ನವ ದೆಹಲಿ: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ಅವರ ವಿರುದ್ಧ ಭ್ರಷ್ಟಾಚಾರ ಪ್ರಕರಣದ (Corruption Case) ತನಿಖೆಗೆ ಕರ್ನಾಟಕ ಹೈಕೋರ್ಟ್ (Karnataka High Court) ವಿಧಿಸಿರುವ ಮಧ್ಯಂತರ ತಡೆಯಾಜ್ಞೆ ತೆರವಿಗೆ ಸಿಬಿಐ ಮಾಡಿರುವ ಮನವಿಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೋಟಿಸ್ (Supreme Court Notice) ಜಾರಿಗೊಳಿಸಿದೆ.
ಡಿಕೆ ಶಿವಕುಮಾರ್ ವಿರುದ್ಧದ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ಆದೇಶವನ್ನು ಪ್ರಶ್ನಿಸಿ ಸಿಬಿಐ ಸುಪ್ರಿಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಕರ್ನಾಟಕ ಹೈಕೋರ್ಟ್ ಹಲವು ಬಾರಿ ಮಧ್ಯಂತರ ತಡೆಯಾಜ್ಞೆಯನ್ನು ವಿಸ್ತರಿಸಿದೆ. ಹೀಗೆ ಆದಾಗಲೆಲ್ಲ ಸಿಬಿಐ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಿತ್ತು. ಹಿಂದಿನ ಕೆಲವು ಬಾರಿ ಅರ್ಜಿ ವಿಚಾರಣೆ ಮತ್ತು ಮಧ್ಯಪ್ರವೇಶಕ್ಕೆ ನಿರಾಕರಿಸಿದ್ದ ಸುಪ್ರೀಂಕೋರ್ಟ್ ಈ ಬಾರಿ ಅರ್ಜಿಯನ್ನು ಆಲಿಸಿದ ಡಿ.ಕೆ. ಶಿವಕುಮಾರ್ ಅವರಿಗೆ ನೋಟಿಸ್ ಜಾರಿ ಮಾಡಿದೆ.
ಏನಿದು ಪ್ರಕರಣ? ಸುಪ್ರೀಂಕೋರ್ಟ್ ಮಧ್ಯಪ್ರವೇಶ ಯಾಕೆ?
ಡಿ.ಕೆ ಶಿವಕುಮಾರ್ ಅವರು 2013ರಿಂದ 2018ರ ಅವಧಿಯಲ್ಲಿ ತಮ್ಮ ಆದಾಯಕ್ಕೂ ಮೀರಿ ಆಸ್ತಿ ಗಳಿಸಿದ್ದಾರೆ ಎಂದು ಸಿಬಿಐ 2020ರ ಅಕ್ಟೋಬರ್ 3ರಂದು ಭ್ರಷ್ಟಾಚಾರ ನಿಗ್ರಹ ಕಾಯ್ದೆ 1988ರ ಅಡಿಯಲ್ಲಿ 13(2), 13(1)ಇ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು.
ಈ ಪ್ರಕರಣವನ್ನು ರದ್ದು ಮಾಡಬೇಕು ಎಂದು ಕೋರಿ ಡಿಕೆ ಶಿವಕುಮಾರ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ತನಿಖೆಗೆ ಮಧ್ಯಂತರ ತಡೆ ತಡೆಯಾಜ್ಞೆ ನೀಡಿತ್ತು. ಅಷ್ಟೇ ಅಲ್ಲ ಆಗಾಗ ತಡೆಯಾಜ್ಞೆಯನ್ನು ವಿಸ್ತರಿಸುತ್ತಾ ಸಾಗಿತ್ತು. ಸಿಬಿಐ ಈ ಹಿಂದೆಯೇ ಒಮ್ಮೆ ಸುಪ್ರೀಂಕೋರ್ಟ್ ಮೊರೆ ಹೊಕ್ಕಿದ್ದರೂ ಆ ಹಂತದಲ್ಲಿ ಮಧ್ಯ ಪ್ರವೇಶ ಮಾಡಲು ಅದು ನಿರಾಕರಿಸಿತ್ತು. ಇದೀಗ ಮತ್ತೆ ಮತ್ತೆ ವಿಸ್ತರಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಿಬಿಐ ಹೈಕೋರ್ಟ್ನ ಮಧ್ಯಂತರ ಆದೇಶವನ್ನು ತೆರವು ಮಾಡಬೇಕು ಎಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.
ಇದೀಗ ನ್ಯಾಯಮೂರ್ತಿ ಅನಿರುದ್ಧ ಬೋಸ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠವು ಡಿಕೆ ಶಿವಕುಮಾರ್ ಅವರಿಗೆ ನೋಟಿಸ್ ನೀಡಿದೆ. ಇದರಂತೆ ಡಿ.ಕೆ. ಶಿವಕುಮಾರ್ ಅವರು ಸುಪ್ರೀಂಕೋರ್ಟ್‌ಗೆ ವಿವರಣೆಯನ್ನು ನೀಡಬೇಕಾಗಿದೆ.
ಇದನ್ನೂ ಓದಿ: DK Shivakumar : ಡಿ.ಕೆ ಶಿವಕುಮಾರ್‌ಗೆ ಬಿಗ್ ರಿಲೀಫ್; ಹೈಕೋರ್ಟ್ ತೀರ್ಪು ಎತ್ತಿಹಿಡಿದ ಸುಪ್ರೀಂಕೋರ್ಟ್
ಡಿ.ಕೆ. ಶಿವಕುಮಾರ್ ಅವರು ಗೊತ್ತಾದ ಆದಾಯ ಮೂಲಕ್ಕಿಂತ ಹೆಚ್ಚು ಸಂಪತ್ತು ಹೊಂದಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿ ಈಗಾಗಲೇ ಇ.ಡಿ ಮತ್ತು ಐಟಿ ಸಂಸ್ಥೆಗಳು ತನಿಖೆ ನಡೆಸಿವೆ. ಅದೇ ವಿಚಾರವನ್ನು ಮತ್ತೆ ಸಿಬಿಐ ತನಿಖೆ ಮಾಡಬೇಕಾದ ಅವಶ್ಯಕತೆ ಇಲ್ಲ. ಇದು ಸುಮ್ಮನೆ ಸಮಸ್ಯೆಯುಂಟು ಮಾಡಲು ಮಾಡುತ್ತಿರುವ ತಂತ್ರ. ಸಂಸ್ಥೆಗಳು ಸಮನ್ವಯದಿಂದ ಒಂದೇ ಬಾರಿ ತನಿಖೆ ನಡೆಸಬಹುದು ಎಂಬ ಅಭಿಪ್ರಾಯವೂ ಹೈಕೋರ್ಟ್ ವಿಚಾರಣೆ ಸಂದರ್ಭದಲ್ಲಿ ಚರ್ಚೆಗೆ ಬಂದಿತ್ತು.