ಕೋಲ್ಕೊತಾ: ಪಶ್ಚಿಮ ಬಂಗಾಳದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ, ತೃಣಮೂಲ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಪಾರ್ಥ ಚಟರ್ಜಿ ಅವರ ಆಪ್ತರಾದ ಅರ್ಪಿತಾ ಮುಖರ್ಜಿ ಎಂಬುವರ ಮನೆಯಲ್ಲಿ ೨೦ ಕೋಟಿ ರೂ. ನಗದನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಪಶ್ಚಿಮ ಬಂಗಾಳದ ಶಾಲಾ ಶಿಕ್ಷಣ ಸೇವೆ ಆಯೋಗ (WBSSC) ಮತ್ತು ಪಶ್ಚಿಮ ಬಂಗಾಳ ಪ್ರಾಥಮಿಕ ಶಿಕ್ಷಣ ಮಂಡಳಿಯಲ್ಲಿ (WBBPE) ಶಿಕ್ಷಕರ ನೇಮಕಾತಿಯಲ್ಲಿ ನಡೆದಿದೆ ಎನ್ನಲಾಗಿರುವ ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯ, ಈ ಸಂಬಂಧ ಅರ್ಪಿತಾ ಮುಖರ್ಜಿ ಅವರ ನಿವಾಸಕ್ಕೆ ದಾಳಿ ನಡೆಸಿತ್ತು. ಈ ಹಗರಣವು ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ.
ನಗದಿನ ಜತೆಗೆ ಇ.ಡಿ ಅಧಿಕಾರಿಗಳು ೨೦ ಮೊಬೈಲ್ ಫೋನ್‌ಗಳನ್ನೂ ವಶಪಡಿಸಿಕೊಂಡಿದ್ದಾರೆ. ಮನೆಯಲ್ಲಿ ನೋಟುಗಳನ್ನು ಎಣಿಸುವ ಮೆಶೀನ್ ಕೂಡ ಇತ್ತು. ಇದು ಹಗರಣದ ಮತ್ತಷ್ಟು ವಿವರಗಳನ್ನು ನೀಡುವ ಸಾಧ್ಯತೆ ಇದೆ. ಪಶ್ಚಿಮ ಬಂಗಾಳದಲ್ಲಿ ಪಾರ್ಥ ಸಾರಥಿ ದೊಡ್ಡ ರಾಜಕಾರಣಿ. ಆದರೆ ಅರ್ಪಿತಾ ಮುಖರ್ಜಿ ಬಗ್ಗೆ ಜನರಿಗೆ ಅಷ್ಟಾಗಿ ತಿಳಿದಿಲ್ಲ.
ಯಾರಿವರು ಅರ್ಪಿತಾ ಮುಖರ್ಜಿ? ತೃಣಮೂಲ ಕಾಂಗ್ರೆಸ್ ನಾಯಕ ಮತ್ತು ಸಚಿವ ಪಾರ್ಥ ಮುಖರ್ಜಿ ಅವರ ಆಪ್ತರಾಗಿರುವ ಅರ್ಪಿತಾ ಮುಖರ್ಜಿ ನಟಿ ಮತ್ತು ರೂಪದರ್ಶಿ. ಒಡಿಶಾ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಾಲಿ ಚಿತ್ರಗಳಲ್ಲೂ ಕಾಣಿಸಿಕೊಂಡಿದ್ದಾರೆ. ದಕ್ಷಿಣ ಕೋಲ್ಕತಾದ ಟೋಲಿಗಂಜ್‌ನಲ್ಲಿ ಅವರ ಐಷಾರಾಮಿ ನಿವಾಸ ಇದೆ. ಇದೀಗ ವಶಪಡಿಸಿಕೊಂಡಿರುವ ೨೦ ಕೋಟಿ ರೂ. ನಗದಿನ ಮೂಲದ ಬಗ್ಗೆ ಅರ್ಪಿತಾ ಮುಖರ್ಜಿ ಅವರನ್ನು ಇ.ಡಿ ವಿಚಾರಿಸುತ್ತಿದೆ.