Site icon Vistara News

Public Exam : ತಡೆಯಾಜ್ಞೆ ತೆರವು; 5,8,9 ಮತ್ತು11ನೇ ತರಗತಿ ಪಬ್ಲಿಕ್‌ ಪರೀಕ್ಷೆ ಯಥಾವತ್‌

Public Exam high court

ಬೆಂಗಳೂರು: 5,8,9 ಮತ್ತು 11ನೇ ತರಗತಿಗಳಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಪಬ್ಲಿಕ್‌ ಪರೀಕ್ಷೆಗೆ (Public Exam) ಸಂಬಂಧಿಸಿ ಬಿಗ್‌ ಅಪ್ಡೇಟ್‌ ಬಂದಿದೆ. ರಾಜ್ಯ ಹೈಕೋರ್ಟ್‌ನ (Karnataka High court) ಏಕಸದಸ್ಯ ಪೀಠವು ಪಬ್ಲಿಕ್‌ ಪರೀಕ್ಷೆಗೆ ವಿಧಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ತೆರವುಗೊಳಿಸಿದೆ (Stay for Exam Vacated). ಹೀಗಾಗಿ ಮಾರ್ಚ್‌ 11ರ ಸೋಮವಾರದಿಂದ ಆರಂಭವಾಗಬೇಕಾಗಿದ್ದ ಬೋರ್ಡ್‌ ಎಕ್ಸಾಂಗಳು (Board Exam) ಎಂದಿನಂತೆ ನಡೆಯಲಿವೆ.

ಕರ್ನಾಟಕ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (Education department) ಮತ್ತು ಸರ್ಕಾರ ಜಂಟಿಯಾಗಿ ಹೊರಡಿಸಿದ್ದ ಬೋರ್ಡ್‌ ಎಕ್ಸಾಂ ಸುತ್ತೋಲೆಯನ್ನು ಎರಡು ದಿನಗಳ ಹಿಂದೆ ಹೈಕೋರ್ಟ್ ಏಕಸದಸ್ಯ ಪೀಠ ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಶಿಕ್ಷಣ ಇಲಾಖೆಗಳು ಮೇಲ್ಮನವಿ ಸಲ್ಲಿಸಿದ್ದವು. ಇದೀಗ ವಿಭಾಗೀಯರ ಪೀಠವು ತಡೆಯಾಜ್ಞೆಗೇ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಪರೀಕ್ಷೆಗಳು‌ ಪಬ್ಲಿಕ್‌ ಎಕ್ಸಾಂ ಮಾದರಿಯಲ್ಲೇ ಯಥಾವತ್ತಾಗಿ ನಡೆಯಲಿದೆ.

ಮೇಲ್ಮನವಿಯಲ್ಲಿ ಸರ್ಕಾರದ ವಾದ ಏನಾಗಿತ್ತು?

ಹೈಕೋರ್ಟ್ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಸರ್ಕಾರ ಸಲ್ಲಿಸಿದ ಮೇಲ್ಮನವಿಯಲ್ಲಿ, 53,680 ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಖಾಸಗಿ ಶಾಲೆಗಳಷ್ಟೇ ಬೋರ್ಡ್ ಪರೀಕ್ಷೆಗೆ ತಕರಾರು ಎತ್ತಿವೆ. ಸ್ವಹಿತಾಸಕ್ತಿಗಾಗಿ ಖಾಸಗಿ ಶಾಲೆಗಳು ರಿಟ್ ಸಲ್ಲಿಸಿವೆ. ಪೋಷಕರಾಗಲೀ, ಮಕ್ಕಳಾಗಲೀ ಬೋರ್ಡ್ ಪರೀಕ್ಷೆಗೆ ಆಕ್ಷೇಪಿಸಿಲ್ಲ. ಬೋರ್ಡ್ ಪರೀಕ್ಷೆಯಿಂದ ಖಾಸಗಿ ಶಾಲೆಗಳ ಮೌಲ್ಯಮಾಪನವಾಗಲಿದೆ ಎಂದು ತಿಳಿಸಿತ್ತು.

ಸರ್ಕಾರದ ಪರವಾಗಿ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ವಿಕ್ರಮ್‌ ಹುಯಿಲಗೋಳ್‌ ಅವರು ವಾದಿಸಿದರು. ಸರ್ಕಾರದ ಮನವಿಗೆ ಖಾಸಗಿ ಶಾಲೆಗಳ ಸಂಘವೂ ಆಕ್ಷೇಪ ವ್ಯಕ್ತಪಡಿಸಿತು. ಅಂತಿಮವಾಗಿ ಕೋರ್ಟ್‌ ಪಬ್ಲಿಕ್‌ ಪರೀಕ್ಷೆಗೆ ಅವಕಾಶ ಒದಗಿಸಿದೆ.

ಇದನ್ನೂ ಓದಿ: Board Exam: 5, 8, 9, 11ನೇ ತರಗತಿ‌ ಮಕ್ಕಳಿಗೆ ಪಬ್ಲಿಕ್‌ ಪರೀಕ್ಷೆ ರದ್ದುಪಡಿಸಿದ ಹೈಕೋರ್ಟ್‌ ಆದೇಶ ವಿರುದ್ಧ ಮೇಲ್ಮನವಿಗೆ ಸರ್ಕಾರ ಸಜ್ಜು

ಏನಿದು ಪಬ್ಲಿಕ್‌ ಪರೀಕ್ಷೆ ಮತ್ತು ಅದರ ಸುತ್ತಲಿನ ವಿವಾದ?

ಬಿಜೆಪಿ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿದ್ದ ಬಿ ಸಿ ನಾಗೇಶ್ 5ನೇ ತರಗತಿ ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್‌ ಮಾದರಿಯ ಮೌಲ್ಯಾಂಕನ ಪರೀಕ್ಷೆ ಜಾರಿಗೆ ತಂದಿದ್ದರು. ಕಾಂಗ್ರೆಸ್‌ ಸರ್ಕಾರ ಬಂದ ಮೇಲೆ 9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಬೋರ್ಡ್‌ ಎಕ್ಸಾಮ್‌ ನಡೆಸುವ ಚಿಂತನೆ ಮಾಡಲಾಗಿತ್ತು.

9ನೇ ತರಗತಿ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೂ ಪಬ್ಲಿಕ್‌ ಪರೀಕ್ಷೆ ನಡೆಸುವುದರಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಗಂಭೀರತೆ ಕಾಣಬಹುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಮಧುಬಂಗಾರಪ್ಪ ಅವರ ವಾದವಾಗಿತ್ತು.

ಆದರೆ, 2023ರ ಡಿಸೆಂಬರ್ ನಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಗಳನ್ನು ಪ್ರಶ್ನಿಸಿ ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ (ರುಪ್ಸಾ) ಸಂಘಟನೆ ಕೋರ್ಟ್ ಮೆಟ್ಟಲೇರಿತ್ತು. ವಾದ ಆಲಿಸಿದ ಹೈಕೋರ್ಟ್ ಸರ್ಕಾರ ಸುತ್ತೋಲೆ ರದ್ದುಗೊಳಿಸಿ ಆದೇಶಿಸಿತ್ತು.

ಇದನ್ನೂ ಓದಿ : Public Exam : 5, 8ನೇ ತರಗತಿ ಪಬ್ಲಿಕ್‌ ಪರೀಕ್ಷೆ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Exit mobile version