ಹೈದರಾಬಾದ್: ಸೆಲೆಬ್ರಿಟಿ ಫ್ಯಾಶನ್ ಡಿಸೈನರ್ ಪ್ರತ್ಯೂಷಾ ಗರಿಮೆಲ್ಲ ಶನಿವಾರ ತೆಲಂಗಾಣದ ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ ತಮ್ಮ ನಿವಾಸದಲ್ಲಿ ಅನುಮಾನಾಸ್ಪದವಾಗಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರತ್ಯೂಷಾ ಗರಿಮೆಲ್ಲ ಎಂಬ ಹೆಸರಿನ ತಮ್ಮದೇ ಲೇಬಲ್‌ನ ಸಂಸ್ಥಾಪಕಿಯಾಗಿದ್ದ ಪ್ರತ್ಯೂಷಾ, ಬಂಜಾರಾ ಹಿಲ್ಸ್‌ನಲ್ಲಿ ಫ್ಯಾಶನ್ ಸ್ಟುಡಿಯೋ ನಡೆಸುತ್ತಿದ್ದರು. ಟಾಲಿವುಡ್, ಬಾಲಿವುಡ್ ಮತ್ತು ಇತರ ಕ್ಷೇತ್ರಗಳ ಗಣ್ಯ ಗ್ರಾಹಕರನ್ನು ಹೊಂದಿದ್ದರು.
ಆಕೆ ಸ್ನಾನಗೃಹದಲ್ಲಿ ಶವವಾಗಿ ಬಿದ್ದಿರುವುದು ಪತ್ತೆಯಾಗಿದ್ದು, ಆಕೆಯ ಮೃತದೇಹವನ್ನು ಉಸ್ಮಾನಿಯಾ ಆಸ್ಪತ್ರೆಗೆ ಪೋಸ್ಟ್ ಮಾರ್ಟಮ್‌ಗಾಗಿ ರವಾನಿಸಲಾಗಿದೆ ಎಂದು ಬಂಜಾರಾ ಹಿಲ್ಸ್‌ನ ಸರ್ಕಲ್ ಇನ್ಸ್‌ಪೆಕ್ಟರ್ ತಿಳಿಸಿದ್ದಾರೆ. ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಆಕೆಯ ಮಲಗುವ ಕೋಣೆಯಿಂದ ಕಾರ್ಬನ್ ಮಾನಾಕ್ಸೈಡ್ ಸಿಲಿಂಡರ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಬಂಜಾರ ಹಿಲ್ಸ್‌ನಲ್ಲಿ ಅನುಮಾನಾಸ್ಪದ ಸಾವು ಪ್ರಕರಣದಡಿ ಪ್ರಕರಣ ದಾಖಲಾಗಿದೆ.
ಕಳೆದ ವರ್ಷ ಪ್ರತ್ಯುಷಾ ತಮ್ಮ ಫ್ಯಾಶನ್ ವೃತ್ತಿಜೀವನವನ್ನು ಪ್ರಾರಂಭಿಸಿದ್ದರು. ಅದಕ್ಕೂ ಮೊದಲು, ಅವರು ತಮ್ಮ ಬ್ರಿಟನ್‌ನಲ್ಲಿ ಮಾಸ್ಟರ್ಸ್ ಅಧ್ಯಯನ ಮಾಡಿದ್ದರು. ತಮ್ಮ ತಂದೆಯ ವ್ಯಾಪಾರವಾದ ಎಲ್‌ಇಡಿ ಉತ್ಪಾದನೆ ಕಂಪನಿ ಸೇರಿಕೊಂಡಿದ್ದರು. ನಂತರ ಫ್ಯಾಷನ್‌ನಲ್ಲಿ ಮುಂದುವರಿದಿದ್ದರು.
ಇದನ್ನೂ ಓದಿ: ಸಾಯೋವರೆಗೆ ಜೈಲು ಶಿಕ್ಷೆಗೆ ಒಳಗಾದ ಯಾಸಿನ್ ಮಲಿಕ್ ಯಾರು? ಮಾಡಿದ ಅಪರಾಧವೇನು?