Site icon Vistara News

Viral News: 40 ಸಾವಿರ ರೂ. ಆಸೆಗೆ ಮಗಳನ್ನೇ ಮಾರಿದ ಪೋಷಕರು, ಹಣದ ಮುಂದೆ ಕರುಳ ಕುಡಿ ಶೂನ್ಯವೇ?

Girl Sold For 40 Thousand Rupees

12 Year Old Girl Sold For Rs 40,000 To 27-Year-Old In Madhya Pradesh

ಭೋಪಾಲ್‌: ಜಗತ್ತಿನಲ್ಲಿ ಹಣಕ್ಕಾಗಿ ಹೆಣ ಕೂಡ ಬಾಯಿ ಬಿಡುತ್ತದೆ ಎಂಬ ಮಾತಿದೆ. ಅದರಲ್ಲೂ, ಆಧುನಿಕ ಜಗತ್ತಿನಲ್ಲಿ ಹಣಕ್ಕಾಗಿ ಯಾರು ಏನು ಬೇಕಾದರೂ ಮಾಡುತ್ತಾರೆ ಎನ್ನುವ ಪರಿಸ್ಥಿತಿ ಇದೆ. ಆದರೂ, ಹಣದ ಹೊರತಾಗಿ ತಂದೆ-ತಾಯಿ, ಅಣ್ಣ-ತಮ್ಮ ಸೇರಿ ಹಲವು ಸಂಬಂಧಗಳು ಗಟ್ಟಿಯಾಗಿವೆ. ಆದರೆ, ಮಧ್ಯಪ್ರದೇಶದಲ್ಲಿ ಬುಡಕಟ್ಟು ಜನಾಂಗದ ಪೋಷಕರು 40 ಸಾವಿರ ರೂಪಾಯಿ ಆಸೆಗಾಗಿ (Viral News) ಹೆತ್ತ ಮಗಳನ್ನೇ ಮಾರಾಟ ಮಾಡಿದ್ದಾರೆ.

ಹೌದು, ಮಧ್ಯಪ್ರದೇಶ ರಾಜಧಾನಿ ಭೋಪಾಲ್‌ ಬಳಿಯ ಗುನಗ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ತಂದೆ-ತಾಯಿಯು 12 ವರ್ಷದ ತಮ್ಮ ಮಗಳನ್ನು 27 ವರ್ಷದ ಯುವಕನಿಗೆ ಕೊಟ್ಟು ಮದುವೆ ಮಾಡಲು ಮುಂದಾಗಿದ್ದಾರೆ. ಯುವಕನಿಂದ 40 ಸಾವಿರ ರೂಪಾಯಿ ಪಡೆಯಲು ಒಪ್ಪಂದ ಮಾಡಿಕೊಂಡಿದ್ದು, 20 ಸಾವಿರ ರೂಪಾಯಿಯನ್ನು ಅಡ್ವಾನ್ಸ್‌ ಪಡೆದಿದ್ದಾರೆ. 40 ಸಾವಿರ ರೂಪಾಯಿ ಆಸೆಗಾಗಿ ಮಗಳನ್ನೇ ಮಾರಿಕೊಂಡಿದ್ದಾರೆ.

ಅದೃಷ್ಟವಶಾತ್‌, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮಧ್ಯಪ್ರವೇಶಿಸಿ ಬಾಲ್ಯ ವಿವಾಹವನ್ನು ತಡೆದಿದ್ದಾರೆ. ಅನಾಮಿಕ ವ್ಯಕ್ತಿಗಳು ಮಾಹಿತಿ ನೀಡಿದ ಕಾರಣ ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಮದುವೆಯನ್ನು ನಿಲ್ಲಿಸಿದ್ದಾರೆ. ಇದಾದ ಬಳಿಕ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯ ಪೋಷಕರು ಸೇರಿ ಐವರನ್ನು ಬಂಧಿಸಿದ್ದಾರೆ. ಇವರ ವಿರುದ್ಧ ಬಾಲ್ಯವಿವಾಹಕ್ಕೆ ಕುಮ್ಮಕ್ಕು ಹಾಗೂ ಮಾನವ ಕಳ್ಳಸಾಗಣೆ ಕೇಸ್‌ ದಾಖಲಿಸಿದ್ದಾರೆ.

ಇದನ್ನೂ ಓದಿ: Ghajini Actress Asin: ʻಗಜನಿʼ ಸಿನಿಮಾ ಖ್ಯಾತಿಯ ನಟಿ ಆಸಿನ್ ವೈವಾಹಿಕ ಬದುಕಿನಲ್ಲಿ ಬಿರುಕು!

ಬಡತನದ ಹಿನ್ನೆಲೆಯಲ್ಲಿ ಹಾಗೂ ಮಗಳನ್ನು ದೊಡ್ಡವಳನ್ನಾಗಿ ಮದುವೆ ಮಾಡುವುದು ಕಷ್ಟವಾಗುತ್ತದೆ ಎಂದು ಭಾವಿಸಿದ ಪೋಷಕರು ಯುವಕನೊಬ್ಬನಿಂದ 40 ಸಾವಿರ ರೂಪಾಯಿ ಪಡೆದು, ಮಗಳನ್ನು ಮದುವೆ ಮಾಡಲು ಮುಂದಾಗಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಪೊಲೀಸರು ಬಾಲಕಿಯ ತಂದೆ-ತಾಯಿ, ಮದುವೆಯಾಗುತ್ತಿದ್ದ ಯುವಕ ಹಾಗೂ ಆತನ ತಂದೆ-ತಾಯಿಯನ್ನು ಬಂಧಿಸಿದ್ದಾರೆ. ಒಟ್ಟಿನಲ್ಲಿ, ಬಾಲ್ಯವಿವಾಹದ ಕುರಿತು ಜಾಗೃತಿ ಮೂಡಿಸಿದರೂ ಇನ್ನೂ ಕೆಲ ಪ್ರದೇಶಗಳಲ್ಲಿ ಬಾಲ್ಯ ವಿವಾಹ ನಡೆಯುತ್ತಿವೆ ಎಂಬುದಕ್ಕೆ ಇದೇ ಪ್ರಕರಣ ಸಾಕ್ಷಿಯಾಗಿದೆ. ಆದಾಗ್ಯೂ, ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಸಮಯಪ್ರಜ್ಞೆಯಿಂದಾಗಿ ಬಾಲಕಿಯೊಬ್ಬಳ ಬಾಳು ಉಳಿದಿದೆ.

Exit mobile version