ಬೆಂಗಳೂರು: ಹುಲಿಯ ಉಗುರು (Tiger Nail) ಇರುವ ಪೆಂಡೆಂಟ್ ಧರಿಸಿದ ಕಾರಣಕ್ಕೆ ಬಂಧನಕ್ಕೆ ಒಳಗಾಗಿರುವ ಬಿಗ್ ಬಾಸ್ ಸೀಸನ್ 10 (BBK Season 10) ಸ್ಪರ್ಧಿ, ರೈತ ವರ್ತೂರು ಸಂತೋಷ್ (Varthuru Santhosh) ಅವರ ಜಾಮೀನು ಅರ್ಜಿಯ ವಿಚಾರಣೆ ಗುರುವಾರ ನಗರದ ಎಸಿಜೆಎಂ ನ್ಯಾಯಾಲಯದಲ್ಲಿ ನಡೆಯಿತು. ಸರ್ಕಾರಿ ಅಭಿಯೋಜಕರು ಮತ್ತು ವರ್ತೂರು ಸಂತೋಷ್ ಅವರ ವಕೀಲರ ವಾದವನ್ನು ಆಲಿಸಿದ ನ್ಯಾಯಾಧೀಶರು ತೀರ್ಪನ್ನು ಶುಕ್ರವಾರ (ಅ. 27)ಕ್ಕೆ ಕಾಯ್ದಿರಿಸಿದರು.
ಬಿಗ್ ಬಾಸ್ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಅವರು ಕೊರಳಿಗೆ ಹಾಕಿದ ಪೆಂಡೆಂಟ್‌ನಲ್ಲಿ ಹುಲಿಯ ಉಗುರು ಇರುವುದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದೊಡ್ಮನೆಗೇ ದಾಳಿ ಮಾಡಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು. ಕಳೆದ ಭಾನುವಾರ ಈ ದಾಳಿ ನಡೆದು ಬಂಧಿಸಿದ ಬಳಿಕ ಸೋಮವಾರ ಬೆಳಗ್ಗಿನ ಹೊತ್ತು ರಾಮೋಹಳ್ಳಿ ಅರಣ್ಯ ಇಲಾಖೆ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಅಲ್ಲಿ ಎಲ್ಲ ಮಾಹಿತಿಗಳನ್ನು ಪಡೆದ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದರು.
ಪ್ರಾಥಮಿಕ ಮಾಹಿತಿಗಳನ್ನು ಪಡೆದ ಕೋರ್ಟ್ ವರ್ತೂರು ಸಂತೋಷ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಈ ನಡುವೆಗೆ ಸಂತೋಷ್ ಪರ ವಕೀಲರು ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಿದ್ದರು.
ಸಂತೋಷ್ ಜಾಮೀನು ಅರ್ಜಿಯ ವಿಚಾರಣೆ ಬುಧವಾರಕ್ಕೆ ನಿಗದಿಯಾಗಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‌ಗೆ ನೀಡದೆ ಇದ್ದುದರಿಂದ ಬುಧವಾರ ವಿಚಾರಣೆ ನಡೆದಿರಲಿಲ್ಲ.
ಗುರುವಾರ 2ನೇ ಎಸಿಜೆಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆಯಿತು. ಸಂತೋಷ್ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದರು.
ಸಂತೋಷ್ ಅವರ ಬಂಧನದ ವಿಚಾರದಲ್ಲಿ ಅರಣ್ಯಾಧಿಕಾರಿಗಳು ನಿಯಮಾವಳಿ ಪಾಲಿಸಿಲ್ಲ. ಸಂತೋಷ್ ಅವರನ್ನು ವಿಚಾರಣೆ ನಡೆಸಿ ಮಾಹಿತಿ ಪಡೆದುಕೊಂಡು, ಇರುವ ಪೆಂಡೆಂಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕಿತ್ತು. ಆದರೆ, ಅದ್ಯಾವುದನ್ನೂ ಮಾಡದೆ ನೇರವಾಗಿ ಬಿಗ್ ಬಾಸ್ ಮನೆಗೆ ನುಗ್ಗಿ ಬಂಧಿಸಲಾಗಿದೆ ಎಂದು ವಕೀಲರು ಹೇಳಿದ್ದರು. ಎರಡೂ ವಾದಗಳನ್ನು ಆಲಿಸಿದ ನ್ಯಾಯಾಧೀಶರು ಶುಕ್ರವಾರ ತೀರ್ಪು ನೀಡುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: Tiger Nail : ಹುಲಿಯುಗುರು ಇರುವ ಡಾಲರ್ ಹಾಕಿಕೊಂಡಿದ್ದ ಇಬ್ಬರು ಅರ್ಚಕರ ಅರೆಸ್ಟ್!
ಎಲ್ಲ ಕಡೆ ದೂರು, ದಾಳಿಗಳ ಮಹಾಪೂರ
ಸಂತೋಷ್ ಬಂಧನದ ಬಳಿಕ ರಾಜ್ಯಾದ್ಯಂತ ಹುಲಿಯುಗುರಿನದ್ದೇ ಸದ್ದು. ಸಾರ್ವಜನಿಕರು ಹುಲಿಯುಗುರಿನ ದುರ್ಬಳಕೆ ಬಗ್ಗೆ ಹಲವಾರು ದೂರುಗಳನ್ನು ನೀಡುತ್ತಿದ್ದಾರೆ. ಸೆಲೆಬ್ರಿಟಿಗಳು, ರಾಜಕಾರಣಿಗಳು, ರೌಡಿಗಳು ಹುಲಿಯುಗುರು ಬಳಸುತ್ತಿರುವುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಹಲವಾರು ಮಂದಿಗೆ ನೋಟಿಸ್ ನೀಡಿದ್ದಾರೆ. ದರ್ಶನ್, ರಾಕ್‌ಲೈನ್ ವೆಂಕಟೇಶ್, ಜಗ್ಗೇಶ್, ನಿಖಿಲ್ ಕುಮಾರಸ್ವಾಮಿ ಮೊದಲಾದ ಚಿತ್ರನಟರ ಮನೆಗೇ ಲಗ್ಗೆ ಇಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಇಬ್ಬರು ಅರ್ಚಕರನ್ನು ಬಂಧಿಸಲಾಗಿದೆ. ಗೌರಿಗದ್ದೆಯ ವಿನಯ ಗುರೂಜಿ, ಕುಣಿಗಲ್ ಧನಂಜಯ ಸ್ವಾಮೀಜಿ ಅವರ ವಿಚಾರಣೆ ನಡೆಸಲಾಗಿದೆ. ಈಗ ಹುಲಿ ಉಗುರು ಹೊಂದಿದ ಪೆಂಡೆಂಟ್ ಧರಿಸಿದವರಿಗೆ ಭಯ ಶುರುವಾಗಿದೆ.