ಹೈದರಾಬಾದ್: ಮಕ್ಕಳ ಕೈಗೆ ಮೊಬೈಲ್ ನೀಡುವುದು ಒಳ್ಳೆಯದಲ್ಲ ಎಂದು ಎಲ್ಲರೂ ಹೇಳುತ್ತಲೇ ಇರುತ್ತಾರೆ. ಆದರೆ ಚಿಕ್ಕ ಮಕ್ಕಳಿಗೂ ಯೂಟ್ಯೂಬ್ ವಿಡಿಯೊ ತೋರಿಸುತ್ತಲೇ ಊಟ ಮಾಡಿಸುವ ಅಭ್ಯಾಸವನ್ನು ಈಗಿನ ಪೋಷಕರು ಮಾಡಿಕೊಂಡುಬಿಟ್ಟಿದ್ದಾರೆ. ಅದೇ ರೀತಿಯಲ್ಲಿ ಹೆಚ್ಚಾಗಿ ಯೂಟ್ಯೂಬ್ ವಿಡಿಯೊಗಳನ್ನು ನೋಡುತ್ತಿದ್ದ ಬಾಲಕನೊಬ್ಬ, ವಿಡಿಯೊದಲ್ಲಿ ನೇಣು ಹಾಕಿಕೊಂಡಿದ್ದನ್ನು ನೋಡಿ ತಾನೂ ಕುತೂಹಲಕ್ಕೆ ನೇಣು ಬಿಗಿದುಕೊಂಡಾಗ ಪ್ರಾಣ ಕಳೆದುಕೊಂಡಿದ್ದಾನೆ. ತೆಲಂಗಾಣದಲ್ಲಿ ಈ ಘಟನೆ ನಡೆದಿದೆ. ಈ ದಾರುಣ ಘಟನೆಯ ಸುದ್ದಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral News) ಆಗಿದೆ.
ತೆಲಂಗಾಣದ ಸಿರಿಸಿಲ್ಲಾದಲ್ಲಿ ವಾಸಿಸುತ್ತಿದ್ದ, ಆರನೇ ತರಗತಿಯ ವಿದ್ಯಾರ್ಥಿ ಉದಯ್ (11) ಯಾವಾಗಲೂ ಯೂಟ್ಯೂಬ್ ವೀಕ್ಷಿಸುತ್ತಿದ್ದನಂತೆ. ಅದರಲ್ಲಿ ಬರುವ ಫನ್ನಿ ವಿಡಿಯೊಗಳನ್ನು ನೋಡುವುದು ಅವನಿಗೆ ಬಹಳ ಇಷ್ಟದ ಕೆಲಸವಾಗಿತ್ತಂತೆ. ಅದೇ ರೀತಿಯಲ್ಲಿ ವಾರಾಂತ್ಯವಾದ ಶನಿವಾರದಂದು ರಾತ್ರಿ ಊಟ ಮುಗಿಸಿದ ನಂತರ ಉದಯ್ ಮೊಬೈಲ್‌ನಲ್ಲಿ ಎಂದಿನಂತೆ ಯೂಟ್ಯೂಬ್ ವಿಡಿಯೊಗಳನ್ನು ನೋಡಿದ್ದಾನೆ. ಅಲ್ಲಿ ಆತ ನೇಣು ಬಿಗಿದುಕೊಳ್ಳುವ ದೃಶ್ಯವೊಂದನ್ನು ನೋಡಿದ್ದಾನೆ.
ಇದನ್ನೂ ಓದಿ: Viral News: ಹೆಣ್ಣು ಮಗು ಹೆತ್ತ ಮಂಗಳಮುಖಿ ಪುರುಷ! ಇದೆಲ್ಲ ಹೇಗಾಯ್ತು?
ಸಾಕಷ್ಟು ಹೊತ್ತು ವಿಡಿಯೊ ನೋಡಿದ ಉದಯ್ ನಂತರ ತನ್ನ ಕೋಣೆಗೆ ಹೋಗಿ ಒಳಗಿನಿಂದ ಚಿಲಕ ಹಾಕಿಕೊಂಡಿದ್ದಾನೆ. ರೂಮಿನಲ್ಲಿನ ಗೋಡೆಗೆ ಹೊಡೆಯಲಾಗಿದ್ದ ಮೊಳೆಯೊಂದಕ್ಕೆ ಬಟ್ಟೆಯನ್ನು ನೇಣಿನ ರೂಪದಲ್ಲಿ ಹಾಕಿಕೊಂಡು ಅದಕ್ಕೆ ತನ್ನ ಕುತ್ತಿಗೆ ಒಡ್ಡಿದ್ದಾನೆ. ಯೂಟ್ಯೂಬ್‌ನಲ್ಲಿ ನೋಡಿದ ವಿಡಿಯೊದಂತೆ ತಾನೂ ಮಾಡಿಕೊಂಡಿದ್ದಾನೆ. ಆಗ ಕುತ್ತಿಗೆಗೆ ನೇಣು ಬಿಗಿದ ಕಾರಣ ಪ್ರಾಣ ಬಿಟ್ಟಿದ್ದಾನೆ.
ಎಷ್ಟು ಕರೆದರೂ ಮಗ ರೂಮಿನ ಬಾಗಿಲನ್ನು ತೆರೆಯದಿರುವುದನ್ನು ಕಂಡ ತಂದೆ ತಾಯಿ ರೂಮಿನ ಬಾಗಿಲನ್ನು ಒಡೆದಿದ್ದಾರೆ. ಒಳಗೆ ಹೋಗಿ ನೋಡಿದಾಗ ಮಗ ನೇಣು ಬಿಗಿದುಕೊಂಡಿರುವುದು ಕಂಡುಬಂದಿದೆ. ಮಗನನ್ನು ಉಳಿಸಿಕೊಳ್ಳಬೇಕೆಂಬ ಹಟದಿಂದ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆಗೆ ಬರುವುದರೊಳಗೆ ಉದಯ್ ಸಾವಿಗೀಡಾಗಿದ್ದಾನೆ ಎಂದು ಆಸ್ಪತ್ರೆಯಲ್ಲಿ ಪರೀಕ್ಷಿಸಿದ ವೈದ್ಯರು ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ.