Site icon Vistara News

Shakthi Scheme : ಖಾಸಗಿ ಬಸ್‌ಗೂ ವಿಸ್ತರಣೆ ಆಗುತ್ತಾ ಶಕ್ತಿ ಯೋಜನೆ? ಹೈಕೋರ್ಟ್‌ ಹೇಳಿದ್ದೇನು?

Private Buses Shakti Scheme

ಬೆಂಗಳೂರು: ರಾಜ್ಯಾದ್ಯಂತ ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ (Free Bus service) ಅವಕಾಶವನ್ನು ಒದಗಿಸಿರುವ ಶಕ್ತಿ ಯೋಜನೆ (Shakthi Scheme) ಖಾಸಗಿ ಬಸ್‌ಗಳಿಗೂ (Private Buses) ವಿಸ್ತರಣೆ ಆಗಲಿದೆಯಾ? ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ (Karnataka High Court) ಮಹತ್ವದ ಸೂಚನೆ ನೀಡಿದೆ.

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಇತ್ಯರ್ಥಪಡಿಸಿದ ಕರ್ನಾಟಕ ಹೈಕೋರ್ಟ್, ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ರಾಜ್ಯ ಸರ್ಕಾರಕ್ಕೆ ಶುಕ್ರವಾರ ನಿರ್ದೇಶನ ನೀಡಿದೆ.

ರಾಜ್ಯದ ಕೆಲವು ಭಾಗಗಳಲ್ಲಿ ಸರ್ಕಾರಿ ಬಸ್‌ ಸೌಲಭ್ಯ ಇಲ್ಲ. ಹೀಗಾಗಿ ಅಲ್ಲಿನ ಜನರಿಗೂ ಯೋಜನೆಯ ಲಾಭ ದೊರೆಯುವಂತಾಗಲು ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ ಗಳಿಗೂ ವಿಸ್ತರಿಸಬೇಕು ಎಂಬ ಬೇಡಿಕೆ ಕೆಲವು ಕಡೆ ಕೇಳಿಬಂದಿತ್ತು. ಇದೀಗ ಖಾಸಗಿ ಬಸ್‌ ಮಾಲೀಕರೊಬ್ಬರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದಾರೆ.

ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಉಡುಪಿ ಜಿಲ್ಲೆ ಕಾರ್ಕಳದ ಖಾಸಗಿ ಬಸ್ ಆಪರೇಟರ್ ಶರತ್‌ಕುಮಾರ್ ಶೆಟ್ಟಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಸ್ ಆರ್ ಕೃಷ್ಣ ಕುಮಾರ್ ಅವರ ನೇತೃತ್ವದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರು ಸಲ್ಲಿಸಿರುವ ಮನವಿಯನ್ನು ಎರಡು ತಿಂಗಳೊಳಗೆ ಕಾನೂನು ರೀತ್ಯಾ ಪರಿಶೀಲಿಸಲು ಸರ್ಕಾರಕ್ಕೆ ನಿರ್ದೇಶನ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿ ನ್ಯಾಯಾಲಯ ಆದೇಶಿಸಿದೆ. ಅರ್ಜಿದಾರರ ಪರ ಹಿರಿಯ ವಕೀಲ ಪುತ್ತಿಗೆ ರಮೇಶ್ ವಾದಿಸಿದರು.

ಇದನ್ನೂ ಓದಿ : Shakti Scheme: ತಾಯಂದಿರಿಗೆ ಶಕ್ತಿ ಕೊಟ್ಟು, ಅವರ ಮಕ್ಕಳಿಗೆ ಕಷ್ಟ ಕೊಟ್ಟ ಸರ್ಕಾರ; ವಿಡಿಯೊ ಹಾಕಿ ಎಚ್‌ಡಿಕೆ ಕಿಡಿ

ಬಸ್‌ ಮಾಲೀಕರ ಮನವಿಯಲ್ಲಿ ಏನಿದೆ?

  1. 1. ರಾಜ್ಯದಲ್ಲಿ ಖಾಸಗಿ ಬಸ್‌ಗಳ ಸಂಚಾರಕ್ಕೆ 65 ವರ್ಷಗಳ ಇತಿಹಾಸವಿದೆ. ಸುಮಾರು 16 ಜಿಲ್ಲೆಗಳಲ್ಲಿ 9 ಸಾವಿರಕ್ಕೂ ಅಧಿಕ ಖಾಸಗಿ ಬಸ್‌ಗಳು ಸೇವೆ ಒದಗಿಸುತ್ತಿವೆ.
  2. 2.ರಾಜ್ಯದಲ್ಲಿ 75 ಸಾವಿರ ಕಾರ್ಮಿಕರು ಖಾಸಗಿ ಬಸ್‌ಗಳ ಮೇಲೆ ಅವಲಂಬಿತರಾಗಿದ್ದಾರೆ.
  3. 3. ಖಾಸಗಿ ಬಸ್ ಆಪರೇಟರ್‌ಗಳು ಅತಿ ಹೆಚ್ಚು ತೆರಿಗೆ ಪಾವತಿದಾರರಾಗಿದ್ದು, ವಾರ್ಷಿಕ 1,620 ಕೋಟಿ ರೂಪಾಯಿ ತೆರಿಗೆ ಸಂಗ್ರಹವಾಗುತ್ತಿದೆ.
  4. 4. ಶಕ್ತಿ ಯೋಜನೆ ಜಾರಿಗೆ ಬಂದ ದಿನದಿಂದ ಖಾಸಗಿ ಬಸ್ ಆಪರೇಟರ್‌ಗಳ ಸಂಕಷ್ಟ ಪ್ರಾರಂಭವಾಗಿದೆ. ಹೀಗಾಗಿ, ಶಕ್ತಿ ಯೋಜನೆಯನ್ನು ಖಾಸಗಿ ಬಸ್‌ಗಳಿಗೂ ಅನ್ವಯ ಮಾಡಬೇಕು.
  5. 5.ಸರ್ಕಾರಿ ಬಸ್‌ಗಳಂತೆ ಖಾಸಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಪ್ರಯಾಣ ವೆಚ್ಚವನ್ನು ಸರ್ಕಾರ ಖಾಸಗಿ ಬಸ್ ಆಪರೇಟರ್‌ಗಳಿಗೆ ಮರು ಪಾವತಿ ಮಾಡಬೇಕು.
  6. 6. ಸರ್ಕಾರ ಹಾಗೂ ಸಾರಿಗೆ ಇಲಾಖೆಗೆ 2023ರ ಜುಲೈ 26ರಂದು ಸಲ್ಲಿಸಿರುವ ಮನವಿಯನ್ನು ಪರಿಗಣಿಸಲು ಆದೇಶ ನೀಡಬೇಕು ಎಂದು ಅರ್ಜಿದಾರರು ದಾವೆಯಲ್ಲಿ ಆಗ್ರಹಿಸಿದ್ದಾರೆ.
Exit mobile version