ಹೊಸದಿಲ್ಲಿ: ಶ್ರೀರಾಮ- ಸೀತೆಯ (Sri Ram – Sita) ಬಗ್ಗೆ ಬರೆದ ಕವನದಲ್ಲಿ (poem) ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡಿದ ಆರೋಪದ ಮೇಲೆ ವ್ಯಕ್ತಿಯೊಬ್ಬರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಈ ಪ್ರಕರಣವೀಗ ಹೈಕೋರ್ಟನ್ನೂ ದಾಟಿಕೊಂಡು ಬಂದು ಸುಪ್ರೀಂ ಕೋರ್ಟ್ (Supreme Court) ಅಂಗಳದಲ್ಲಿ ನಿಂತಿದೆ. ಸದ್ಯ ಈ ಮುಸ್ಲಿಂ ಕವಿಗೆ ಸುಪ್ರೀಂ ಕೋರ್ಟ್ ನಿರೀಕ್ಷಣಾ ಜಾಮೀನು ನೀಡಿದೆ.
ಆರೋಪಿ ತನಿಖೆಗೆ ಸಹಕರಿಸಬೇಕು ಎಂಬ ಷರತ್ತಿನ ಮೇಲೆ, ಆತನನ್ನು ಬಂಧಿಸದಂತೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿಗಳಾದ ಎಂ.ಎಂ ಸುಂದ್ರೇಶ್ ಮತ್ತು ಎಸ್‌ವಿಎನ್ ಭಟ್ಟಿ ಅವರ ಪೀಠ ಆದೇಶ ನೀಡಿದೆ. ಅಸ್ಸಾಂ ಮೂಲದ ಈ ಕವಿ ತನ್ನ ಕವಿತೆಗಾಗಿ ಕ್ಷಮೆಯಾಚನೆಯನ್ನೂ ಮಾಡಿದ್ದು, ಈ ಕುರಿತ ಫೇಸ್‌ಬುಕ್ ಪೋಸ್ಟ್ ಅನ್ನೂ ಹಿಂದೆಗೆದುಕೊಂಡಿದ್ದಾನೆ.
ವಿಚಾರಣೆಯ ಆರಂಭಿಕ ಹಂತದಲ್ಲಿ ನ್ಯಾಯಮೂರ್ತಿ ಭಟ್ಟಿ ಅವರು ಬೇರೊಂದು ಪೀಠದ ಮುಂದಿರುವ ದ್ವೇಷಭಾಷಣದ ವಿಚಾರವನ್ನು ಉಲ್ಲೇಖಿಸಿದರು. “ಇಲ್ಲಿರುವ ಸಮಸ್ಯೆ ಎಂದರೆ, ಈ ಕವಿತೆಯನ್ನು ಓದುವ ವ್ಯಕ್ತಿ ಇದನ್ನು ಹೇಗೆ ಓದುತ್ತಾನೆ ಮತ್ತು ಅರ್ಥ ಮಾಡಿಕೊಳ್ಳುತ್ತಾನೆ ಎಂಬುದನ್ನು ಕಲ್ಪಿಸಿಕೊಳ್ಳಬೇಕಿರುವುದು. ಇದು ಸಮಾಜದಲ್ಲಿ ಹೇಗೆ ಸಮಸ್ಯೆಯನ್ನು ಪ್ರಚೋದಿಸಬಹುದು ಎಂದು ತಿಳಿದುಕೊಳ್ಳಬೇಕಿದೆ. ಸಾರ್ವಜನಿಕ ಕೋರ್ಟ್‌ನಲ್ಲಿ ನಾನು ಇದನ್ನು ಓದಲು ಬಯಸುವುದಿಲ್ಲ. ಕವಿತೆಯ ಎರಡು ಪುಟಗಳಲ್ಲಿ ಮೂರು ಕಡೆ ಸಮಸ್ಯಾತ್ಮಕವಾಗಿದೆ. ಇದರ ಒಳನೋಟಗಳು ಉನ್ನತ ಬುದ್ಧಿವಂತರಿಗೆ ಒಂದು ರೀತಿಯಿಂದ ಅರ್ಥವಾದರೆ, ಅಷ್ಟು ತಿಳಿವಳಿಕೆ ಇಲ್ಲದವರು ಇದನ್ನೂ ಪೂರ್ತಿ ತಪ್ಪಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳುವ ಸಾಧ್ಯತೆಗಳಿವೆ” ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಆರೋಪಿ ಪರ ವಕೀಲ ಶಾರುಖ್ ಆಲಂ, “ಇದು ದ್ವೇಷ ಭಾಷಣದ ಪ್ರಕರಣವಲ್ಲ. ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ಈ ಪೋಸ್ಟ್ ಅನ್ನು ಹಿಂತೆಗೆದುಕೊಳ್ಳಲಾಗಿದೆ” ಎಂದರು. ಆರೋಪಿ ಪರ ವಕೀಲರ ಅಂಶಗಳು ಸಕಾರಾತ್ಮಕವಾಗಿವೆ. ಆದರೆ ಕವಿತೆಯನ್ನು ಸ್ವತಂತ್ರವಾಗಿ ನೋಡಿದರೆ ನ್ಯಾಯಾಲಯವು ಅದರ ಆಧಾರದಲ್ಲಿ “ನ್ಯಾಯಯುತ”ವಾಗಿರಬೇಕಾಗುತ್ತದೆ ಎಂದು ನ್ಯಾಯಪೀಠ ಉತ್ತರಿಸಿತು.
ಪೋಸ್ಟ್ ಅನ್ನು ಹಿಂದೆಗೆದುಕೊಂಡು ಕ್ಷಮೆಯಾಚನೆಯನ್ನು ವ್ಯಕ್ತಪಡಿಸಿದ ಆರೋಪಿಯ ನಡೆಯ ಬಗ್ಗೆ ವಕೀಲರು ಕೋರ್ಟ್‌ನ ಗಮನ ಸೆಳೆದರು. ಹೀಗಾಗಿ, ಆರೋಪಿಯನ್ನು ಬಂಧಿಸದಂತೆ ರಾಜ್ಯ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡಿತು.
ಕೇಸು ಎದುರಿಸುತ್ತಿರುವ ಮುಸ್ಲಿಂ ವ್ಯಕ್ತಿ, ತನ್ನ ನೈಜ ಗುರುತನ್ನು ಮರೆಮಾಚಿ ‘ನೀಲಭ್ ಸೌರವ್’ ಎಂಭ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಯಾದ ʻಫೇಸ್‌ಬುಕ್’ನಲ್ಲಿ ಖಾತೆಯನ್ನು ರಚಿಸಿದ್ದ. ಜೊತೆಗೆ ಹಿಂದೂ ದೇವರಾದ ಶ್ರೀರಾಮ ಮತ್ತು ಸೀತೆಯರನ್ನು ಗುರಿಯಾಗಿಸಿಕೊಂಡು ಅಶ್ಲೀಲವಾಗಿ ಕವಿತೆಯನ್ನು ಬರೆದು ಪೋಸ್ಟ್ ಮಾಡಿದ್ದ ಎಂದು ದೂರು ದಾಖಲಾಗಿತ್ತು.
ಬಂಧನದ ವಿರುದ್ಧ ಆರೋಪಿ ಗೌಹಾಟಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ. ತನಗೆ ಯಾರ ಧಾರ್ಮಿಕ ಭಾವನೆಗಳಿಗೂ ಧಕ್ಕೆ ತರುವ ಉದ್ದೇಶವಿರಲಿಲ್ಲ. ಇದು ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕವಿತೆ. ಇದು ಮಾತು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನ ಕಾನೂನುಬದ್ಧ ಆಚರಣೆಯಾಗಿದೆ ಎಂದು ವಾದಿಸಿದ್ದ. ಆರೋಪಿ ಪರ ವಕೀಲರು ಮತ್ತು ರಾಜ್ಯ ಪಿಪಿ ವಾದವನ್ನು ಆಲಿಸಿದ ನಂತರ, ಬಂಧನ ಮುನ್ನ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿತ್ತು. ಆರೋಪಿಯ ಕಸ್ಟಡಿ ವಿಚಾರಣೆ ಅನಿವಾರ್ಯ ಎಂದಿತ್ತು. ಕವಿತೆ ಪ್ರಕಟವಾದಂದಿನಿಂದ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯ ಗಮನಿಸಿತ್ತು. ಜಾಮೀನು ನಿರಾಕರಿಸಿದ ಹೈಕೋರ್ಟ್ ಆದೇಶದ ವಿರುದ್ಧ ಆರೋಪಿ ಸುಪ್ರೀಂ ಮೊರೆ ಹೋಗಿದ್ದ.
ಆಪಾದಿತ ವ್ಯಕ್ತಿ ತಾನು ʼನೀಲಭ್ ಸೌರವ್’ ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುವ ಕವಿ ಎಂದು ಹೇಳಿಕೊಂಡಿದ್ದಾನೆ. ಆದರೆ ಆರೋಪಿಯ ಉದ್ದೇಶ ಬಡ ದಿನಗೂಲಿ ಕಾರ್ಮಿಕರು ಎದುರಿಸುತ್ತಿರುವ ಸಂಕಷ್ಟಗಳನ್ನು ಚಿತ್ರಿಸುವುದಾಗಿತ್ತು ಎಂಬುದನ್ನು ಹೈಕೋರ್ಟ್ ಒಪ್ಪಿರಲಿಲ್ಲ.
ಇದನ್ನೂ ಓದಿ: CAA: ಸಿಎಎ ತಡೆ ಕೋರಿದ ಅರ್ಜಿಗಳು ಮಾ.19ರಂದು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ