Site icon Vistara News

Crime Video : ಕೊಲೆ ಆರೋಪಿಗಳನ್ನು ಕರೆದೊಯ್ಯಲಾಗುತ್ತಿದ್ದ ಬಸ್ಸನ್ನೇ ಹತ್ತಿ ಗುಂಡಿಕ್ಕಿದರು!

8 people shoots in bus

ಜೈಪುರ: ಕೊಲೆ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲೆಂದು ಬಸ್ಸಿನಲ್ಲಿ ಕರೆದೊಯ್ಯುತ್ತಿದಾಗ ಎಂಟು ಕಿಡಿಗೇಡಿಗಳು ಬಸ್ಸನ್ನೇರಿ ಗುಂಡಿನ ಸುರಿಮಳೆಯನ್ನೇ ಸುರಿಸಿರುವ ಭಯಾನಕ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಅದರ ವಿಡಿಯೊ ಕೂಡ ಹೊರಬಿದ್ದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ (Crime News) ಆಗಿದೆ.

ಕುಲದೀಪ್‌ ಜಘೀನಾ ಮತ್ತು ಆತನ ಸ್ನೇಹಿತ ವಿಜಯಪಾಲ್‌ ಕಳೆದ ವರ್ಷ ಆಸ್ತಿಯ ವಿಚಾರದಲ್ಲಿ ಕೃಪಾಲ್‌ ಜಘೀನಾ ಹೆಸರಿನ ವ್ಯಕ್ತಿಯ ಜತೆ ಜಗಳವಾಡಿ ಆತನನ್ನು ಕೊಲೆ ಮಾಡಿದ್ದರು ಎನ್ನುವ ಆರೋಪವಿತ್ತು. ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರುಪಡಿಸಲೆಂದು ಜುಲೈ 12ರಂದು ಆರು ಪೊಲೀಸ್‌ ಸಿಬ್ಬಂದಿ ಆರೋಪಿಗಳನ್ನು ಸಾರ್ವಜನಿಕ ಬಸ್ಸಿನಲ್ಲಿ ಕರೆದುಕೊಂಡು ಹೊರಟಿದ್ದರು.

ಇದನ್ನೂ ಓದಿ: Viral Video: ನಾಯಿ ಬೊಗಳುವುದು ಸಾಮಾನ್ಯ, ಹಾಡುವುದನ್ನು ಕೇಳಿದ್ದೀರಾ?
ಭರತ್‌ಪುರದ ಅಮೋಲಿ ಟೋಲ್‌ ಪ್ಲಾಜಾದಲ್ಲಿ ಬಸ್ಸಿಗಾಗಿ ಕಾಯುತ್ತಾ ಕುಳಿತಿದ್ದ ಎಂಟು ಕಿಡಿಗೇಡಿಗಳು, ಆರೋಪಿಗಳಿದ್ದ ಬಸ್ಸು ಟೋಲ್‌ ಬಳಿ ಬಂದ ಕೂಡಲೇ ಕಿಟಕಿಯಿಂದ ಪೊಲೀಸರ ಕಣ್ಣಿಗೆ ಮೆಣಸಿನ ಪುಡಿ ಎರಚಿದ್ದಾರೆ. ನಂತರ ಬಂದೂಕು ತೆಗೆದುಕೊಂಡು ಆರೋಪಿಗಳ ಮೇಲೆ ಗುಂಡಿನ ಸುರಿಮಳೆ ಸುರಿಸಲಾರಂಭಿಸಿದ್ದಾರೆ. ಕೆಲವರು ಬಸ್ಸನ್ನು ಹತ್ತಿ ಅದರೊಳಗಿಂದಲೇ ಆರೋಪಿಗಳ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಬರೋಬ್ಬರಿ ಎರಡು ನಿಮಿಷಗಳ ಕಾಲ ಗುಂಡಿನ ಸುರಿಮಳೆ ಸುರಿಸಲಾಗಿದೆ.


ಈ ವೇಳೆ ಬಸ್ಸಿನಲ್ಲಿ ಬೇರೆ ಪ್ರಯಾಣಿಕರೂ ಇದ್ದಿದ್ದು, ಅವರೆಲ್ಲರೂ ಈ ಘಟನೆಯಿಂದಾಗಿ ಭಯಭೀತರಾಗಿದ್ದಾರೆ. ಕೆಲವರು ಬಸ್ಸಿನ ಬಾಗಿಲಿನಿಂದ, ಇನ್ನು ಕೆಲವರು ಕಿಟಕಿಗಳಿಂದಲೇ ಹೊರಗೆ ಜಿಗಿದು ಜೀವ ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಈ ಎಲ್ಲ ದೃಶ್ಯಗಳು ಟೋಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದು ಈಗ ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿದೆ.

ಈ ಘಟನೆ ನಡೆದ ನಂತರ ಕುಲದೀಪ್‌ ಮತ್ತು ವಿಜಯ್‌ಪಾಲ್‌ರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಕುಲದೀಪ್‌ ಆಸ್ಪತ್ರೆ ತಲುಪುವುದರೊಳಗೆ ಕೊನೆಯುಸಿರೆಳೆದಿದ್ದಾನೆ. ವಿಜಯ್‌ಪಾಲ್‌ಗೆ ಕೂಡ ಗಂಭೀರ ಗಾಯಗಳು ಉಂಟಾಗಿವೆ. ಅದಲ್ಲದೆ ಬಸ್ಸಿನಲ್ಲಿ ಮೂರು ಮಂದಿಗೆ ಸಣ್ಣ ಪುಟ್ಟ ಗಾಯಗಳಾಗಿರುವುದಾಗಿ ವರದಿಯಾಗಿದೆ.

ಇದನ್ನೂ ಓದಿ: Crime News: ಬೆಲೆಯೇರಿಕೆ ಎಫೆಕ್ಟ್:‌ ಟೊಮೆಟೊ ಆಯ್ತು; ಈಗ ಶುಂಠಿ, ಹೂಕೋಸು ಕಳವು!
ಕಿಡಿಗೇಡಿಗಳು ಆಕ್ರಮಣ ಮಾಡಿದ ನಂತರ ಅಲ್ಲಿದ್ದ ಪೊಲೀಸರು ಅವರನ್ನು ಹಿಡಿಯಲು ಬೆನ್ನಟ್ಟಿದ್ದರು. ಆದರೆ ಕಣ್ಣಿಗೆ ಖಾರದ ಪುಡಿ ಹಾಕಲಾಗಿತ್ತಾದರಿಂದ ಓಡಲು ಕಷ್ಟವಾಯಿತು. ಒಟ್ಟು 8 ಆರೋಪಿಗಳಲ್ಲಿ 6 ಮಂದಿಯನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಇನ್ನುಳಿದ ಇಬ್ಬರಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ವರದಿಯಾಗಿದೆ.

ಈ ವಿಚಾರದಲ್ಲಿ ಮೃತ ಆರೋಪಿ ಕುಲದೀಪ್‌ ಅವರ ಕುಟುಂಬವು ಎಸ್‌ಪಿ ಕಚೇರಿಯ ಎದುರು ಪ್ರತಿಭಟನೆ ನಡೆಸಿದೆ. ಉಳಿದಿರುವ ಶಂಕಿತರನ್ನು ಕೂಡಲೇ ಬಂಧಿಸಬೇಕು ಎಂದು ಕುಟುಂಬ ಒತ್ತಾಯಿಸಿದೆ. ಹಾಗೆಯೇ ಪ್ರಸ್ತುತ ಜೈಪುರ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ಕುಲದೀಪ್‌ ತಂದೆ ಕುಮಾರ್‌ಜಿತ್‌ ಮತ್ತು ವಿಜಯಪಾಲ್‌ರನ್ನು ಭರತ್‌ಪುರದ ಜೈಲಿಗೆ ವರ್ಗಾಯಿಸಬೇಕು ಎಂದೂ ಕುಟುಂಬ ಒತ್ತಾಯಿಸಿದೆ.

Exit mobile version