Site icon Vistara News

Telangana | ಭಿಕ್ಷುಕನಿಗೆ 50 ಲಕ್ಷ ರೂ. ವಿಮೆ ಮಾಡಿಸಿ, ಬರ್ಬರ ಹತ್ಯೆಗೆ ಪೊಲೀಸ್‌ ಪೇದೆಯನ್ನೇ ಕಳಿಸಿದ್ದ ವಂಚಕ

warangal

ವಾರಂಗಲ್:‌ ವಂಚಕನೊಬ್ಬ ಅನಾಥ ಭಿಕ್ಷುಕನೊಬ್ಬನಿಗೆ 50 ಲಕ್ಷ ರೂ.ಗಳ ವಿಮೆ ಮಾಡಿಸಿ, ವಿಮೆಯ ಹಣವನ್ನು ದೋಚಿಕೊಳ್ಳಲು ಪೊಲೀಸ್‌ ಪೇದೆ ಮತ್ತು ಸಹಚರರ ಮೂಲಕವೇ ಭಿಕ್ಷುಕನನ್ನು ಅಪಹರಿಸಿ ಭೀಕರವಾಗಿ ಕೊಲ್ಲಿಸಿದ ಆಘಾತಕಾರಿ ಘಟನೆ ತೆಲಂಗಾಣದ (Telangana) ವಾರಂಗಲ್‌ನಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್‌ ಪೇದೆ ಸೇರಿದಂತೆ ನಾಲ್ವರನ್ನು ವಾರಂಗಲ್‌ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ವಾರಂಗಲ್‌ ಜಿಲ್ಲೆಯ ಬೋಡಾ ಶ್ರೀಕಾಂತ್‌ ಎಂದು ಗುರುತಿಸಲಾಗಿದೆ. ಇತರ ಮೂವರು ಆರೋಪಿಗಳಲ್ಲಿ ಮೋತಿಲಾಲ್‌ ಪೊಲೀಸ್‌ ಹೆಡ್‌ ಕಾನ್‌ಸ್ಟೇಬಲ್‌ ಆಗಿದ್ದಾನೆ. ಇತರು ಸತೀಶ್‌ ಮತ್ತು ಸಾಮ್ಮಣ್ಣ.

ವಂಚಕ ಶ್ರೀಕಾಂತ್‌ ಬೋಡಾ ಕಳೆದ ಡಿಸೆಂಬರ್‌ನಲ್ಲಿ ಭಿಕ್ಷುಕನನ್ನು ಕೊಂದು ವಿಮೆ ಹಣ ಪಡೆಯಲು ಸಂಚು ಹೂಡಿದ್ದ. ವಿಮೆ ಕಂಪನಿಯೊಂದರಿಂದ ಆತನ ಹೆಸರಿನಲ್ಲಿ 50 ಲಕ್ಷ ರೂ.ಗೆ ವಿಮೆ ಮಾಡಿಸಿದ್ದ. ಬಳಿಕ ಪೊಲೀಸ್‌ ಕಾನ್‌ಸ್ಟೇಬಲ್‌ ಮೋತಿಲಾಲ್‌ ಮತ್ತು ಸಹಚರರನ್ನು ಭಿಕ್ಷುಕ ಹತ್ಯೆಗೆ ನಿಯೋಜಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚಕನ ಪ್ಲಾನ್‌ ಪ್ರಕಾರ ಪೊಲೀಸ್‌ ಪೇದೆ ಮತ್ತು ಇತರರು ಭಿಕ್ಷುಕನನ್ನು ಕಾರಿನಲ್ಲಿ ಅಪಹರಿಸಿದ್ದರು. ಅತಿಯಾಗಿ ಮದ್ಯವನ್ನು ಕುಡಿಸಿದ ಬಳಿಕ ಹಾಕಿ ಸ್ಟಿಕ್‌ನಲ್ಲಿ ಹೊಡೆದು ಕೊಂದು ಹಾಕಿದ್ದರು. ಬಳಿಕ ಹೆಣವನ್ನು ರಸ್ತೆಯಲ್ಲಿಟ್ಟು ಅದರ ಮೇಲೆ ಕಾರನ್ನು ಎರಡು ಸಲ ಹರಿಸಿದ್ದರು. ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.

ಭಿಕ್ಷುಕನ ಶವದ ಮರಣೋತ್ತರ ಪರೀಕ್ಷೆಯ ವೇಳೆ ಪೊಲೀಸರಿಗೆ ಅನುಮಾನ ಉಂಟಾಗಿತ್ತು. ಸಾವಿಗೆ ಮುನ್ನ ಉಂಟಾಗಿದ್ದ ಗಾಯಗಳು ಸಂದೇಹಾಸ್ಪದವಾಗಿತ್ತು. ಈ ನಡುವೆ ಪ್ರಮುಖ ಆರೋಪಿ ಶ್ರೀಕಾಂತ್‌ ಬೋಡಾ ವಿಮೆ ಪರಿಹಾರ ಕ್ಲೇಮ್‌ ಮಾಡಿಕೊಳ್ಳಲು ವಿಮೆ ಕಂಪನಿಯನ್ನು ಸಂಪರ್ಕಿಸಿದ್ದ. ತನ್ನ ಕಾರಿನ ಚಾಲಕ ವಾಹನ ಚಲಾಯಿಸಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಆತ ಹೇಳಿದ್ದ. ಕ್ಲೇಮ್‌ ಅನ್ನು ಖಾತರಿಪಡಿಸಿಕೊಳ್ಳಲು ವಿಮೆ ಕಂಪನಿಯು ಪೊಲೀಸರನ್ನು ಸಂಪರ್ಕಿಸಿತ್ತು. ಆಗ ಪೊಲೀಸರ ಕೈಗೆ ಪಾತಕಿಗಳು ಸಿಕ್ಕಿಬಿದ್ದಿದ್ದಾರೆ.

Exit mobile version