ಚಂಡೀಗಢ: ದೇಶದ ಹಲವು ರಾಜ್ಯಗಳಲ್ಲಿ ಗೋವುಗಳನ್ನು ಅಕ್ರಮವಾಗಿ ಸಾಗಿಸುವುದನ್ನು ತಡೆಯಲು ಕಾನೂನು ರೂಪಿಸಲಾಗಿದೆ. ಇನ್ನೂ ಕೆಲ ರಾಜ್ಯಗಳಲ್ಲಿ ಕೆಲವು ಸಂಘಟನೆಗಳು, ಗೋ ರಕ್ಷಕರು ಎಂದು ಸ್ವಯಂ ಘೋಷಣೆ ಮಾಡಿಕೊಂಡವರು ಗೋ ರಕ್ಷಣೆ ಹೆಸರಿನಲ್ಲಿ ಹಿಂಸಾಚಾರದಲ್ಲಿ ತೊಡಗಿದ್ದಾರೆ. ಇದಕ್ಕೆ ಉದಾಹರಣೆ ಎಂಬಂತೆ, ಹರಿಯಾಣದಲ್ಲಿ ಗೋವುಗಳ ಅಕ್ರಮ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ಇಬ್ಬರನ್ನು ಜೀವಂತವಾಗಿ (Cow Smugglers) ಸುಟ್ಟು, ಹತ್ಯೆಗೈಯಲಾಗಿದೆ.
ಗೋವುಗಳ ಅಕ್ರಮ ಸಾಗಣೆ ಆರೋಪದ ಹಿನ್ನೆಲೆಯಲ್ಲಿ ರಾಜಸ್ಥಾನದ ಭರತ್‌ಪುರ ಜಿಲ್ಲೆ ಗೋಪಾಲಗಢದಿಂದ ಇಬ್ಬರನ್ನು ಅಪಹರಣ ಮಾಡಲಾಗಿದೆ. ಇಬ್ಬರನ್ನೂ ಹರಿಯಾಣದ ಲುಹಾರು ಜಿಲ್ಲೆಗೆ ಕರೆದುಕೊಂಡು ಬಂದು, ವಾಹನ ಸಮೇತ ಇಬ್ಬರನ್ನು ಸಜೀವವಾಗಿ ದಹನಗೊಳಿಸಲಾಗಿದೆ ಎಂದು ತಿಳಿದುಬಂದಿದೆ. ಬಜರಂಗದಳದ ಕಾರ್ಯಕರ್ತರು ಇಬ್ಬರನ್ನೂ ಅಪಹರಿಸಿ ಬಂಧಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಇದುವರೆಗೆ ಯಾವುದೇ ಮಾಹಿತಿ ದೃಢಪಟ್ಟಿಲ್ಲ.
ಭರತ್‌ಪುರ ಐಜಿ ಗೌರವ್ ಶ್ರೀವಾತ್ಸವ್ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ. “ಸುಟ್ಟು ಕರಕಲಾದ ವಾಹನವೊಂದು ಪತ್ತೆಯಾಗಿದ್ದು, ಅದರಲ್ಲಿ ಇಬ್ಬರ ಶವ ಪತ್ತೆಯಾಗಿದೆ. ಇಬ್ಬರೂ ಗೋವುಗಳನ್ನು ಸಾಗಣೆ ಮಾಡುವವರಾಗಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.