Site icon Vistara News

ZP TP Election : ಲೋಕಸಭೆಗೂ ಮೊದಲೇ ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆ?

ZP TP Elections 2024

ಬೆಂಗಳೂರು: ರಾಜ್ಯ ಸರ್ಕಾರವು ಕರ್ನಾಟಕ ಹೈಕೋರ್ಟ್‌ (Karnataka High court) ಮುಂದೆ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಇನ್ನು ಒಂದು ತಿಂಗಳಲ್ಲಿ ಮಹತ್ವದ ಜಿಲ್ಲಾ ಪಂಚಾಯಿತಿ (Zilla Panchayat) ಮತ್ತು ತಾಲೂಕು ಪಂಚಾಯಿತಿ ಚುನಾವಣಾ (Taluk panchayat Elections) ಪ್ರಕ್ರಿಯೆಗಳು ಆರಂಭವಾಗಲಿವೆ. ಮಂಗಳವಾರ ಹೈಕೋರ್ಟ್‌ ಮುಂದೆ ಅಡ್ವೊಕೇಟ್‌ ಜನರಲ್‌ (Advocate general) ಅವರು ಮಹತ್ವದ ಹೇಳಿಕೆಯನ್ನು ನೀಡಿದ್ದು, ಒಂದು ವಾರದಲ್ಲಿ ಮೀಸಲಾತಿ ಕರಡು ಅಧಿಸೂಚನೆ (Reservation draft Notification) ಪ್ರಕಟಿಸುವುದಾಗಿ ತಿಳಿಸಿದ್ದರು. ಇದನ್ನು ಗಮನಿಸಿದರೆ ಲೋಕಸಭಾ ಚುನಾವಣೆಗೂ (Loksabha Elections 2024) ಮೊದಲೇ ರಾಜ್ಯದಲ್ಲಿ ಜಿಪಂ, ತಾಪಂ ಚುನಾವಣೆ (ZP

TP Election) ನಡೆಯುವ ಸಾಧ್ಯತೆ ಇದೆ.

ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತರಲಾಗಿತ್ತು. ಇದನ್ನೂ ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಮಂಗಳವಾರ ನಡೆಸಿತು. ಈ ಸಂದರ್ಭದಲ್ಲಿ ಅಡ್ವೊಕೇಟ್‌ ಜನರಲ್‌ ನೀಡಿದ ಹೇಳಿಕೆಯನ್ನು ಮುಚ್ಚಳಿಕೆಯನ್ನಾಗಿ ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಅರ್ಜಿ ಇತ್ಯರ್ಥಪಡಿಸಿತು.

ವಿಚಾರಣೆ ಆರಂಭವಾಗುತ್ತಿದ್ದಂತೆ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಇಂದು ಮಧ್ಯಾಹ್ನದ ವೇಳೆಗೆ ಕ್ಷೇತ್ರ ಪುನರ್‌ ವಿಂಗಡಣೆ ಪ್ರಕ್ರಿಯೆ ಅಧಿಸೂಚನೆ ಪೂರ್ಣಗೊಳ್ಳಲಿದೆ. ಒಂದು ವಾರದಲ್ಲಿ ಮೀಸಲಾತಿ ಕರಡು ಅಧಿಸೂಚನೆ ಹೊರಡಿಸಲಾಗುವುದು. ಇದಕ್ಕೆ ಆಕ್ಷೇಪಣೆ ಸಲ್ಲಿಸಲು 10 ದಿನ ಕಾಲಾವಕಾಶ ಇರಲಿದೆ. ಆ ಬಳಿಕ ಸಂಬಂಧಿತ ಪ್ರಾಧಿಕಾರಗಳು ಎರಡು ವಾರಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಲಿವೆ” ಎಂದರು.

ಇದಕ್ಕೆ ರಾಜ್ಯ ಚುನಾವಣಾ ಆಯೋಗ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಎನ್‌ ಫಣೀಂದ್ರ ಆಕ್ಷೇಪಿಸಿದರು. ಸರ್ಕಾರದ ಹೇಳಿಕೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ZP TP Elections: 10 ವಾರದೊಳಗೆ ಜಿಪಂ, ತಾಪಂ ಮೀಸಲಾತಿ ಫೈನಲ್: ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಆಗ ಮಧ್ಯ ಪ್ರವೇಶಿಸಿದ ನ್ಯಾ. ದೀಕ್ಷಿತ್‌ ಅವರು “ಎಜಿ ಸಾಂವಿಧಾನಿಕ ಫಂಕ್ಷನರಿ. ಅವರನ್ನು ನಂಬಬಾರದೇ? ಕ್ಷೇತ್ರ ಪುನರ್‌ ವಿಂಗಡಣೆ ಇಂದು ಮಧ್ಯಾಹ್ನ ಪೂರ್ಣಗೊಳ್ಳಲಿದೆ ಎಂದು ನೀವು (ಎಜಿ) ಹೇಳುತ್ತಿದ್ದೀರಿ. ಅದನ್ನು ಲಿಖಿತವಾಗಿ ತಿಳಿಸಿ. ನಿಮ್ಮ ಹೇಳಿಕೆಯನ್ನು ಮುಚ್ಚಳಿಕೆಯನ್ನಾಗಿ ಪರಿಗಣಿಸಲಾಗುವುದು” ಎಂದರು.

ಅಂತಿಮವಾಗಿ ಪೀಠವು “ಎಜಿ ಅವರ ಹೇಳಿಕೆಯನ್ನು ಮುಚ್ಚಳಿಕೆಯನ್ನಾಗಿ ಪರಿಗಣಿಸಲಾಗಿದೆ. ಈ ಸಂಬಂಧ ಅವರು ನ್ಯಾಯಾಲಯಕ್ಕೆ ಮೆಮೊ ಸಲ್ಲಿಸಬೇಕು. ಸರ್ಕಾರ ಮುಚ್ಚಳಿಕೆ ಉಲ್ಲಂಘಿಸಿದರೆ ಆಯೋಗವು ನ್ಯಾಯಾಲಯದ ಮೆಟ್ಟಿಲೇರಬಹುದು. ಅರ್ಜಿಯಲ್ಲಿ ಎತ್ತಿರುವ ಇತರೆ ಅಂಶಗಳನ್ನು ಮುಕ್ತವಾಗಿ ಇರಲಿಸಲಾಗಿದ್ದು, ಅವುಗಳನ್ನು ಸೂಕ್ತ ಸಂದರ್ಭದಲ್ಲಿ ಕೈಗೆತ್ತಿಕೊಳ್ಳಲಾಗುವುದು” ಎಂದು ಆದೇಶದಲ್ಲಿ ದಾಖಲಿಸಿ, ಅರ್ಜಿ ಇತ್ಯರ್ಥಪಡಿಸಿತು.

ಲೋಕಸಭಾ ಚುನಾವಣೆಗೂ ಮೊದಲೇ ಜಿಪಂ, ತಾಪಂ ಚುನಾವಣೆ?

ಸರ್ಕಾರ ಈಗ ನೀಡಿರುವ ಹೇಳಿಕೆಯನ್ನು ಗಮನಿಸಿದರೆ ಮಾರ್ಚ್‌, ಏಪ್ರಿಲ್‌ ವೇಳೆಗೆ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಚುನಾವಣೆಯನ್ನು ನಡೆಸುವ ಸಾಧ್ಯತೆಗಳು ಕಂಡುಬರುತ್ತಿವೆ. ಆದರೆ, ಇದು ನಿಜವೇ ಎನ್ನುವುದು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.

Exit mobile version