ಬೆಂಗಳೂರು: ಹುಲಿ ಉಗುರಿನ (Tiger Nail) ಪೆಂಡೆಂಟ್ ಧರಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಬಿಗ್ ಬಾಸ್ ಸೀಸನ್ 10 (BBK Season 10) ಸ್ಪರ್ಧಿ, ಪ್ರಗತಿಪರ ಕೃಷಿಕ ವರ್ತೂರು ಸಂತೋಷ್ (Varthur Santhosh) ಅವರಿಗೆ ಕೋರ್ಟ್ ಜಾಮೀನು ನೀಡಿದೆ. ಬೆಂಗಳೂರಿನ 2ನೇ ಎಸಿಜೆಎಂ ನ್ಯಾಯಾಲಯವು ಗುರುವಾರ ಸಂತೋಷ್ ಜಾಮೀನು ಅರ್ಜಿ ಮೇಲಿನ ತನ್ನ ತೀರ್ಪನ್ನು ಪ್ರಕಟಿಸಿದ್ದು, ಜಾಮೀನಿನ ಮೂಲಕ ಬಿಡುಗಡೆಗೆ ಅವಕಾಶ ನೀಡಿದೆ.
ನಾಲ್ಕು ಸಾವಿರ ರೂ. ಮತ್ತು ಒಬ್ಬರ ಶೂರಿಟಿ ಆಧಾರದಲ್ಲಿ ನ್ಯಾಯಮೂರ್ತಿಗಳಾದ ನಾಗೇಂದ್ರ ಅವರು ಸಂತೋಷ್ ಬಿಡುಗಡೆ ಮಾಡಬಹುದು ಎಂದು ಆದೇಶದಲ್ಲಿ ತಿಳಿಸಿದರು. ಇದರೊಂದಿಗೆ ಕಳೆದ ಸೋಮವಾರದಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಸಂತೋಷ್ ಅವರಿಗೆ ಬಂಧಮುಕ್ತಿಯಾಗಲಿದೆ.
ಹುಲಿಯುಗುರಿನ ಪೆಂಡೆಂಟ್ ಧರಿಸಿದ್ದನ್ನು ಟಿವಿಯಲ್ಲಿ ಗಮನಿಸಿದ್ದ ಅರಣ್ಯಾಧಿಕಾರಿಗಳು ಕಳೆದ ಭಾನುವಾರ ಬಿಗ್ ಬಾಸ್ ಮನೆಗೇ ದಾಳಿ ನಡೆಸಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು.. ಸೋಮವಾರ ಅವರನ್ನು ಕೋರ್ಟ್‌ಗೆ ಹಾಜರುಪಡಿಸಿದಾಗ ಕೋರ್ಟ್‌ಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿತ್ತು. ಅದರ ನಡುವೆ ಸಲ್ಲಿಸಿದ ಜಾಮೀನು ಅರ್ಜಿಯ ವಿಚಾರಣೆಯ ಬಳಿಕ ಈಗ ಜಾಮೀನಿನಡಿ ಬಿಡುಗಡೆಗೆ ಕೋರ್ಟ್ ಆದೇಶ ಮಾಡಿದೆ. ಇದರೊಂದಿಗೆ ಭಾರಿ ಸದ್ದು ಮಾಡಿದ್ದ ಪ್ರಕರಣ ಹೊಸ ತಿರುವು ಪಡೆದಂತಾಗಿದೆ.
ಬಿಗ್ ಬಾಸ್ ಸ್ಪರ್ಧಿಯಾಗಿರುವ ವರ್ತೂರು ಸಂತೋಷ್ ಅವರು ಕೊರಳಿಗೆ ಹಾಕಿದ ಪೆಂಡೆಂಟ್‌ನಲ್ಲಿ ಹುಲಿಯ ಉಗುರು ಇರುವುದನ್ನು ಗಮನಿಸಿದ ಅರಣ್ಯ ಇಲಾಖೆ ಅಧಿಕಾರಿಗಳು ದೊಡ್ಮನೆಗೇ ದಾಳಿ ಮಾಡಿ ವರ್ತೂರು ಸಂತೋಷ್ ಅವರನ್ನು ಬಂಧಿಸಿದ್ದರು. ಕಳೆದ ಭಾನುವಾರ ಈ ದಾಳಿ ನಡೆದು ಬಂಧಿಸಿದ ಬಳಿಕ ಸೋಮವಾರ ಬೆಳಗ್ಗಿನ ಹೊತ್ತು ರಾಮೋಹಳ್ಳಿ ಅರಣ್ಯ ಇಲಾಖೆ ಕಚೇರಿಯಲ್ಲಿ ವಿಚಾರಣೆ ನಡೆಸಲಾಗಿತ್ತು. ಅಲ್ಲಿ ಎಲ್ಲ ಮಾಹಿತಿಗಳನ್ನು ಪಡೆದ ಬಳಿಕ ಕೋರ್ಟ್‌ಗೆ ಹಾಜರುಪಡಿಸಿದ್ದರು. ಪ್ರಾಥಮಿಕ ಮಾಹಿತಿಗಳನ್ನು ಪಡೆದ ಕೋರ್ಟ್ ವರ್ತೂರು ಸಂತೋಷ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು.
ಸಂತೋಷ್ ಜಾಮೀನು ಅರ್ಜಿಯ ವಿಚಾರಣೆ ಬುಧವಾರಕ್ಕೆ ನಿಗದಿಯಾಗಿತ್ತು. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಬಂಧನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಕೋರ್ಟ್‌ಗೆ ನೀಡದೆ ಇದ್ದುದರಿಂದ ಬುಧವಾರ ವಿಚಾರಣೆ ನಡೆದಿರಲಿಲ್ಲ. ಗುರುವಾರ 2ನೇ ಎಸಿಜೆಎಂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ ನಡೆದು ಸಂತೋಷ್ ಪರ ವಕೀಲರು ಸಲ್ಲಿಸಿದ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ಆಕ್ಷೇಪಣೆ ಸಲ್ಲಿಸಿದ್ದರು. ವಾದಗಳನ್ನು ಆಲಿಸಿದ ನ್ಯಾಯಮೂರ್ತಿಗಳು ಶುಕ್ರವಾರ ತೀರ್ಪನ್ನು ನೀಡಿದರು.
ಇದನ್ನೂ ಓದಿ: Tiger Nail : ಲಕ್ಷ್ಮೀ ಹೆಬ್ಬಾಳ್ಕರ್ ಮನೆಗೂ ಅಧಿಕಾರಿಗಳ ಲಗ್ಗೆ; ಮಗ ಮೃಣಾಲ್ ಪೆಂಡೆಂಟ್ ವಶಕ್ಕೆ
ಬಿಗ್ ಬಾಸ್‌ಗೆ ಮತ್ತೆ ಎಂಟ್ರಿ ಕೊಡ್ತಾರಾ ಸಂತೋಷ್?
ಈ ನಡುವೆ ಜಾಮೀನು ಪಡೆದಿರುವ ವರ್ತೂರು ಸಂತೋಷ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಡ್ತಾರಾ ಎಂಬ ಪ್ರಶ್ನೆ ಉದ್ಭವವಾಗಿದೆ. ಈ ಬಗ್ಗೆ ಕಲರ್ಸ್ ಕನ್ನಡ ವಾಹಿನಿ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಬಹುತೇಕ ಬಿಗ್ ಬಾಸ್ ಹೋಗಬಹುದು ಎಂದೇ ಹೇಳಲಾಗುತ್ತಿದೆ.
ನ್ಯಾಯಕ್ಕೆ ಸಿಕ್ಕ ಜಯ ಎಂದ ಸಂತೋಷ್ ಪರ ವಕೀಲರು
ವರ್ತೂರು ಸಂತೋಷ್‌ಗೆ ಜಾಮೀನು ಸಿಕ್ಕಿದ್ದು ಸಂತೋಷವಾಗಿದೆ. ವರ್ತೂರು ಸಂತೋಷ್ ಬಂಧನ ಕೃತ್ಯ ಕಾನೂನು ಬಾಹಿರವಾಗಿದೆ.. ಬಂಧನಕ್ಕೂ ಮುನ್ನ ನೋಟಿಸ್ ನೀಡಬೇಕಿತ್ತು. ಯಾವುದೇ ನೋಟಿಸ್ ನೀಡದೆ ಏಕಾಏಕಿ ಬಂಧನ ಮಾಡಿದ್ದು ಸರಿಯಲ್ಲ. ಅದನ್ನು ಪೊಲೀಸ್ ಠಾಣೆಗೆ ಹೋಗಿ ಅರಿವು ಮೂಡಿಸುವ ಕೆಲಸ ಮಾಡಲಾಗಿತ್ತು. ಆದರೆ ಅರಣ್ಯಾಧಿಕಾರಿಗಳು ನಮ್ಮಮಾತಿಗೆ ಅವಕಾಶ ನೀಡಲಿಲ್ಲ ಎಂದು ಸಂತೋಷ್ ಪರ ವಕೀಲ ನಟರಾಜ್ ಹೇಳಿದರು.
ಮುಂದಿನ ಕಾನೂನು ಹೋರಾಟದ ಬಗ್ಗೆ ವರ್ತೂರು ಸಂತೋಷ್ ಬಳಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರುತ್ತೇವೆ ಎಂದರು.