ನಡೆದ ಈ ಘಟನೆಯಲ್ಲಿ ಆರೋಪಿ ಎಂದು ಬಂಧಿತನಾದ ಸಂತೋಷ್‌ ರಾವ್‌ಗೆ (Accused Santhosh Rao) ಸಿಬಿಐ ಕ್ಲೀನ್‌ ಚಿಟ್‌ ನೀಡಲಾಗಿತ್ತು. ಹಾಗಿದ್ದರೆ ಕೊಲೆಗಾರ ಯಾರು ಎನ್ನುವ ಪ್ರಶ್ನೆ ಗಾಢವಾಗಿ ಕಾಡುತ್ತಿದ್ದು, ಅದನ್ನು ಪತ್ತೆ ಹಚ್ಚಲು ಮರು ತನಿಖೆಯಾಗಲಿ ಎಂಬ ಬೇಡಿಕೆ ಜೋರಾಗಿ ಕೇಳಿಬಂದಿತ್ತು. ಅದರಂತೆ ಯುವತಿ ತಂದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ‌ ಸೌಜನ್ಯ ಅವರ ತಂದೆ ಚಂದಪ್ಪ ಗೌಡ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೆ ನಟರಾಜನ್‌ ಅವರ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನಂತರ ಪ್ರತಿವಾದಿಗಳಾಗಿರುವ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ರಾಜ್ಯ ಪೊಲೀಸ್‌ ಮಹಾ ನಿರ್ದೇಶಕರು, ಸಿಐಡಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ಅಪರಾಧ ಮತ್ತು ತಾಂತ್ರಿಕ ಸೇವಗಳ ವಿಭಾಗದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು, ದಕ್ಷಿಣ ಕನ್ನಡ ಪೊಲೀಸ್‌ ವರಿಷ್ಠಾಧಿಕಾರಿ, ಸಿಐಡಿ ಉಪ ಪೊಲೀಸ್‌ ವರಿಷ್ಠಾಧಿಕಾರಿ, ಬೆಳ್ತಂಗಡಿ ಪೊಲೀಸ್‌ ಠಾಣಾಧಿಕಾರಿ ಮತ್ತು ಸಿಬಿಐಗೆ ಪೀಠವು ನೋಟಿಸ್‌ ಜಾರಿಗೊಳಿಸಿದೆ.

ಪ್ರಕರಣದಿಂದ ಆರೋಪಿ ಸಂತೋಷ್‌ ರಾವ್‌ ಅನ್ನು ಖುಲಾಸೆಗೊಳಿಸಿ ವಿಚಾರಣಾಧೀನ ನ್ಯಾಯಾಲಯ ನೀಡಿರುವ ತೀರ್ಪು ಪ್ರಶ್ನಿಸಿ ಸಿಬಿಐ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯು ಇದೇ ನ್ಯಾಯಾಲಯದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿಯಿದೆ. ಮೇಲ್ಮನವಿಯೊಂದಿಗೆ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಬೇಕು ಎಂದು ಅರ್ಜಿದಾರರ ಪರ ವಕೀಲರು ಮನವಿ ಮಾಡಿದರು. ಇದನ್ನು ಪರಿಗಣಿಸಿರುವ ಪೀಠವು ರೋಸ್ಟರ್‌ ಪ್ರಕಾರ ಸೂಕ್ತ ವಿಭಾಗೀಯ ಪೀಠದ ಮುಂದೆ ಈ ಅರ್ಜಿಯನ್ನು ವಿಚಾರಣೆಗೆ ನಿಗದಿಪಡಿಸಲು ಮುಖ್ಯ ನ್ಯಾಯಮೂರ್ತಿಗಳಿಂದ ಅನುಮತಿ ಪಡೆಯುವಂತೆ ರಿಜಿಸ್ಟ್ರಿಗೆ ನಿರ್ದೇಶಿಸಿದೆ.

ಪ್ರಕರಣದಿಂದ ಖುಲಾಸೆಯಾಗಿರುವ ಸಂತೋಷ್‌ ರಾವ್‌ ಅನ್ನು ಸಹ ಪ್ರಕರಣದಲ್ಲಿ ಪ್ರತಿವಾದಿ ಮಾಡಲಾಗಿದೆ.

ಇದನ್ನೂ ಓದಿ : Soujanya Case : ಸೌಜನ್ಯ ಕೊಲೆ ಪ್ರಕರಣ; ಸಂತೋಷ್‌ ರಾವ್‌ ಖುಲಾಸೆ ಪ್ರಶ್ನಿಸಿ ಸಿಬಿಐ ಮೇಲ್ಮನವಿ

Soujanya Case : ಏನಿದು ಸೌಜನ್ಯ ಕೊಲೆ ಮತ್ತು ಅತ್ಯಾಚಾರ ಪ್ರಕರಣ?

  1. 2012ರ ಅಕ್ಟೋಬರ್‌ 9ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
  2. ಬೆಳ್ತಂಗಡಿ ಠಾಣಾ ಪೊಲೀಸರು ಒಂದೆರಡು ದಿನದಲ್ಲಿ ಸಂತೋಷ್‌ ರಾವ್‌ ಎಂಬಾತನೇ ಕೊಲೆಗಾರ ಎಂದು ಹೇಳಿ ಬಂಧಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು.
  3. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್‌ ರಾವ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿ 2023ರ ಜೂನ್‌ 16ರಂದು ಆದೇಶಿಸಿತ್ತು.
  4. ಆ ಆದೇಶದಲ್ಲಿ ಪ್ರಾಸಿಕ್ಯೂಷನ್‌ (ತನಿಖಾಧಿಕಾರಿಗಳು) ಈ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿತ್ತು.
  5. ಗೋಲ್ಡನ್‌ ಅವರ್‌ನಲ್ಲಿ ತನಿಖೆಯನ್ನು (ಪ್ರಕರಣ ಘಟಿಸಿದ ಅಲ್ಪ ಅವಧಿಯಲ್ಲಿಯೇ ನಡೆಸುವ ಮಾಹಿತಿ, ಸಾಕ್ಷ್ಯ ಸಂಗ್ರಹ) ಸಮರ್ಪಕವಾಗಿ ಮಾಡಿಲ್ಲ ಎಂದು ಸಿಬಿಐ ತನ್ನ ವರದಿಯಲ್ಲಿ ಸ್ಪಷ್ಟವಾಗಿ ಹೇಳಿದೆ.
  6. ಇದು ಸಂತೋಷ್‌ ರಾವ್‌ ಮಾಡಿದ ಕೊಲೆಯಲ್ಲ, ಯಾರೋ ಪ್ರಭಾವಿಗಳು ಮಾಡಿ ಸಂತೋಷ್‌ ರಾವ್‌ ತಲೆಗೆ ಕಟ್ಟಲಾಗಿದೆ ಎಂಬ ಆರೋಪಗಳು ಜೋರಾಗಿವೆ.
  7. ಸಂತೋಷ್‌ ರಾವ್‌ ಖುಲಾಸೆ ಆಗಿದ್ದರೆ ನಿಜವಾದ ಆರೋಪಿ ಯಾರು ಎನ್ನುವ ಬಗ್ಗೆ ತನಿಖೆಯಾಗಬೇಕು ಎಂಬ ಬೇಡಿಕೆಯೂ ಇದೆ.
  8. ತನಿಖೆ ನ್ಯಾಯೋಚಿತವಾಗಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿರುವ ಕಾರಣ ಮರು ತನಿಖೆ ನಡೆಸಲು ಆದೇಶಿಸಬೇಕು ಎನ್ನುವುದು ತಂದೆಯ ಮನವಿಯಾಗಿತ್ತು.
Exit mobile version