ಕಾಶ್ಮೀರ: ಜಮ್ಮು ಕಾಶ್ಮೀರದ ಕಿರುತೆರೆ ನಟಿ ಅಮ್ರೀನ್ ಭಟ್ ಅವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಿಷೇಧಿತ ಲಷ್ಕರೆ ತೈಬಾ ಸಂಘಟನೆಯ ಇಬ್ಬರು ಉಗ್ರರನ್ನು ಪೊಲೀಸರು ಗುಂಡಿಕ್ಕಿ ಹತ್ಯೆಗೈದಿದ್ದಾರೆ. ಎನ್‌ಕೌಂಟರ್ ನಡೆದ ಸ್ಥಳದಲ್ಲಿ ಎಕೆ-56 ರೈಫಲ್, ಪಿಸ್ತೂಲ್ ಮತ್ತು ಮದ್ದುಗುಂಡುಗನ್ನು ವಶಪಡಿಸಿಕೊಳ್ಳಲಾಗಿದೆ.
ಅವಂತಿಪುರ ಪಟ್ಟಣದಲ್ಲಿ ನಡೆದ ಎನ್ ಕೌಂಟರ್‌ನಲ್ಲಿ ಉಗ್ರರಾದ ಶಹೀದ್ ಮುಷ್ತಾಕ್ ಭಟ್ ಮತ್ತು ಫರ್ಹಾನ್ ಹಬೀಬ್ ಗುಂಡೇಟಿಗೆ ಹತರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಲಷ್ಕರೆ ಕಮಾಂಡರ್ ಲತೀಫ್‌ನ ಸೂಚನೆಯಂತೆ ಈ ಉಗ್ರರು ಕಿರುತೆರೆ ನಟಿ ಅಮ್ರೀನ್ ಭಟ್ ಅವರನ್ನು ಹತ್ಯೆ ಮಾಡಿದ್ದರು.
ಜಮ್ಮು ಕಾಶ್ಮೀರದ ಕಿರುತೆರೆ ನಟಿ ಅಮ್ರೀನ್ ಭಟ್(35) ಅವರನ್ನು ಭಯೋತ್ಪಾದಕರು ಕಳೆದ ಬುಧವಾರ ಅವರ ನಿವಾಸ ಎದುರು ಹತ್ಯೆ ಮಾಡಿದ್ದರು. ಈ ವೇಳೆ ಆಕೆಯ ಸಂಬಂಧಿಯಾದ ಓರ್ವ ಪುಟ್ಟ ಬಾಲಕನ ಮೇಲೂ ಹಲ್ಲೆ ನಡೆಸಲಾಗಿತ್ತು. ಕಾಶ್ಮೀರದ ಮಧ್ಯಭಾಗವಾದ ಬುಡ್‌ಗಾಂವ್ ಜಿಲ್ಲೆಯ ಹಿಶ್ರೂ ಪ್ರದೇಶದಲ್ಲಿ ಭಯೋತ್ಪಾದಕರ ಈ ದುಷ್ಕೃತ್ಯ ಸಂಭವಿಸಿತ್ತು. ಹತ್ಯೆ ಖಂಡಿಸಿ ಕಣಿವೆ ರಾಜ್ಯದಲ್ಲಿ ಪ್ರತಿಭಟನೆಗಳು ನಡೆದಿತ್ತು.
ಅಮ್ರೀನ್ ಭಟ್ ಕಿರುತೆರೆ ನಟಿಯಾಗಿದ್ದು, ಟಿಕ್‌ಟಾಕ್ ವಿಡಿಯೋ ಮಾಡುವ ಮೂಲಕ ಜನಪ್ರಿಯತೆ ಪಡೆದಿದ್ದರು. ಲಷ್ಕರ್ ಭಯೋತ್ಪಾದನೆ ಸಂಘಟನೆಯ ಮೂವರು ಈ ದುಷ್ಕೃತ್ಯ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದರು. ಹಾಗೂ ಆ ಮೂವರು ಭಯೋತ್ಪಾದಕರನ್ನು ಹುಡುಕುವ ಕಾರ್ಯದಲ್ಲಿ ಪೊಲೀಸರು ತೊಡಗಿದ್ದರು. ಕಳೆದ ಜನವರಿಯಿಂದ 26 ವಿದೇಶಿ ಮೂಲದ ಭಯೋತ್ಪಾದಕರನ್ನು ಪೊಲೀಸರು ಹತ್ಯೆಗೈದಿದ್ದಾರೆ.
ಇದನ್ನೂ ಓದಿ: ಟಿಕ್‌ಟಾಕ್ ನಟಿಯನ್ನು ಕಾಶ್ಮೀರದಲ್ಲಿ ಹತ್ಯೆ ಮಾಡಿದ ಭಯೋತ್ಪಾದಕರು