ಬೆಂಗಳೂರು: ತಂದೆಯ ಪಿತ್ರಾರ್ಜಿತ ಆಸ್ತಿಯಲ್ಲಿ (Asset earned by father) ಮಕ್ಕಳಿಗೆ ಪಾಲಿದೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಒಂದು ವೇಳೆ ಮಗ ಮೃತಪಟ್ಟರೆ ಅವನ ಆಸ್ತಿಯಲ್ಲಿ ತಾಯಿಗೂ ಪಾಲಿದೆ ಎಂದು ರಾಜ್ಯ ಹೈಕೋರ್ಟ್ (Karnataka High court) ಹೇಳಿದೆ. ಆದರೆ, ಅದು ಮಗನಿಗೆ ಸಿಕ್ಕಿದ ಪಿತ್ರಾರ್ಜಿತ ಆಸ್ತಿಯಾಗಿರಬೇಕು ಮತ್ತು ತಾಯಿ ಮೊದಲನೇ ವರ್ಗದ ವಾರೀಸುದಾರರಾಗಿಬೇಕು.
ಹಿಂದೂ ಉತ್ತರಾಧಿಕಾರಿ ಕಾಯಿದೆ (Hindu succession act) ಅಡಿ ಮೃತ ಪುತ್ರನ ಆಸ್ತಿಗೆ ತಾಯಿಯೂ ಪಾಲುದಾರರಾಗಲಿದ್ದಾರೆ. ಒಂದು ವೇಳೆ ಗಂಡ ಜೀವಂತವಾಗಿದ್ದರೂ ಪಿತ್ರಾರ್ಜಿತ ಆಸ್ತಿಯಲ್ಲಿ ಪುತ್ರನಿಗೆ ಸೇರಬೇಕಿರುವ ಆಸ್ತಿಯಲ್ಲಿ ತಾಯಿ ತನ್ನ ಪಾಲು ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿದೆ.
ಇದು ಟಿ.ಎನ್. ಸುಶೀಲಮ್ಮ ಎಂಬ ತಾಯಿ ಮತ್ತು ಮೃತಪಟ್ಟಿರುವ ಅವರ ಪುತ್ರ ಸಂತೋಷ್ ಆಸ್ತಿಯ ಪಾಲಿನ ವಿಚಾರದ ದಾವೆಯಾಗಿದೆ. ಮೃತಪಟ್ಟಿರುವ ಪುತ್ರ ಸಂತೋಷ್ ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಹಕ್ಕು ಹೊಂದಿಲ್ಲ ಎಂದು ಅಧೀನ ನ್ಯಾಯಾಲಯ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಟಿ.ಎನ್ ಸುಶೀಲಮ್ಮ ಎಂಬವರು ಹೈಕೋರ್ಟ್ ಮೊರೆ ಹೊಕ್ಕಿದ್ದರು. ಅವರು ಸಲ್ಲಿಸಿದ ಎರಡನೇ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಚ್.ಪಿ ಸಂದೇಶ್ ಅವರ ನೇತೃತ್ವದ ಏಕಸದಸ್ಯ ಪೀಠವು ಪುರಸ್ಕರಿಸಿತು. ಆದರೆ, ವಿಧಿ ವಿಪರ್ಯಾಸ ಹೇಗಿದೆ ಎಂದರೆ, ಈ ಅರ್ಜಿ ವಿಚಾರಣೆ ಹಂತದಲ್ಲಿರುವಾಗಲೇ ಸುಶೀಲಮ್ಮ ಅವರು ಮೃತಪಟ್ಟಿದ್ದಾರೆ.
ಏನಿದು ಆಸ್ತಿ ವಿವಾದ ಪ್ರಕರಣ?
ಸುಶೀಲಮ್ಮ ಅವರ ಮಗ ಸಂತೋಷ್ ಅವರು ವರ್ಷದ ಹಿಂದೆ ಮೃತಪಟ್ಟಿದ್ದರು. ಅವರ ಪತ್ನಿ ಮತ್ತು ಪುತ್ರ ಪೂರ್ವಜರ ಆಸ್ತಿಯಲ್ಲಿ ಪಾಲು ಕೋರಿ ವಿಚಾರಣಾಧೀನ ನ್ಯಾಯಾಲಯ ಮತ್ತು ಪ್ರಥಮ ಮೇಲ್ಮನವಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಇತ್ಯರ್ಥಪಡಿಸುವಾಗ ಸಂತೋಷ್ ತಾಯಿಯಾದ ನನ್ನನ್ನು ಪಕ್ಷಕಾರಳನ್ನಾಗಿಸಿರಲಿಲ್ಲ. ಇದನ್ನು ವಿಚಾರಣಾಧೀನ ಮತ್ತು ಪ್ರಥಮ ಮೇಲ್ಮನವಿ ನ್ಯಾಯಾಲಯಗಳೂ ಗಣನೆಗೆ ತೆಗೆದುಕೊಂಡಿಲ್ಲ. ಹೀಗಾಗಿ, ಅವುಗಳ ಆದೇಶ ಅಕ್ರಮ, ಸ್ವೇಚ್ಛೆ ಮತ್ತು ಅನ್ಯಾಯದಿಂದ ಕೂಡಿವೆ. ಸಂತೋಷ್ ತಾಯಿಯಾಗಿರುವ ನನಗೂ ಆತನ ಆಸ್ತಿಯಲ್ಲಿ ಪಾಲು ಬರಬೇಕಿದೆ ಎಂದು ಕೋರಿ ಸುಶೀಲಮ್ಮ ಅವರು ಹೈಕೋರ್ಟ್‌ಗೆ ಸಾಮಾನ್ಯ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.
ಇದರ ವಿಚಾರಣೆಯ ವೇಳೆ ಹಲವು ವಿಶೇಷ ಸಂಗತಿಗಳು ಬಯಲಿಗೆ ಬಂದಿವೆ. ಮುಖ್ಯವಾಗಿ ಸಂತೋಷ್ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿಯೂ ಅರ್ಹರು ಎಂದು ತಿಳಿಸಿದೆ.
ಅರ್ಜಿಯಲ್ಲಿ ಒಮ್ಮೆ ಸುಶೀಲಮ್ಮ ಅವರನ್ನು ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಸಂತೋಷ್ ಅವರ ಮೊದಲನೇ ವರ್ಗದ ವಾರಸುದಾರರಾಗಲಿದ್ದಾರೆ. ಸಂತೋಷ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗಲಿದ್ದಾರೆ. ಹೀಗಾಗಿ, ಸಂತೋಷ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿದಾರರಾದ ಸುಶೀಲಮ್ಮ ಅರ್ಹರಾಗಲಿದ್ದಾರೆ ಎಂದು ಹೈಕೋರ್ಟ್ ಹೇಳಿದೆ.
ಕೋರ್ಟ್ ಹೇಳಿದ್ದೇನು?
- ಸುಶೀಲಮ್ಮ ಅವರು ಸಂತೋಷ್ ಅವರ ಮೊದಲನೇ ವರ್ಗದ ವಾರಸುದಾರರಾಗಿದ್ದು, ಅವರು ಆಸ್ತಿಯಲ್ಲಿ ಪಾಲು ಪಡೆಯಲು ಹಕ್ಕುದಾರರಾಗಿದ್ದಾರೆ. ಪ್ರಕರಣದ ವಿಚಾರಣೆಯ ಹಂತದಲ್ಲಿ ಸುಶೀಲಮ್ಮ ಅವರು ನಿಧನರಾಗಿದ್ದು, ಪತಿ, ಪುತ್ರಿ ಮತ್ತು ಈಗಾಗಲೇ ಸಾವನ್ನಪ್ಪಿರುವ ಪುತ್ರನನ್ನು ಅಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಹಿಂದೂ ಮಹಿಳೆಯ ಉತ್ತರಾಧಿಕಾರ ನಿಯಮಗಳ ಬಗ್ಗೆ ಚರ್ಚಿಸುವ ಹಿಂದೂ ಉತ್ತರಾಧಿಕಾರ ಕಾಯಿದೆಯ ಸೆಕ್ಷನ್ 15 ಅನ್ನು ಅನ್ವಯಿಸಬೇಕಿದೆ.
- “ಸುಶೀಲಮ್ಮ ಅವರು ದಾವೆ ಹೂಡುವುದಕ್ಕೂ ಮೊದಲೇ ಸಂತೋಷ್ ಅವರು ನಿಧನರಾಗಿದ್ದಾರೆ. ಇದರಿಂದ ಸುಶೀಲಮ್ಮ ಅವರು ಸಂತೋಷ್ ಅವರ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ ಎಂಬುದನ್ನು ಗುರುತಿಸುವಲ್ಲಿ ಪ್ರಥಮ ಮೇಲ್ಮನವಿ ನ್ಯಾಯಾಲಯವು ವಿಫಲವಾಗಿದೆ.
- ಸುಶೀಲಮ್ಮ ಪತಿ ಬದುಕಿರುವವರೆಗೆ ಆಸ್ತಿಯ ವಿಭಾಗದಲ್ಲಿ ಸುಶೀಲಮ್ಮ ಅವರನ್ನು ಅಗತ್ಯ ಪಕ್ಷಕಾರರು ಎಂದು ಪರಿಗಣಿಸಲಾಗದು ಎಂದು ಪ್ರಥಮ ಮೇಲ್ಮನವಿ ನ್ಯಾಯಾಲಯ ಹೇಳಿದೆ. ಆದರೆ, ಸಂತೋಷ್ ಸಾವಿನ ಹಿನ್ನೆಲೆಯಲ್ಲಿ ಸುಶೀಲಮ್ಮ ಅವರು ಸಂತೋಷ್ ಅವರ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ ಎಂಬ ಅಂಶ ಪರಿಗಣಿಸುವಲ್ಲಿ ವಿಫಲವಾಗಿದೆ.
- ಸುಶೀಲಮ್ಮ ಅವರ ಪತಿ ಜೀವಂತವಾಗಿದ್ದಾರೆ ಎಂಬುದರಲ್ಲಿ ಅನುಮಾನವಿಲ್ಲ. ಸಂತೋಷ್ ನಿಧನರಾದ ಬಳಿಕ ಸುಶೀಲಮ್ಮ ಅವರು ಸಂತೋಷ್ ಅವರ ಮೊದಲ ವರ್ಗದ ವಾರಸುದಾರರಾಗುತ್ತಾರೆ. ಇದನ್ನು ವಿಚಾರಣಾಧೀನ ನ್ಯಾಯಾಲಯ ಪರಿಗಣಿಸಿಲ್ಲ. ಅಲ್ಲದೇ, ಅಮ್ಮನನ್ನು ದಾಯಾದಿ ಎಂದು ಪರಿಗಣಿಸಲಾಗದು. ಹೀಗಾಗಿ, ಆಕೆ ಪಿತ್ರಾರ್ಜಿತ/ಜಂಟಿ ಆಸ್ತಿಯಲ್ಲಿ ಪಾಲು ಕೋರಲಾಗದು ಎಂದು ತಪ್ಪಾಗಿ ಆದೇಶಿಸಿದೆ.
- ಸುಶೀಲಮ್ಮ ಅವರು ಪಿತ್ರಾರ್ಜಿತ ಆಸ್ತಿಯಲ್ಲಿ ದಾಯಾದಿ (ಕೋಪರ್ಸೆನರ್) ಎಂದು ಸ್ವತಂತ್ರ ಪಾಲು ಕೋರಿಲ್ಲ. ಆದರೆ, ತನ್ನನ್ನು ಅಗಲಿರುವ ಪುತ್ರ ಸಂತೋಷ್ ಆಸ್ತಿಯಲ್ಲಿ ಅವರು ಪಾಲು ಕೋರಿದ್ದಾರೆ. ಹೀಗಾಗಿ, ಮೇಲ್ಮನವಿಯಲ್ಲಿ ಸುಶೀಲಮ್ಮ ಅವರನ್ನು ಪಕ್ಷಕಾರರನ್ನಾಗಿ ಮಾಡುವ ಅಗತ್ಯವಿಲ್ಲ ಮತ್ತು ಆಕೆ ತನ್ನ ಪಾಲು ಪಡೆಯಲು ಅರ್ಹಳಲ್ಲ ಎಂದಿರುವ ಪ್ರಥಮ ಮೇಲ್ಮನವಿ ನ್ಯಾಯಾಲಯದ ಆದೇಶ ದೋಷಪೂರಿತ.
ಇದನ್ನೂ ಓದಿ : High Court : ಎರವಲು ಸೇವೆ ಎರಡು ವರ್ಷ ಕಡ್ಡಾಯ ಎಂಬ ನಿಯಮವಿಲ್ಲ ಎಂದ ಹೈಕೋರ್ಟ್
ಸುಶೀಲಮ್ಮ ನಿಧನದ ನಂತರ ಅವರ ಪಾಲು ಏನಾಗುತ್ತದೆ?
ಈ ನಡುವೆ ವಿಚಾರಣೆಯ ಹಂತದಲ್ಲೇ ಸುಶೀಲಮ್ಮ ಅವರು ನಿಧನರಾಗಿದ್ದಾರೆ. ಹಾಗಿದ್ದರೆ ಈ ದಾವೆ ಊರ್ಜಿತವಾಗುತ್ತದೆಯೇ? ಅವರಿಗೆ ಪಾಲು ಕೊಡಬೇಕಾಗಿಲ್ಲವೇ? ಕೊಟ್ಟರೆ ಆ ಪಾಲು ಯಾರಿಗೆ ಸೇರುತ್ತದೆ ಎನ್ನುವುದನ್ನೂ ಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
- ಅರ್ಜಿ ವಿಚಾರಣೆಗೆ ಬಾಕಿ ಇರುವಾಗ ಸುಶೀಲಮ್ಮ ಅವರು ನಿಧನರಾಗಿರುವುದರಿಂದ ಹಿಂದೂ ಉತ್ತರಾಧಿಕಾರಿ ಕಾಯಿದೆ 1956ರ ಸೆಕ್ಷನ್ 15 ಅನ್ನು ಅನ್ವಯಿಸಬೇಕಿದೆ. ಅದೇನೆಂದರೆ ಹಿಂದೂ ಮಹಿಳೆಗೆ ಸಂಬಂಧಿಸಿದ ಸಾಮಾನ್ಯ ಉತ್ತರಾಧಿಕಾರ ನಿಯಮಗಳು.
- ಇದರ ಪ್ರಕಾರ ಕಾಯಿದೆಯ ಸೆಕ್ಷನ್ 16ರ ಅಡಿ ಹಿಂದೂ ಮಹಿಳೆಯ ಆಸ್ತಿಯು ಪುತ್ರರು, ಪುತ್ರಿಯರು (ಹಿಂದೆ ಸಾವನ್ನಪ್ಪಿರುವ ಪುತ್ರ ಅಥವಾ ಪುತ್ರಿಯ ಮಕ್ಕಳು ಸೇರಿ) ಮತ್ತು ಪತಿಗೆ ವಿಭಾಗವಾಗುತ್ತದೆ.
- ಸೆಕ್ಷನ್ 15ರ ಪ್ರಕಾರ ಸುಶೀಲಮ್ಮ ಅವರ ಆಸ್ತಿಯು ಪುತ್ರ, ಪುತ್ರಿ ಮತ್ತು ಪತಿಗೆ ವಿಭಾಗವಾಗುತ್ತದೆ.
- ಸುಶೀಲಮ್ಮ ಅವರ ಪತಿಗೆ 10/27ನೇ ಭಾಗ, ಎರಡನೇ ಡಿಫೆಂಡೆಂಟ್‌ಗೆ 10/27ನೇ ಭಾಗ, ಈಗಾಗಲೇ ಸಾವನ್ನಪ್ಪಿರುವ ಪುತ್ರನ ಪುತ್ರನಿಗೆ 4/27ನೇ ಭಾಗ ಮತ್ತು ಸಾವನ್ನಪ್ಪಿರುವ ಪುತ್ರನ ಪತ್ನಿಗೆ 3/27ನೇ ಭಾಗವನ್ನು ಹಂಚಿಕೆ ಮಾಡಿದೆ.