Site icon Vistara News

ಕಪಟ ಅಪ್ಪನನ್ನು ನಂಬಿದ ಮಗಳು ಜೀವ ಕಳೆದುಕೊಂಡಳು; ಫೋಟೋ ತೆಗೆಯುತ್ತೇನೆಂದು ಹೇಳಿ ಸ್ಟೂಲ್​ ಒದ್ದ ಕ್ರೂರಿ ಇವನು!

hanging

ನಾಗ್ಪುರ: ಇವನೆಂಥಾ ಕ್ರೂರ ಅಪ್ಪ ಇರಬೇಕು ನೋಡಿ. ನಂಬಿಸಿಯೇ ಮಗಳನ್ನು ಕೊಂದುಬಿಟ್ಟ. ಸುಳ್ಳಿನ ಸರಮಾಲೆಯಲ್ಲೇ ಆಕೆ ಕೊರಳಿಗೆ ನೇಣುಬಿಗಿದುಬಿಟ್ಟ. ನನ್ನಪ್ಪ ಎಂದು ಸಂಪೂರ್ಣವಾಗಿ ನಂಬಿದ್ದ ಹುಡುಗಿ, ಅವನ ಮಾತನ್ನು ಕಣ್ಮುಚ್ಚಿ ನಂಬಿ, ಶಾಶ್ವತವಾಗಿ ಕಣ್ಣು ಮುಚ್ಚಿದಳು ! ಈಗ ಆ 40 ವರ್ಷದ ಅಪ್ಪನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಆದರೆ ಕಳೆದು ಹೋದ 16ವರ್ಷದ ಹುಡುಗಿಯ ಜೀವ ವಾಪಸ್​ ಬಂದೀತೇ?

ಮಹಾರಾಷ್ಟ್ರದ ನಾಗ್ಪುರದ ಕಲಾಮ್ನಾ ಎಂಬ ನಗರದಲ್ಲಿ ಈ ವ್ಯಕ್ತಿ ತನ್ನ ಇಬ್ಬರು ಹೆಣ್ಣುಮಕ್ಕಳೊಂದಿಗೆ ವಾಸವಾಗಿದ್ದ. ಅದರಲ್ಲಿ ಒಬ್ಬಾಕೆಗೆ 16ವರ್ಷ. ಇನ್ನೊಬ್ಬಳಿಗೆ 12 ವರ್ಷ. ಅದರಲ್ಲಿ 16ವರ್ಷದ ಮಗಳನ್ನು ಅವನು ಕೊಂದಿದ್ದಾನೆ. ಅದೂ ಕೂಡ ಆಕೆಗೆ ಸುಳ್ಳು ಹೇಳಿ, ನಂಬಿಸಿ ಹತ್ಯೆಗೈದಿದ್ದಾನೆ. ಇವನ ಮೊದಲ ಪತ್ನಿ 2016ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಅದರ ಬಳಿಕ ಆತ ಎರಡನೇ ಮದುವೆಯಾದರೂ ಆಕೆಯೂ ಇವನನ್ನು ಬಿಟ್ಟು ಹೋಗಿದ್ದಾಳೆ. ಈ ಇಬ್ಬರೂ ಹೆಣ್ಣುಮಕ್ಕಳು ಮೊದಲ ಪತ್ನಿಗೆ ಹುಟ್ಟಿದವರು.

ತನ್ನ ಮೊದಲ ಪುತ್ರಿಯ ಬಳಿ ಬಂದ ಈತ ‘ನಾನು ನಿನ್ನ ಮಲತಾಯಿ (ತನ್ನ ಎರಡನೇ ಪತ್ನಿ), ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ ಮತ್ತು ಅಜ್ಜಿಗೆ ಪಾಠ ಕಲಿಸಬೇಕು. ಹಾಗಾಗಿ ನೀನು ಸಹಾಯ ಮಾಡಬೇಕು’ ಎಂದು ಹೇಳಿದ. ಅದಕ್ಕೆ ಮಗಳು ಒಪ್ಪಿದಳು. ‘ನೀನು ಆತ್ಮಹತ್ಯೆ ಮಾಡಿಕೊಂಡಂತೆ ನಾಟಕವಾಡಬೇಕು. ಮತ್ತೇನಲ್ಲ, ಸ್ಟೂಲ್​ ಮೇಲೆ ನಿಂತು, ನೇಣಿನ ಕುಣಿಕೆಯನ್ನು ಕತ್ತಿಗೆ ಹಾಕಿಕೋ..ನಾನು ಮೊಬೈಲ್​​ನಲ್ಲಿ ಫೋಟೋ ತೆಗೆಯುತ್ತೇನೆ, ಅದಾದ ಬಳಿಕ ನೀನು ಕೆಳಗೆ ಇಳಿದುಬಿಡು. ಅದಕ್ಕೂ ಮೊದಲು ನೀನು ಒಂದು ಸೂಸೈಡ್ ನೋಟ್​ ಬರೆಯಬೇಕು. ಅದರಲ್ಲಿ ನಿನ್ನ ಮಲತಾಯಿ, ಚಿಕ್ಕಪ್ಪ-ಚಿಕ್ಕಮ್ಮ, ಅಜ್ಜ ಮತ್ತು ಅಜ್ಜಿ ಹೆಸರನ್ನು ಬರೆಯಬೇಕು. ಇವರೇ ನಿನ್ನ ಸಾವಿಗೆ ಕಾರಣ ಎಂದು ನಮೂದಿಸಬೇಕು’ ಎಂದು ಅಪ್ಪ ಹೇಳಿದ. ಇದೊಂದು ನಾಟಕವಷ್ಟೇ ಎಂಬುದನ್ನು ಆತ ಪದೇಪದೆ ಹೇಳುತ್ತಿದ್ದ.

ಅಪ್ಪನ ಪ್ಲ್ಯಾನ್​ ಮಗಳಿಗೆ ಗೊತ್ತಿಲ್ಲ. ನನ್ನ ಅಪ್ಪನೇ ಅಲ್ಲವೇ, ಅಪಾಯವಂತೂ ಆಗಲು ಬಿಡುವುದಿಲ್ಲ ಎಂಬ ಸಂಪೂರ್ಣ ನಂಬಿಕೆಯಿಂದ ಆಕೆ ನೇಣು ಹಾಕಿಕೊಳ್ಳುವ ಪ್ಲ್ಯಾನ್​ಗೆ ಸಿದ್ಧಳಾದಳು. ಅದರಂತೆ ಎಲ್ಲ ವ್ಯವಸ್ಥೆಯನ್ನೂ ಅಪ್ಪನೇ ಖುದ್ದಾಗಿ ನಿಂತು ಮಾಡಿದ. ಆ ಮಗಳು ಸ್ಟೂಲ್​ ಮೇಲೆ ನಿಂತು, ಕುಣಿಕೆಯನ್ನು ಕುತ್ತಿಗೆಗೆ ಹಾಕಿಕೊಂಡಿದ್ದಳು. ಆ ಕ್ಷಣದಲ್ಲಿ ಫೋಟೋ ತೆಗೆದ ಅಪ್ಪ, ಅದೇ ಕ್ಷಣದಲ್ಲಿ ಸ್ಟೂಲ್​​ನ್ನು ಕಾಲಿನಿಂದ ಒದ್ದಿದ್ದಾನೆ. ಅಪ್ಪನನ್ನು ನಂಬಿ ನಾಟಕಕ್ಕೆ ಮುಂದಾಗಿದ್ದ ಮಗಳು, ನಿಜವಾಗಿಯೂ ನೇಣಿಗೇರಿ, ಜೀವ ಕಳೆದುಕೊಂಡಿದ್ದಾಳೆ. ಆಕೆಯ ಕೈಯಿಂದ ಸೂಸೈಡ್ ನೋಟ್​ ಬರೆಸಿದ್ದ ಕಾರಣ ಅಪ್ಪ ನಿರಾಳವಾಗಿದ್ದ. ಹೇಗೂ ತನ್ನ ಮೇಲೆ ಅನುಮಾನ ಬರುವುದಿಲ್ಲ ಎಂದುಕೊಂಡಿದ್ದ.

ಇಷ್ಟೆಲ್ಲ ಮಾಡಿ ಆತ ಮನೆಯಿಂದ ಹೊರಗೆ ಹೋಗಿದ್ದ. ವಾಪಸ್ ಬಂದವನು ಪೊಲೀಸ್​ ಠಾಣೆಗೆ ತೆರಳಿ, ನಾನು ಕೆಲಸದ ನಿಮಿತ್ತ ಹೊರಗೆ ಹೋಗಿದ್ದೆ. ಬರುವಷ್ಟರಲ್ಲಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿದ್ದ. ಪರಿಶೀಲನೆ ನಡೆಸಿದ ಪೊಲೀಸರು ಸೂಸೈಡ್ ನೋಟ್​​ನಲ್ಲಿ ಯಾರೆಲ್ಲರ ಹೆಸರಿತ್ತೋ, ಅವರನ್ನು ಬಂಧಿಸಿದ್ದರು. ಆದರೂ ತನಿಖೆ ಮುಂದುವರಿಸಿದ್ದ ಅವರು, ಈ ಆರೋಪಿಯ ಮೊಬೈಲ್ ಪರಿಶೀಲನೆ ಮಾಡಿದ್ದಾರೆ. ಆಗ ಹುಡುಗಿ ನೇಣು ಹಾಕಿಕೊಳ್ಳುತ್ತಿರುವ ಫೋಟೋ ಕಣ್ಣಿಗೆ ಬಿದ್ದಿದೆ. ಅದೇ ಫೋಟೋದ ಜಾಡು ಹಿಡಿದು, ಅವನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ. ಆದರೆ ಮಗಳನ್ನು ಯಾಕೆ ಕೊಂದೆ ಎಂಬ ಬಗ್ಗೆ ಇನ್ನೂ ಅವನೇನೂ ಹೇಳಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ: Viral news | ನೀಲಿ, ಪಿಂಕ್‌ ಬಣ್ಣದ ಬ್ಲೂಬೆರಿ, ಸ್ಟ್ರಾಬೆರಿ ಸಮೋಸಾಗಳನ್ನು ನೋಡಿದ್ದೀರಾ?

Exit mobile version