ವಿಜಯಪುರ/ರಾಯಚೂರು/ಬೆಂಗಳೂರು: ವಿಜಯಪುರದಲ್ಲಿ ಸವಾರನೊಬ್ಬನ ಹುಚ್ಚಾಟಕ್ಕೆ ಸಹ ಸವಾರರು ಆತಂಕ ಪಡುವಂತಾಗಿತ್ತು. ಬೈಕ್ ಮೇಲೆಯೇ ನಿಂತು, ಎರಡು ಕೈ ಮೇಲೆತ್ತಿ ನಡುರಸ್ತೆಯಲ್ಲಿ ವಾಹನ ಚಲಾಯಿಸಿ ಹುಚ್ಚಾಟ (Bike Rider) ಮೆರೆದಿದ್ದಾನೆ. ವಿಜಯಪುರ ನಗರದ ಬಸ್ ನಿಲ್ದಾಣದಿಂದ ಕೋರ್ಟ್ ಮಾರ್ಗದಲ್ಲಿ ನಿನ್ನೆ ಬುಧವಾರ ರಾತ್ರಿ ಘಟನೆ ನಡೆದಿದೆ. ಬೈಕ್ ಸವಾರನ ಹುಚ್ಚಾಟ ಕಂಡು ಸ್ಥಳೀಯರು ದಂಗಾದರು. ಕುಡಿದ ಮತ್ತಿನಲ್ಲಿ ಈ ರೀತಿ ಮಾಡಿರಬಹುದೆಂದು ಶಂಕಿಸಲಾಗಿದೆ. ವಿಜಯಪುರ (Vijayapura News) ನಗರದ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಆಟೋ ಚಾಲಕನಿಂದ ಬೈಕ್ ಟ್ಯಾಕ್ಸಿ ಚಾಲಕನಿಗೆ ಹಲ್ಲೆ
ಬೆಂಗಳೂರಲ್ಲಿ ಆಟೋ ಚಾಲಕನಿಂದ ಬೈಕ್ ಟ್ಯಾಕ್ಸಿ ಚಾಲಕ ನಂದಕಿಶೋರ್ ಎಂಬಾತನ ಮೇಲೆ ಹಲ್ಲೆ (Assault Case) ನಡೆದಿದೆ. ಬೆಂಗಳೂರಿನ 80 ಫೀಟ್ ರೋಡ್ ಕೋರಮಂಗಲ ಬಳಿ ಘಟನೆ ನಡೆದಿದೆ. ಬೈಕ್ ಚಾಲಕನಿಗೆ ತಿಳಿಯದ ರೀತಿಯಲ್ಲಿ ಆಟೋ ಚಾಲಕ ಗಾಡಿಯ ಕೀ ಕದ್ದಿದ್ದ. ಈ ಸಂಬಂಧ ಮಾತಿಗೆ ಮಾತು ಬೆಳೆದಿದೆ.
ಬೈಕ್ ಟ್ಯಾಕ್ಸಿ ಎಂಬ ನೆಪದಲ್ಲಿ ಆಟೋಚಾಲಕ ಮೊಬೈಲ್ ಕಿತ್ತು ಹಲ್ಲೆ ನಡೆಸಿದ್ದಾನೆ. ಈಗಾಗಲೆ ಹೈಕೋರ್ಟ್ ಕೂಡ ಬೈಕ್ ಟ್ಯಾಕ್ಸಿ ಚಾಲಕರ ಮೇಲೆ ಹಲ್ಲೆ ನಡೆಸದಂತೆ ನಿರ್ದೇಶನ ನೀಡಿದೆ. ಆದರೂ ಆಟೋ ಹಾಗು ಬೈಕ್ ಟ್ಯಾಕ್ಸಿ ಚಾಲಕರ ನಡುವೆ ಜಟಾಪಟಿ ಮುಂದುವರಿದೆ. ಘಟನೆ ಬಗ್ಗೆ ಮೊಬೈಲ್ ರೆಕಾರ್ಡ್ ಮಾಡಿ ಬೈಕ್ ಟ್ಯಾಕ್ಸಿ ಚಾಲಕ ದೂರು ನೀಡಿದ್ದಾರೆ.
ಕಾಲರ್ ಪಟ್ಟಿ ಹಿಡಿದು ಜಾಡಿಸಿ ಒದ್ದ ಯುವತಿ
ರಾಯಚೂರು ನಗರದ ಲೋಕಾಯುಕ್ತ ಪೊಲೀಸ್ ಠಾಣೆ ಎದುರಿಗೆ ಯುವಕ ಯುವತಿ ಹೊಡೆದಾಡಿಕೊಂಡಿದ್ದಾರೆ. ಯುವಕನ ಕಾಲರ್ ಪಟ್ಟಿ ಹಿಡಿದ ಯುವತಿ ಜಾಡಿಸಿ ಒದ್ದಿದ್ದಾಳೆ. ಬಳಿಕ ಜಗಳವಾಡುತ್ತಾ ಲೋಕಾಯುಕ್ತ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಈ ವೇಳೆ ಪೊಲೀಸರು ಇಬ್ಬರನ್ನು ಬೈದು ಠಾಣೆಯಿಂದ ಕಳುಹಿಸಿದ್ದಾರೆ. ಇತ್ತ ಇವರಿಬ್ಬರ ಪರಸ್ಪರ ಹೊಡೆದಾಟ ದೃಶ್ಯವನ್ನು ಸಾರ್ವಜನಿಕರು ನೋಡುತ್ತಾ ನಿಂತಿದ್ದರು. ಸದ್ಯ ಇವರಿಬ್ಬರ ಗಲಾಟೆಗೆ ಏನು ಕಾರಣ ಎಂಬುದು ತಿಳಿದು ಬಂದಿಲ್ಲ. ಪಶ್ಚಿಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Food Poisoning : ಇಲಿ ಬಿದ್ದ ಪಲ್ಯ ಸೇವಿಸಿದ ಎಸ್ ವ್ಯಾಸ ಕಾಲೇಜು ವಿದ್ಯಾರ್ಥಿಗಳಿಗೆ ವಾಂತಿ
ಚಲಿಸುತ್ತಿದ್ದ ಕ್ರೇನ್ ಮೇಲೆ ಬಿದ್ದ ಮರ
ಉಡುಪಿಯ ಬ್ರಹ್ಮಾವರ ತಾಲೂಕು ಬೆಣ್ಣೆಕುದ್ರು ಬಾರ್ಕೂರು ಪಾಂಡೇಶ್ವರ ರಸ್ತೆಯಲ್ಲಿ ಚಲಿಸುತ್ತಿದ್ದ ಕ್ರೇನ್ ಮೇಲೆ ಬೃಹತ್ ಗಾತ್ರದ ಮರವೊಂದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕ್ರೇನ್ ಹಾಗೂ ವಿದ್ಯುತ್ ಕಂಬ ಜಖಂಗೊಂಡಿತ್ತು. ಬೆಣ್ಣೆ ಕುದ್ರುವಿನಲ್ಲಿ ನಡೆಯುತ್ತಿರುವ ಕಾಮಗಾರಿ ಮುಗಿಸಿ ಬರುತ್ತಿದ್ದಾಗ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಸುಮಾರು 2 ಗಂಟೆಗಳ ಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಮೆಸ್ಕಾಂ ಸಿಬ್ಬಂದಿ ಮತ್ತು ಸಾರ್ವಜನಿಕರ ನೆರವಿನಿಂದ ಮರ ತೆರವು ಕಾರ್ಯ ನಡೆಯಿತು.
ಬಿಯರ್ ತುಂಬಿದ ಲಾರಿ ಪಲ್ಟಿ; ಎಣ್ಣೆಗಾಗಿ ಮುಗಿಬಿದ್ದ ಜನ
ರಾಯಚೂರು ತಾಲೂಕಿನ ಹೆಗ್ಗಸನಹಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಿಯರ್ ತುಂಬಿದ್ದ ಲಾರಿಯು ಪಲ್ಟಿಯಾಗಿದೆ. ವಾಹನ ಪಲ್ಟಿಯಾಗುತ್ತಿದ್ದಂತೆ ಬಿಯರ್ ಬಾಟಲ್ ರಸ್ತೆ ಮಧ್ಯೆ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಇದನ್ನು ಕಂಡ ಬಿಯರ್ ಪ್ರಿಯರು ಬಾಟಟ್‌ಗಾಗಿ ಮುಗಿ ಬಿದ್ದರು. ಬಿಯರ್ ಡಬ್ಬಿಗೆ ಒಮ್ಮೆಲೆ ಜನ ಮುಗಿ ಬಿದ್ದ ಕಾರಣ ಕೆಲಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು. ಟ್ರಾಫಿಕ್ ಜಾಂನಿಂದ ವಾಹನ ಸವಾರರು ಹೈರಾಣಾದರು. ರಾಯಚೂರು ಗ್ರಾಮಾಂತರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ