ತೆಲಂಗಾಣ: ಇಲ್ಲಿನ ರಂಗಾರೆಡ್ಡಿ ಜಿಲ್ಲೆಯ ಆದಿಬಟ್ಲ ಎಂಬಲ್ಲಿ ಶುಕ್ರವಾರ ಶಾಕಿಂಗ್ ಘಟನೆಯೊಂದು ನಡೆದಿತ್ತು. ಸುಮಾರು 100 ಯುವಕರು, 24 ವರ್ಷದ ಯುವತಿಯೊಬ್ಬಳ ಮನೆಗೆ ತೆರಳಿ, ಮನೆಯೊಳಗೆ ಇದ್ದ ಅವಳನ್ನು ಎಳೆದುಕೊಂಡು ಹೋಗಿದ್ದರು. ಈ ಯುವತಿ ಹೆಸರು ವೈಶಾಲಿ ಎಂದಾಗಿದ್ದು, ಕಿಡ್ನ್ಯಾಪ್ ಆದ ಆರು ಗಂಟೆಯಲ್ಲಿ ಆಕೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಅಷ್ಟೇ ಅಲ್ಲ, ಅಪಹರಣಕಾರರಲ್ಲಿ ಸುಮಾರು 16 ಮಂದಿಯನ್ನು ಅರೆಸ್ಟ್ ಕೂಡ ಮಾಡಿದ್ದಾರೆ. ಇನ್ನುಳಿದವರನ್ನೂ ಬಂಧಿಸಿ, ಎಲ್ಲರ ವಿರುದ್ಧ ಅಪರಹಣ ಮತ್ತು ಕೊಲೆ ಪ್ರಯತ್ನ ಕೇಸ್ ದಾಖಲಿಸುವುದಾಗಿ ರಾಚಕೊಂಡ ಪೊಲೀಸ್ ಆಯುಕ್ತ ಮಹೇಶ ಭಾಗವತ್ ತಿಳಿಸಿದ್ದಾರೆ. ಆ ಯುವಕರು, ಯುವತಿಯ ಮನೆ ಬಳಿ ಬಂದು ಸುತ್ತಾಡುತ್ತಿರುವ, ದಾಂಧಲೆ ಸೃಷ್ಟಿಸಿರುವ ವಿಡಿಯೊಗಳು ವೈರಲ್ ಆಗಿವೆ.
ಏಕಾಏಕಿ ಮನೆಯ ಬಳಿ ನುಗ್ಗಿದ ಸುಮಾರು ನೂರು ಯುವಕರು ತಮ್ಮ ಮಗಳು ವೈಶಾಲಿಯನ್ನು ಎಳೆದುಕೊಂಡು ಹೋದರು. ಮನೆಯೊಳಗೆ ಎಲ್ಲವನ್ನೂ ಧ್ವಂಸಗೊಳಿಸಿದರು ಎಂದು ಹುಡುಗಿಯ ಪಾಲಕರು ಪೊಲೀಸರಿಗೆ ದೂರು ನೀಡಿದ್ದರು. ಒಂದಷ್ಟು ಜನ ಯುವಕರು ಮನೆಯೊಳಗೆ ನುಗ್ಗಿದ್ದರೆ, ಇನ್ನೊಂದಷ್ಟು ಮಂದಿ ಮನೆ ಹೊರಗೆ ಅವಾಂತರ ಸೃಷ್ಟಿಸಿದ್ದಾರೆ ಹೊರಗಡೆ ಇಟ್ಟಿದ್ದ ಕಾರಿನ ಗಾಜು ಪುಡಿಮಾಡಿದ್ದು, ಯುವತಿಯ ಸಂಬಂಧಿ ಮಹಿಳೆಯೊಬ್ಬರಿಗೆ ಥಳಿಸಿದ್ದನ್ನು ವಿಡಿಯೊದಲ್ಲಿ ನೋಡಬಹುದು.
ಈ ಕೇಸ್ನಲ್ಲಿ ಪ್ರಮುಖ ಆರೋಪಿ ಕೆ. ನವೀನ್ ರೆಡ್ಡಿ ಎಂಬಾತನಾಗಿದ್ದು, ಅವನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ‘ನಾನು ಮತ್ತು ವೈಶಾಲಿ ಈಗಾಗಲೇ ಮದುವೆಯಾಗಿದ್ದೇವೆ. ಬಳಿಕ ಆಕೆ ದಂತವೈದ್ಯೆಯಾದಳು. ಮಗಳು ಡೆಂಟಿಸ್ಟ್ ಆಗುತ್ತಿದ್ದಂತೆ ಅವಳ ಅಪ್ಪ-ಅಮ್ಮ ಆಕೆಗೆ ಇಲ್ಲದ್ದೆಲ್ಲ ಹೇಳಿಕೊಟ್ಟು, ಮನಸು ಬದಲಿಸುವಂತೆ ಮಾಡಿದ್ದಾರೆ. ಹಾಗಾಗಿಯೇ ಅಪಹರಿಸಿಕೊಂಡು ಹೋಗಿದ್ದೆ’ ಎಂದು ನವೀನ್ ಪೊಲೀಸರ ಎದುರು ಹೇಳಿಕೊಂಡಿದ್ದಾನೆ. ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ಶುರು ಮಾಡಿದ್ದಾರೆ.
ಇದನ್ನೂ ಓದಿ: Viral Video | ಸುಡುಬಿಸಿಲಿನಲ್ಲಿ ಕುಳಿತಿದ್ದ ವೃದ್ಧೆಯ ಎಲ್ಲ ಹಣ್ಣು ಖರೀದಿಸಿ, ಮಾನವೀಯತೆ ಮೆರೆದ ಪೊಲೀಸ್ ಅಧಿಕಾರಿ