ನವದೆಹಲಿ: 82 ವರ್ಷದ ಹೆಂಡತಿಯಿಂದ (82 year Old wife) ವಿಚ್ಛೇದನ ಕೋರಿದ್ದ 89 ವರ್ಷದ ವ್ಯಕ್ತಿಯ (89 Year Old husband) ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ತಿರಸ್ಕರಿಸಿದೆ. ಅರ್ಜಿದಾರ ವ್ಯಕ್ತಿ 27 ವರ್ಷಗಳ ಹಿಂದೆ ಡಿವೋರ್ಸ್‌ಗಾಗಿ ಅರ್ಜಿ (Divorceಏ Petition) ಸಲ್ಲಿಸಿದ್ದರು. ಆದರೆ, ಸುಪ್ರೀಂ ಕೋರ್ಟ್ ‘ವಿಶಿಷ್ಟ ಕಾರಣ’ ನೀಡಿ ವಿಚ್ಛೇದನ ನೀಡುವ ವ್ಯಕ್ತಿಯ ಹಕ್ಕನ್ನು ಈಗ ನಿರಾಕರಿಸಿದೆ. ಅರ್ಜಿದಾರರು 1996ರಲ್ಲಿ ಸ್ಥಳೀಯ ಕೋರ್ಟ್‌ನಲ್ಲಿ ಡಿವೋರ್ಸ್ ಅರ್ಜಿ ಸಲ್ಲಿಸಿದ್ದರು. ಹಲವು ಕಾನೂನು ಹಂತಗಳನ್ನು ದಾಟಿ ಪ್ರಕರಣವು ಈಗ ಸುಪ್ರೀಂ ಕೋರ್ಟ್ ತಲುಪಿತ್ತು. ಅಲ್ಲಿಯೂ ಅವರಿಗೆ ಡಿವೋರ್ಸ್ ಸಿಕ್ಕಿಲ್ಲ!
ಅರ್ಜಿದಾರ ನಿರ್ಮಲ್ ಸಿಂಗ್ ಪನೇಸರ್ ಅವರು ಪರಮ್‌ಜಿತ್ ಕೌರ್ ಅವರ ಜತೆಗೆ 1963ರಲ್ಲಿ ವಿವಾಹವಾಗಿದ್ದರು. ತಮ್ಮ ಹೆಂಡತಿಯ ಜತೆಗಿನ ಸಂಬಂಧವು 1984ರಿಂದಲೇ ಸರಿ ಹೊಂದಲಾರದಷ್ಟು ಹಾಳಾಗಿದೆ ಎಂದು ಆರೋಪಿಸಿ, 1996ರಲ್ಲಿ ಸ್ಥಳೀಯ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಇಂಡಿಯನ್ ಏರ್ ಫೋರ್ಸ್‌ನಲ್ಲಿ ಅಧಿಕಾರಿಯಾಗಿರುವ ನಿರ್ಮಲ್ ಸಿಂಗ್ ಅವರಿಗೆ 1984ರಲ್ಲಿ ಚೆನ್ನೈಗೆ ವರ್ಗಾವಣೆಯಾಯಿತು. ಆದರೆ, ಪತಿ ಜತೆ ಹೋಗಲು ಪತ್ನಿ ಪರಮ್‌ಜಿತ್ ಕೌರ್ ಪನೇಸರ್ ಅವರು ನಿರಾಕರಿಸಿದರು. ಈ ಹಂತದಿಂದಲೇ ಅವರಿಬ್ಬರ ಮಧ್ಯೆ ಬಿರುಕು ಮೂಡಲಾರಂಭಿಸಿತು.
ನಿರ್ಮಲ್ ಸಿಂಗ್ ವರು 1996ರಲ್ಲಿ ಮೊದಲಿಗೆ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದರು. ಕ್ರೌರ್ಯ ಮತ್ತು ಸಂಸಾರ ಬಿಟ್ಟು ಹೋಗಿರುವ ಕಾರಣ ನೀಡಿ ಡಿವೋರ್ಸ್ ಕೇಳಿದ್ದರು. ಮೊದಲಿಗೆ ನಿರ್ಮಲ್ ಸಿಂಗ್‌ಗೆ ಜಿಲ್ಲಾ ನ್ಯಾಯಾಲಯವು ಡಿವೋರ್ಸ್ ನೀಡಿತ್ತು. ಆದರೆ, ಪತ್ನಿ ಮೇಲ್ಮನವಿ ಸಲ್ಲಿಸಿದಾಗ, ವಿಚ್ಛೇದನವನ್ನು ತಡೆ ಹಿಡಿಯಿತು. ಅಂತಿಮವಾಗಿ ಹಲವು ಹಂತಗಳನ್ನು ದಾಟಿ ಈ ಡಿವೋರ್ಸ್ ಕೇಸ್ ಸುಪ್ರೀಂ ಕೋರ್ಟ್‌ಗೆ ಬರಲು 2 ದಶಕಗಳೇ ಕಳೆದವು! ಸುಪ್ರೀಂ ಕೋರ್ಟ್‌ನಲ್ಲಾದರೂ 89 ವರ್ಷದ ನಿರ್ಮಲ್ ಸಿಂಗ್ ಅವರಿಗೆ ಡಿವೋರ್ಸ್ ಸಿಗಲಿಲ್ಲ. ಈ ಪ್ರಕರಣವು ಡಿವೋರ್ಸ್‌ಗೆ ಯೋಗ್ಯವಾಗಿದ್ದರೂ ಅರ್ಜಿದಾರರ ಮನವಿಯನ್ನು ತಿರಸ್ಕರಿಸುತ್ತಿದ್ದೇವೆ ಎಂದು ಕೋರ್ಟ್ ಹೇಳಿತು.
ಈ ಸುದ್ದಿಯನ್ನೂ ಓದಿ: Supreme Court: ವೈದ್ಯಕೀಯ ನಿರ್ಲಕ್ಷ್ಯ ತೋರಿದ ಸೇನೆಗೆ ಸುಪ್ರೀಂ ಕೋರ್ಟ್ ತರಾಟೆ; ವಾಯುಪಡೆ ಯೋಧನಿಗೆ ₹1.5 ಕೋಟಿ ಪರಿಹಾರ ನೀಡಲು ಆದೇಶ
ವಿಚ್ಛೇದಿತೆ ಎಂಬ ಕಳಂಕದೊಂದಿಗೆ ಸಾಯಲಾರೆ!
ವೈವಾಹಿಕ ಪದ್ಧತಿಯು ಭಾರತೀಯ ಸಮಾಜದಲ್ಲಿ ಪತಿ ಮತ್ತು ಹೆಂಡತಿಯ ನಡುವಿನ ಧಾರ್ಮಿಕ, ಆಧ್ಯಾತ್ಮಿಕ ಮತ್ತು ಅಮೂಲ್ಯವಾದ ಭಾವನಾತ್ಮಕ ಜೀವನ ಜಾಲವೆಂದು ಪರಿಗಣಿಸಲಾಗಿದೆ ಎಂದು ಗುರುವಾರ ಪ್ರಕಟವಾದ ಸುಪ್ರೀಂ ಕೋರ್ಟ್‌ನ ತೀರ್ಪಿನಲ್ಲಿ ತಿಳಿಸಲಾಗಿದೆ. ‘ವಿಚ್ಛೇದಿತ ಎಂಬ ಕಳಂಕದಿಂದ ಸಾಯಲು ಬಯಸುವುದಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿರುವ ಪರಮ್‌ಜಿತ್ ಅವರಿಗೆ ಡಿವೋರ್ಸ್ ನೀಡುವುದು ‘ಅನ್ಯಾಯ’ವಾಗುತ್ತದೆ. ಹಾಗಾಗಿ ಕೋರ್ಟ್ ಪರಮ್‌ಜಿತ್ ಅವರ ಭಾವನೆಯನ್ನು ಗೌರವಿಸುತ್ತದೆ ಎಂದು ತೀರ್ಪಿನಲ್ಲಿ ತಿಳಿಸಲಾಗಿದೆ.
ಪತಿಯ ಜತೆಗೆ ಸುಮಧುರ ಬಾಂಧವ್ಯವನ್ನು ಕಾಪಾಡಿಕೊಳ್ಳಬೇಕಾದ ಎಲ್ಲ ಪ್ರಯತ್ನಗಳನ್ನು ನಾನು ಮಾಡಿದ್ದೇನೆ. ಈ ಇಳಿ ವಯಸ್ಸಿನಲ್ಲಿ ಪತಿಯನ್ನು ನೋಡಿಕೊಳ್ಳುವ ಸಂಬಂಧ ಇಷ್ಟೆಲ್ಲ ಮಾಡಿದ್ದೇನೆ ಎಂದೂ ಪರಮ್‌ಜಿತ್ ಅವರು ಕೋರ್ಟ್‌ಗೆ ತಿಳಿಸಿದ್ದಾರೆ. ಈ ಸಂಗತಿಯನ್ನು ಕೋರ್ಟ್ ಗಮನಿಸಿ, ತನ್ನ ತೀರ್ಪು ನೀಡಿದೆ. ಈ ದಂಪತಿಗೆ ಮೂರು ಮಕ್ಕಳಿದ್ದಾರೆ. ಭಾರತದಲ್ಲಿ ನ್ಯಾಯದಾನ ವಿಳಂಬಕ್ಕೆ ಇದೊಂದು ಕ್ಲಾಸಿಕ್ ಉದಾಹರಣೆಯಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
ದೇಶದ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.