Site icon Vistara News

Human Sacrifice: ತನ್ನ ತಾಯ್ತನಕ್ಕಾಗಿ 4 ವರ್ಷದ ಮಗನನ್ನು ನರಬಲಿ ಕೊಟ್ಟ ಮಲತಾಯಿ, ಮಾತೃಕುಲಕ್ಕೆ ಈಕೆ ಕಳಂಕ

Human Sacrifice In Uttar Pradesh

4-Year-Old Killed In Uttar Pradesh 'Human Sacrifice' Ritual, Stepmother Arrested

ಲಖನೌ: ಭಾರತ ವೈಜ್ಞಾನಿಕವಾಗಿ ಮುಂದುವರಿಯುತ್ತಿದೆ. ಇಂಡಿಯಾ ಡಿಜಿಟಲ್‌ ಆಗುತ್ತಿದೆ. ಬಾಹ್ಯಾಕಾಶದಲ್ಲಿ ನಾವು ಜಗತ್ತನ್ನೇ ಬೆರಗುಗೊಳಿಸಿದ್ದೇವೆ. ದೇಶ ಹೀಗಿದ್ದರೂ, ದೇಶದ ಕೆಲ ನಾಗರಿಕರು ಮಾತ್ರ ಇನ್ನೂ ಮೌಢ್ಯದಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಅದರಲ್ಲೂ, ಮೌಢ್ಯಕ್ಕಾಗಿ ಜೀವಗಳನ್ನೇ ಬಲಿ ಕೊಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಉತ್ತರ ಪ್ರದೇಶದಲ್ಲಿ ಮಲತಾಯಿಯೊಬ್ಬರು ನಾಲ್ಕು ವರ್ಷದ ಮಗನನ್ನೇ ನರಬಲಿ (Human Sacrifice) ಕೊಟ್ಟಿದ್ದಾರೆ.

ಹೌದು, ಉತ್ತರ ಪ್ರದೇಶದ ಅಮೇಥಿಯಲ್ಲಿ ಮಹಿಳೆಯೊಬ್ಬರು ಮಾಂತ್ರಿಕನ ಜತೆಗೂಡಿ ನಾಲ್ಕು ವರ್ಷದ ಬಾಲಕನನ್ನು ನರಬಲಿ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ನಾಲ್ಕು ವರ್ಷದ ಬಾಲಕ ಸತ್ಯೇಂದ್ರನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಆತನ ಕಿವಿ, ಕಣ್ಣು, ಎದೆ ಸೇರಿ ದೇಹದ ಹಲವು ಭಾಗದಲ್ಲಿ ಗಾಯಗಳಾಗಿವೆ. ಮಲತಾಯಿಯೇ ಈತನನ್ನು ಕೊಂದಿರುವ ಶಂಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಮಲತಾಯಿ ರೇಣು ಪ್ರಜಾಪತಿ (30) ಹಾಗೂ ದುರುಳ ಮಾಂತ್ರಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಯಾಕಾಗಿ ನರಬಲಿ?

ರೇಶಿ ಗ್ರಾಮದ ನಿವಾಸಿಯಾದ ಜಿತೇಂದ್ರ ಪ್ರಜಾಪತಿಯ ಪತ್ನಿಯು ಮನೆಬಿಟ್ಟು ಹೋದ ಕಾರಣ ಒಂದೂವರೆ ವರ್ಷದ ಹಿಂದೆ ರೇಣು ಪ್ರಜಾಪತಿಯನ್ನು ಮದುವೆಯಾಗಿದ್ದರು. ರೇಣು ಪ್ರಜಾಪತಿಯು ಗರ್ಭ ಧರಿಸಿದರೂ ಹೆಚ್ಚಾಗಿ ಗರ್ಭಪಾತವಾಗುತ್ತಿತ್ತು. ಇದರಿಂದ ಬೇಸತ್ತ ಆಕೆ ಮಾಂತ್ರಿಕನ ಮೊರೆಹೋಗಿದ್ದರು. ನೀವು ಗರ್ಭ ಧರಿಸಲು ನಿಮ್ಮ ಮಲಮಗನನ್ನು ಬಲಿ ಕೊಡಬೇಕು ಎಂದು ಮಾಂತ್ರಿಕ ಹೇಳಿದ ಕಾರಣ, ಮಹಿಳೆ ಹಾಗೂ ಮಾಂತ್ರಿಕ ಸೇರಿ ಬಾಲಕನನ್ನು ಹತ್ಯೆ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಇದನ್ನೂ ಓದಿ: Human Sacrifice: ನರಬಲಿ ಮೌಢ್ಯಕ್ಕೆ ದಂಪತಿ ಬಲಿ; ಮನೆಯಲ್ಲಿ ರುಂಡ ಕತ್ತರಿಸಿಕೊಂಡು ಸಾವು

ಕಳೆದ ಭಾನುವಾರ ಆಟವಾಡಲು ಹೋದ ಸತ್ಯೇಂದ್ರನು ಮನೆಗೆ ಬರದ ಕಾರಣ ಆತನ ತಂದೆಯು ಪೊಲೀಸರಿಗೆ ದೂರು ನೀಡಿದ್ದರು. ಗ್ರಾಮದ ವ್ಯಕ್ತಿಯೊಬ್ಬರು ಸತ್ಯೇಂದ್ರನ ಶವವು ಕೆರೆಯಲ್ಲಿ ತೇಲುತ್ತಿರುವುದನ್ನು ಕಂಡು ಜಿತೇಂದ್ರ ಅವರಿಗೆ ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಶವವನ್ನು ಹೊರತೆಗೆಯಲಾಗಿದ್ದು, ಮಲತಾಯಿ ಮೇಲೆಯೇ ಶಂಕೆ ವ್ಯಕ್ತವಾಗಿ, ಆಕೆಯನ್ನು ಬಂಧಿಸಿದ್ದಾರೆ. ಹಾಗೆಯೇ, ರೇಣು ಪ್ರಜಾಪತಿಯ ಹಲವು ಸಂಬಂಧಿಕರ ವಿರುದ್ಧವೂ ಪ್ರಕರಣ ದಾಖಲಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ, ತಾನು ಗರ್ಭ ಧರಿಸಲು ಮಲಮಗನನ್ನೇ ಬಲಿ ಕೊಟ್ಟ ಪ್ರಕರಣವೀಗ ಎಲ್ಲೆಡೆ ಸುದ್ದಿಯಾಗಿದೆ. ಮತ್ತೊಂದೆಡೆ, ಮಗನು ತಾಯಿ ಪ್ರೀತಿಯಿಂದ ವಂಚಿತನಾಗಬಾರದು ಎಂದು ಮತ್ತೊಂದು ಮದುವೆಯಾದ ಜಿತೇಂದ್ರ ಪ್ರಜಾಪತಿಯು ಪಶ್ಚಾತ್ತಾಪ ಪಡುವಂತಾಗಿದೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Exit mobile version