ಪಾಟ್ನಾ: ಪರೀಕ್ಷೆ ಬರೆಯುತ್ತಿದ್ದ ಅಕ್ಕನಿಗೆ ಕಾಪಿಚೀಟಿ ಕೊಟ್ಟ ಬಾಲಕ, ಆಕೆಯ ಸಹಪಾಠಿಯೊಬ್ಬಳ ಮನೆಯವರಿಂದ ಬರ್ಬರವಾಗಿ ಹತ್ಯೆಗೀಡಾದ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ. ಆತನ ಶವ ರೈಲ್ವೆ ಹಳಿಯ ಮೇಲೆ ಪತ್ತೆಯಾಗಿದೆ. ಒಂದು ಸಣ್ಣ ತಪ್ಪು ತಿಳಿವಳಿಕೆಯಿಂದ 12 ವರ್ಷದ ಬಾಲಕನ ಜೀವ ಹೋಗಿದೆ.
ಬಿಹಾರದಲ್ಲಿ ವಿದ್ಯಾರ್ಥಿಗಳಿಗೆ ಮಧ್ಯ ವಾರ್ಷಿಕ ಪರೀಕ್ಷೆಗಳು ನಡೆಯುತ್ತಿವೆ. ಈ ಹುಡುಗನ ಸಹೋದರಿಗೆ ಕೂಡ ಪರೀಕ್ಷೆ ಇತ್ತು. ಆಕೆಗೆ ಸಹಾಯವಾಗಲಿ ಎಂದು ಇವನು ಕಿಟಕಿ ಮೂಲಕ ಅವಳಿಗೆ ಕಾಪಿಚೀಟಿ ಎಸೆದಿದ್ದ. ಆದರೆ ಅದು ತಪ್ಪಾಗಿ ಹೋಗಿ ಇನ್ನೊಂದು ಹುಡುಗಿಯ ಬಳಿ ಬಿದ್ದಿತ್ತು. ಆಕೆ ಅದನ್ನು ನೋಡಿ ಲವ್ ಲೆಟರ್ (ಪ್ರೇಮಪತ್ರ) ಎಂದು ಭಾವಿಸಿದಳು. ಅದನ್ನು ಎತ್ತಿ ನೋಡಲೂ ಇಲ್ಲ. ಬದಲಿಗೆ ಮನೆಗೆ ಹೋಗಿ ಈ ಹುಡುಗನ ಮೇಲೆ ಕಂಪ್ಲೇಂಟ್ ಮಾಡಿದ್ದಳು. ತಾನು ಪರೀಕ್ಷೆ ಬರೆಯುತ್ತಿದ್ದರೆ, ಹುಡುಗ ಲವ್ ಲೆಟರ್ ಎಸೆದ ಎಂದಿದ್ದಳು. ಅಷ್ಟಕ್ಕೇ ಕ್ರೋಧಗೊಂಡ ಆ ಹುಡುಗಿಯ ಮನೆಯವರು ಬಾಲಕನನ್ನು ಹಿಡಿದು, ಕತ್ತರಿಸಿ ರೈಲ್ವೆ ಹಳಿ ಮೇಲೆ ಬಿಸಾಕಿದ್ದಾರೆ. ಅದೇನು ಚೀಟಿ ಎಂದು ವಿದ್ಯಾರ್ಥಿನಿ ಎತ್ತಿ ನೋಡಿದ್ದರೆ ಸಾಕಿತ್ತು ಅಥವಾ ಮನೆಯವರು ಒಂದು ಕ್ಷಣ ವ್ಯವಧಾನದಿಂದ ವರ್ತಿಸಿದ್ದರೂ ಆಗುತ್ತಿತ್ತು. ಆದರೆ ತಾಳ್ಮೆಗೆಟ್ಟು ಮುಗ್ಧ ಬಾಲಕನ ಜೀವವನ್ನೇ ತೆಗೆದುಬಿಟ್ಟಿದ್ದರು. ಪ್ರಸ್ತುತ ಪ್ರಕರಣದ ಸಂಬಂಧ ಪೊಲೀಸರು 9 ಜನರನ್ನು ಬಂಧಿಸಿದ್ದಾರೆ.
ಬಾಲಕನ ಹೆಸರು ದಯಾ ಕುಮಾರ್ ಎಂದಾಗಿದ್ದು, 5ನೇ ತರಗತಿಯಲ್ಲಿ ಓದುತ್ತಿದ್ದ. ಆತನ ಅಕ್ಕ 6ನೇ ಕ್ಲಾಸ್. ಇವರಿಬ್ಬರೂ ಬೇರೆಬೇರೆ ಶಾಲೆಯಲ್ಲಿ ಓದುತ್ತಿದ್ದರು. ಹುಡುಗ ತನ್ನ ಪರೀಕ್ಷೆ ಮುಗಿಸಿ, ಅಕ್ಕನ ಶಾಲೆಗೆ ಬಂದು ಆಕೆಗಾಗಿ ಕಾಪಿಚೀಟಿ ಎಸೆದಿದ್ದ. ಅದೇ ಕಾಪಿಚೀಟಿಯೇ ಅವನ ಪ್ರಾಣಕ್ಕೆ ಕುತ್ತಾಯಿತು. ತನ್ನ ಕಾಲಬುಡದಲ್ಲಿ ಬಿದ್ದಿದ್ದು ಲವ್ಲೆಟರ್ ಎಂದು ಭಾವಿಸಿದ ಹುಡುಗಿ ಈ ಬಗ್ಗೆ ತನ್ನ ಸಹೋದರರಿಗೆ ಹೇಳಿದ್ದಳು. ಅವರೆಲ್ಲ ಸೇರಿ ಈತನನ್ನು ಅಪಹರಣ ಮಾಡಿ ಕೊಂದಿದ್ದಾರೆ. ಈಗ ಬಂಧಿಸಲ್ಪಟ್ಟಿರುವ 9ಜನರಲ್ಲಿ ನಾಲ್ವರು ಅಪ್ರಾಪ್ತ ಬಾಲಕರೇ ಆಗಿದ್ದಾರೆ.
ಇದನ್ನೂ ಓದಿ: ಜಪಾನ್‌ನಲ್ಲಿ ವರ್ಷಕ್ಕೊಂದು Gun ವಿತರಣೆಯಾದರೆ ದೊಡ್ಡ ವಿಷಯ! ಹೀಗಿರುವಾಗ…