ಬೆಂಗಳೂರು: ಒಂದು ಕುಟುಂಬದಲ್ಲಿ ಹೆಣ್ಣು ಮಕ್ಕಳು (Daughters of Family) ಮೃತಪಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಅವರನ್ನು ಪಿತ್ರಾರ್ಜಿತ ಆಸ್ತಿ (Paternal properties) ಪಾಲಿನ ಹಕ್ಕಿನಿಂದ ದೂರ ಇಡುವಂತಿಲ್ಲ ಎಂದು ರಾಜ್ಯ ಹೈಕೋರ್ಟ್‌ನ (Karnataka High Court) ಧಾರವಾಡ ಪೀಠ ಹೇಳಿದೆ. ಆಕೆ ಮೃತಪಟ್ಟರೂ ಆಕೆಯ ವಾರೀಸುದಾರರು ಆಸ್ತಿಯ ಪಾಲಿನಲ್ಲಿ ಸಮಾನವಾದ ಹಕ್ಕು (Equal right in properties) ಹೊಂದಿರುತ್ತಾರೆ ಎಂದು ಅದು ಹೇಳಿದೆ.
ಹಿಂದೂ ಉತ್ತರಾಧಿಕಾರ ಕಾಯಿದೆಗೆ (Hindu Succession act) ತಿದ್ದುಪಡಿ ಮಾಡುವ ಮುನ್ನವೇ ಮಗಳು ಮೃತಪಟ್ಟಿದ್ದಾರೆಂಬ ಕಾರಣದಿಂದ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ನಿರಾಕರಿಸಲಾಗದು ಎಂದೂ ಪೀಠ ಸ್ಪಷ್ಟಪಡಿಸಿದೆ. ಹೆಣ್ಣು ಮಕ್ಕಳು ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಮಕ್ಕಳಿಗೆ ಪಾಲು ನೀಡಲಾಗದು ಎಂದು ಗದಗ ಜಿಲ್ಲೆಯ ನರಗುಂದದ ಚನ್ನಬಸಪ್ಪ ಅವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ಡಿಸೆಂಬರ್ 18ರಂದು ನಡೆದು ಅರ್ಜಿಯನ್ನು ವಜಾಗೊಳಿಸಲಾಗಿತ್ತು. ಈ ತೀರ್ಪಿನಲ್ಲಿ ಕೋರ್ಟ್ ಮೇಲಿನ ಅಂಶವನ್ನು ಸ್ಪಷ್ಟಪಡಿಸಿತ್ತು.
ನ್ಯಾಯಮೂರ್ತಿಗಳು ಹೇಳಿದ್ದೇನು?
ಹೆಣ್ಣು ಮಕ್ಕಳಿಗೆ ಜಂಟಿ ಉತ್ತರಾಧಿಕಾರದ (ಕೊಪಾರ್ಸೆನರಿ) ಹಕ್ಕುಗಳನ್ನು ನೀಡುವ ಉದ್ದೇಶದಿಂದ 2005ರ ಸೆ. 9ರಂದು ಕಾಯಿದೆಗೆ ತಿದ್ದುಪಡಿ ಮಾಡಲಾಯಿತು. ಆದರೆ ಆ ದಿನಕ್ಕೂ ಮೊದಲೇ ಮಹಿಳೆ ಮೃತಪಟ್ಟಿದ್ದಾರೆಂದು ಹೇಳಿ ಪೂರ್ವಜರ ಆಸ್ತಿ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ನ್ಯಾ. ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠ ಸ್ಪಷ್ಟವಾಗಿ ಹೇಳಿದೆ.
ಮೃತ ಹೆಣ್ಣು ಮಕ್ಕಳ ಕಾನೂನಾತ್ಮಕ ಉತ್ತರಾಧಿಕಾರಿಗಳು ಕೂಡ ಆಸ್ತಿಯಲ್ಲಿಸಮಾನ ಪಾಲು ಪಡೆಯಬಹುದು ಎನ್ನುವುದು ಪೀಠದ ಸ್ಪಷ್ಟ ನುಡಿ.
ವಿನೀತಾ ಶರ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನ ವಿಸ್ತೃತ ಪೀಠ 2020ರಲ್ಲಿ ಸ್ಪಷ್ಟ ತೀರ್ಪು ನೀಡಿತ್ತು. 2005ರ ಹಿಂದೂ ಉತ್ತರಾಧಿಕಾರ ಕಾಯಿದೆಗೆ ಮಾಡಲಾದ ತಿದ್ದುಪಡಿಯಂತೆ ಹೆಣ್ಣು ಮಕ್ಕಳು ಗಂಡು ಮಕ್ಕಳಂತೆಯೇ ‘ಜಂಟಿ ಉತ್ತರಾಧಿಕಾರದ’ ಹಕ್ಕುಗಳನ್ನು ಪಡೆಯುತ್ತಾರೆ ಎಂದು ನ್ಯಾಯಾಲಯ ತಿಳಿಸಿದೆ.
ಇದನ್ನೂ ಓದಿ : Abortion law : ಅತ್ಯಾಚಾರ ಸಂತ್ರಸ್ತ ಹೆಣ್ಮಕ್ಕಳಿಗೆ ಗರ್ಭಪಾತದ ಹಕ್ಕಿದೆ ಎಂದ ಹೈಕೋರ್ಟ್
ಜೀವಂತ ಇರಲಿ, ಇಲ್ಲದಿರಲಿ ಹಕ್ಕು ಇದ್ದೇ ಇರುತ್ತದೆ
- 1. ವ್ಯಕ್ತಿ ಹುಟ್ಟಿನಿಂದಲೇ ಹಕ್ಕು ಪಡೆದಿರುತ್ತಾನೆಯೇ ವಿನಾ ಉತ್ತರಾಧಿಕಾರದಿಂದಲ್ಲ.
- 2. ಅದರಂತೆ ಮಗಳು ಜೀವಂತ ಇರಲಿ ಅಥವಾ ಇಲ್ಲದಿರಲಿ ಅವಳು ಆಸ್ತಿಯಲ್ಲಿ ಹಕ್ಕು ಪಡೆದಿರುತ್ತಾಳೆ.
- 3.ಕಾಯಿದೆಗೆ 2005ರಲ್ಲಿ ತಿದ್ದುಪಡಿ ನಡೆಯುವ ಮೊದಲೇ ಆಕೆ ನಿಧನರಾಗಿದ್ದಾರೆಂದು ನೆಪ ಹೇಳಿ ಆಕೆಯ ಕಾನೂನುಬದ್ಧ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕನ್ನು ನಿರಾಕರಿಸಲಾಗದು.
- 4. ತಿದ್ದುಪಡಿ ಕಾಯಿದೆ ಲಿಂಗ ಸಮಾನತೆ ನೀಡಲಿದೆ. ಅದೇ ರೀತಿ ತಿದ್ದುಪಡಿ ನಿಯಮಗಳು ಪೂರ್ವಾನ್ವಯವಾಗುತ್ತವೆ.
- 5. ಈ ವಿಚಾರಗಳನ್ನು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.