Site icon Vistara News

ಕಾಮಾಕ್ಷಿಪಾಳ್ಯ ಆ್ಯಸಿಡ್ ದಾಳಿ‌ | 770 ಪುಟಗಳ ಚಾರ್ಜ್‌ಶೀಟ್‌ ಕೋರ್ಟಿಗೆ ಸಲ್ಲಿಕೆ

ಆ್ಯಸಿಡ್‌ ನಾಗೇಶ್ Acid Attack

acid Naga

ಬೆಂಗಳೂರು: ಇಡೀ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ಆ್ಯಸಿಡ್ ದಾಳಿ ಪ್ರಕರಣ ನಡೆದು ಮೂರು ತಿಂಗಳ ಬಳಿಕ ಪೊಲೀಸರು ಕೋರ್ಟ್‌ಗೆ 770 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ ಮಾಡಿದ್ದಾರೆ.

13ನೇ ಎಸಿಎಂಎಂ ಕೋರ್ಟ್‌ಗೆ ಒಟ್ಟು 770 ಪುಟಗಳ ಪ್ರಾಥಮಿಕ ಚಾರ್ಜ್‌ಶೀಟ್ ಅನ್ನು ಕಾಮಾಕ್ಷಿಪಾಳ್ಯ ಪೊಲೀಸರು ಸಲ್ಲಿಸಿದ್ದಾರೆ. ಆ್ಯಸಿಡ್ ಎರಚಿದ ನಾಗೇಶ್‌ನ ಹೇಳಿಕೆ ಹಾಗೂ ಸಂತ್ರಸ್ತೆಯ ಹೇಳಿಕೆಗಳನ್ನು ಈ ಹಿಂದೆ ವಿಸ್ತಾರ ನ್ಯೂಸ್‌ ಎಕ್ಸ್‌ಕ್ಲೂಸಿವ್ ಆಗಿ ವರದಿ ಮಾಡಿತ್ತು‌. ಪ್ರಸ್ತುತ ಅದೇ ವಿಚಾರಗಳನ್ನು ವಿವರವಾಗಿ ಉಲ್ಲೇಖಿಸಿರುವ ಚಾರ್ಜ್‌ಶೀಟ್ ಅನ್ನು ಪೊಲೀಸರು ಸಲ್ಲಿಸಿದ್ದಾರೆ.

ಚಾರ್ಜ್‌ಶೀಟ್‌ನಲ್ಲಿ ಒಟ್ಟು 92 ಸಾಕ್ಷಿಗಳ ಹೇಳಿಕೆ ದಾಖಲಿಸಲಾಗಿದೆ. ಇದರಲ್ಲಿ ಇಬ್ಬರು ಪ್ರತ್ಯಕ್ಷದರ್ಶಿಗಳ ಹೇಳಿಕೆಗಳು ಸಹ ದಾಖಲಾಗಿವೆ. ಇವರ 164 ಧ್ವನಿ ಹಾಗೂ ವಿಡಿಯೋ ಹೇಳಿಕೆಗಳು ರೆಕಾರ್ಡ್ ಆಗಿವೆ. ನಾಗೇಶ್ ಯುವತಿಗೆ ಆ್ಯಸಿಡ್ ಹಾಕುವುದನ್ನು ಒಬ್ಬ ಸಾಕ್ಷಿ ನೋಡಿದ್ದರೆ, ಬಳಿಕ ಆತ ಓಡಿಹೋಗುವುದನ್ನು ಮತ್ತೊಬ್ಬ ಸಾಕ್ಷಿ ಪ್ರತ್ಯಕ್ಷವಾಗಿ ನೋಡಿದ್ದಾರೆ.‌

ಇದನ್ನೂ ಓದಿ: Acid Attack | ಆ್ಯಸಿಡ್ ನಾಗೇಶ್‌ ಸ್ವ-ಇಚ್ಛಾ ಹೇಳಿಕೆಯಲ್ಲಿ ಏನಿದೆ? ಇಲ್ಲಿದೆ ಫುಲ್‌ ಡಿಟೇಲ್ಸ್‌

FSL ವರದಿಯನ್ನು ಚಾರ್ಜ್‌ಶೀಟ್‌ನಲ್ಲಿ ಪೊಲೀಸರು ಉಲ್ಲೇಖಿಸಿದ್ದಾರೆ. ಆಸಿಡ್ ಹಾಕಿದ ಬಳಿಕ ತನ್ನ ಅಣ್ಣನಿಗೆ ಆರೋಪಿ ನಾಗೇಶ್ ಕಾಲ್ ಮಾಡಿದ್ದ. ಅದರಲ್ಲಿ, ತಾನು ಆಸಿಡ್ ಹಾಕಿರುವುದನ್ನು ಹೇಳಿದ್ದಾನೆ. ಅಣ್ಣ ಈ ಕರೆಯ ರೆಕಾರ್ಡ್ ಮಾಡಿಕೊಂಡು ಪೊಲೀಸರಿಗೆ ನೀಡಿದ್ದರು. ಈ ಧ್ವನಿ ದಾಖಲೆಯನ್ನು ಎಫ್‌ಎಸ್‌ಎಲ್‌ಗೆ ರವಾನೆ ಮಾಡಲಾಗಿತ್ತು. ಸದ್ಯ ಅದರ ವರದಿ ಬಂದಿದ್ದು, ಧ್ವನಿ ನಾಗೇಶ್‌ನದೇ ಎಂದು ದೃಢಪಟ್ಟಿದೆ. ಇದು ಪ್ರಕರಣದ ಪ್ರಮುಖ ಸಾಕ್ಷಿ ಆಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಯುವತಿ ಮೇಲೆ ಆ್ಯಸಿಡ್ ಹಾಕಲೂ ಹಿಂದಿನ ದಿನ ಯುವತಿ ಕೆಲಸ ಮಾಡುತ್ತಿದ್ದ ಕಚೇರಿ ಬಳಿ ನಾಗೇಶ್‌ ಬಂದಿದ್ದ. ಅದರ ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ವೇಳೆ ಆತ ಯುವತಿಗೆ ಬೆದರಿಕೆ ಹಾಕಿರುವುದು ಸಹ ತನಿಖೆ ವೇಳೆ ಬಯಲಾಗಿದೆ. ಸಂತ್ರಸ್ತೆಯ ಹೇಳಿಕೆಯನ್ನು ಸಹ ಪೊಲೀಸರು ದಾಖಲೆ ಮಾಡಿಕೊಂಡಿದ್ದು, ಅದನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಇಷ್ಟೆಲ್ಲಾ ಅಂಶಗಳನ್ನು ಇಟ್ಟುಕೊಂಡು ಕೋರ್ಟ್‌ಗೆ 770 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ.

ಇದನ್ನೂ ಓದಿ: Acid Attack | 8 ಕೆಜಿ ಆ್ಯಸಿಡ್‌ ಇಟ್ಟುಕೊಂಡಿದ್ದ ನಾಗೇಶ್‌ ಪೊಲೀಸರ ಪ್ರಶ್ನೆಗಳಿಗೆ ಉತ್ತರಿಸ್ತಿರೋದು ಒಂದೇ ಶಬ್ದ

Exit mobile version