Site icon Vistara News

Teachers Appointment : 13 ಸಾವಿರ ಶಿಕ್ಷಕರ ನೇಮಕಕ್ಕೆ ಮತ್ತೆ ವಿಘ್ನ; ಸುಪ್ರೀಂಕೋರ್ಟ್‌ ತಡೆಯಾಜ್ಞೆ

Teachers appointment

ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯು (Education Department) ನಡೆಸುತ್ತಿರುವ 13 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆಗೆ (Teachers appointment) ಸುಪ್ರೀಂಕೋರ್ಟ್‌ ತಡೆಯಾಜ್ಞೆ (Stay by Supreme court) ನೀಡಿದೆ. ನೇಮಕಗೊಂಡವರಲ್ಲಿ ಶೇಕಡಾ 80ರಷ್ಟು ಮಂದಿ ಈಗಾಗಲೇ ನೇಮಕ ಪತ್ರ ಪಡೆದುಕೊಂಡಿದ್ದಾರೆ. ಉಳಿದವರು ಇನ್ನೂ ಪಡೆದುಕೊಂಡಿಲ್ಲ. ಈಗ ಸುಪ್ರೀಂಕೋರ್ಟ್‌ ನೀಡಿರುವ ತಡೆ ಇನ್ನೂ ನೇಮಕಾತಿ ಪತ್ರ ಪಡೆದುಕೊಳ್ಳದ ಆಯ್ಕೆಯಾದ ಅಭ್ಯರ್ಥಿಗಳಿಗೆ ಅನ್ವಯವಾಗುತ್ತಿದೆ. ಆದರೆ, ಈಗಾಗಲೇ ನೇಮಕ ಪತ್ರ ಸ್ವೀಕರಿಸಿ ಕೆಲಸ ಆರಂಭಿಸಿರುವ ಶಿಕ್ಷಕರ ಕಥೆ ಏನು ಎನ್ನುವುದನ್ನು ಸುಪ್ರೀಂಕೋರ್ಟ್‌ ಸ್ಪಷ್ಟಪಡಿಸಬೇಕಾಗಿದೆ.

ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಹಲವು ಬಾರಿ ಆತಂಕಕ್ಕೆ ಒಳಗಾಗಿ, ತಡೆಗಳನ್ನು ಎದುರಿಸಿ ಅಂತಿಮವಾಗಿ ಹೈಕೋರ್ಟ್‌ ಅದಕ್ಕೆ ಅವಕಾಶವನ್ನು ನೀಡಿತ್ತು. ಹೈಕೋರ್ಟ್‌ನ ವಿಭಾಗೀಯ ಪೀಠವು ನೇಮಕಾತಿ ಪ್ರಕ್ರಿಯೆ ಮುಂದುವರಿಸಲು ತನ್ನ ಗ್ರೀನ್‌ ಸಿಗ್ನಲ್‌ ನೀಡಿತ್ತು. ಅಂತೆಯೇ ನೇಮಕಾತಿ ಪತ್ರಗಳನ್ನು ನೀಡಿ ಶೇ. 80ರಷ್ಟು ಮಂದಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ನಡುವೆ, ಚಿಕ್ಕಬಳ್ಳಾಪುರದ ಜಿ.ವಿ. ನರೇಂದ್ರ ಬಾಬು ಮತ್ತು ಇತರ ಕೆಲವು ಪರೀಕ್ಷಾರ್ಥಿಗಳು ಹೈಕೋರ್ಟ್‌ನ ವಿಭಾಗೀಯ ಪೀಠದ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ ಮೊರೆ ಹೊಕ್ಕಿದ್ದರು. ಇದೀಗ ಹಿಮಾ ಕೊಹ್ಲಿ ಮತ್ತು ಅಹ್ಸಾನುದ್ದೀನಾ ಅಮಾನುಲ್ಲಾ ಅವರನ್ನು ಒಳಗೊಂಡ ಪೀಠವು ನೇಮಕಾತಿ ಪ್ರಕ್ರಿಯೆಗೆ ತಡೆಯಾಜ್ಞೆ ನೀಡಿದೆ.

ಶಾಲಾ ಶಿಕ್ಷಣ ಇಲಾಖೆಯು 15 ಸಾವಿರ ಶಿಕ್ಷಕರ ನೇಮಕಾತಿಗೆ ಪ್ರಕ್ರಿಯೆಯನ್ನು ನಡೆಸಿತ್ತು. ಅದರಲ್ಲಿ 13,352 ಮಂದಿ ಆಯ್ಕೆಯಾಗಿದ್ದರು. ಇವರಿಗೆ 2023ರ ನವೆಂಬರ್‌ನಿಂದಲೇ ನೇಮಕಾತಿ ಆದೇಶ ಪ್ರತಿ ನೀಡಲು ಆರಂಭವಾಗಿತ್ತು. ಈಗಾಗಲೇ ಶೇ. 80ರಷ್ಟು ಮಂದಿ ನೇಮಕಾತಿ ಪತ್ರ ಸ್ವೀಕರಿಸಿದ್ದರು. ಆದರೆ, ಸಿಂಧುತ್ವ ಪ್ರಮಾಣಪತ್ರ ಪಡೆಯಲು ವಿಳಂಬವಾಗಿರುವ ಅಭ್ಯರ್ಥಿಗಳಿಗೆ ಆದೇಶ ಪ್ರತಿ ಪಡೆಯಲು ಸಾಧ್ಯವಾಗಿರಲಿಲ್ಲ.

ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕ ಪ್ರಕರಣ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ಕಾರಣ ಇಲ್ಲಿಯವರೆಗೂ ನೇಮಕಾತಿ ಪತ್ರ ತೆಗೆದುಕೊಳ್ಳದ ಶಿಕ್ಷಕರು ತಮ್ಮ ನೇಮಕಾತಿ ಆದೇಶ ಪ್ರತಿಯನ್ನು ಪಡೆಯಲು ಮತ್ತಷ್ಟು ದಿನ ಕಾಯಬೇಕಾಗಿದೆ.

ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ ಅಂಶಗಳೇನು?

ವಿವಾಹಿತ ಮಹಿಳೆಯರು ತಂದೆಯ ಆದಾಯ ಪ್ರಮಾಣಪತ್ರ ನೀಡಿ ನೇಮಕವಾಗಿರುವುದನ್ನು ಕರ್ನಾಟಕ ಹೈಕೋರ್ಟ್ ಸಮ್ಮತಿಸಿದೆ. ಇದನ್ನು ಪ್ರಶ್ನಿಸಿ ಕೆಲವು ಅಭ್ಯರ್ಥಿಗಳು ಸುಪ್ರೀಕೋರ್ಟ್ ಮೊರೆ ಹೊಕ್ಕಿದ್ದಾರೆ. ಇದರಿಂದ ತೀರ್ಪು ಪ್ರಕಟವಾಗುವ ತನಕ ಆದೇಶ ಪ್ರತಿ ನೀಡದಂತೆ ಶಿಕ್ಷಣ ಇಲಾಖೆಯು ಸಂಬಂಧಪಟ್ಟ ಜಿಲ್ಲಾ ಉಪನಿರ್ದೇಶಕರಿಗೆ ಸೂಚನೆ ನೀಡಿದೆ.

ಈ ಹಿನ್ನೆಲೆಯಲ್ಲಿ ಡಿಡಿಪಿಐ ಗಳು ಆದೇಶ ಪ್ರತಿ ನೀಡುವುದನ್ನು ಸ್ಥಗಿತಗೊಳಿಸಿದ್ದಾರೆ. ಸುಪ್ರೀಂ ಕೋರ್ಟ್‌ನಲ್ಲಿ ಮುಂದಿನ ವಿಚಾರಣೆ ಬಳಿಕ ನೀಡುವ ತೀರ್ಪಿನ ಆಧಾರದಲ್ಲಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

ಈ ನಡುವೆ, ಈಗಾಗಲೇ ಕರ್ತವ್ಯಕ್ಕೆ ಸೇರಿರುವ ಅಭ್ಯರ್ಥಿಗಳಿಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆಯಿಂದ ಯಾವುದೇ ತೊಂದರೆ ಇಲ್ಲ. ಅವರು ಸೇವೆ ಮುಂದುವರಿಸಬಹುದು ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ. ಒಂದು ವೇಳೆ ಸುಪ್ರೀಂಕೋರ್ಟ್‌ ವ್ಯತಿರಿಕ್ತ ತೀರ್ಪು ನೀಡಿದರೆ ಆಗ ಇಲಾಖೆಯೇ ಸೂಚನೆ ನೀಡಲಿದೆ.

Exit mobile version