Site icon Vistara News

Soumya Vishwanathan: ಒಂದು ಟ್ಯಾಟೂ ಪತ್ರಕರ್ತೆ ಕೊಲೆಯ ಕೇಸ್‌ ಭೇದಿಸಿತು; ಸಿನಿಮೀಯ ಕತೆ ಇದು!

Sowmya Vishwanathan

4 Killers Of Journalist Soumya Vishwanathan Sentenced To Life‌

ನವದೆಹಲಿ: 2008ರಲ್ಲಿ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಕೊಲೆ ಪ್ರಕರಣದ (Soumya Vishwanathan) ಐವರು ಆರೋಪಿಗಳು ದೋಷಿಗಳೆಂದು (5 accused convicted) ದೆಹಲಿ ನ್ಯಾಯಾಲಯವು (Delhi Court) ತೀರ್ಪು ನೀಡಿದೆ. ರವಿ ಕಪೂರ್, ಅಮಿತ್ ಶುಕ್ಲಾ, ಬಲ್ಜಿತ್ ಮಲ್ಲಿಕ್ ಮತ್ತು ಅಕ್ಷಯ್ ಕುಮಾರ್ ಅವರನ್ನು ಕೊಲೆ ಮತ್ತು ದರೋಡೆ ದೋಷಿಗಳೆಂದು ಪರಿಗಣಿಸಿರುವ ನ್ಯಾಯಾಲಯವು, ಐದನೇ ಆರೋಪಿ ಅಜಯ್‌ ಸೇಥಿ ಉಳಿದವರಿಗೆ ಸಹಾಯ ಮಾಡಿದ ಅಪರಾಧ ಮಾಡಿದ್ದಾರೆಂದು ಹೇಳಿದೆ. ಇನ್ನು ಪ್ರಕರಣವನ್ನು ಭೇದಿಸಿದ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಒಂದು ಟ್ಯಾಟೂ ಹಾಗೂ ಪೊಲೀಸರಿಂದ ಕದ್ದ ವೈರ್‌ಲೆಸ್‌ ಸೆಟ್‌ನಿಂದಾಗಿ ಪ್ರಕರಣ ಭೇದಿಸಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.

“ಐಟಿ ಉದ್ಯೋಗಿ ಜಿಗಿಶಾ ಜೋಶ್‌ ಅವರನ್ನು 2009ರಲ್ಲಿ ಕೊಲೆ ಮಾಡಿದ್ದು, ಇವರ ಕೊಲೆ ಪ್ರಕರಣದ ತನಿಖೆ ನಡೆಸುವಾಗ ನಮಗೆ ಸೌಮ್ಯಾ ವಿಶ್ವನಾಥನ್‌ ಅವರ ಕೊಲೆ ಪ್ರಕರಣವನ್ನೂ ಭೇದಿಸಲು ಸಾಧ್ಯವಾಯಿತು. ಜಿಗಿಶಾ ಅವರ ಶವವು ಫರೀದಾಬಾದ್‌ನ ಸೂರಜ್‌ ಕುಂಡ್‌ ಪ್ರದೇಶದಲ್ಲಿ ಸಿಕ್ಕ ಮೂರು ದಿನಗಳ ಬಳಿಕ ಪ್ರಕರಣವನ್ನು ಭೇದಿಸಲಾಯಿತು. ಸಿಸಿಟಿವಿ ದೃಶ್ಯಾವಳಿಯೊಂದು ನಮಗೆ ಸಿಕ್ಕಿತು. ಅದರಲ್ಲಿ ಒಬ್ಬ ಆರೋಪಿಯು ತನ್ನ ಕೈ ಮೇಲೆ ತನ್ನ ಹೆಸರಿನ ಟ್ಯಾಟೂ ಹಾಕಿಸಿಕೊಂಡಿದ್ದು, ಮತ್ತೊಬ್ಬನು ಪೊಲೀಸರಿಂದ ಕದ್ದ ವೈರ್‌ಲೆಸ್‌ ಸೆಟ್‌ ಹಿಡಿದುಕೊಂಡಿದ್ದ. ಒಬ್ಬ ಆರೋಪಿಯು ಟ್ಯಾಟೂ ಹಾಕಿಸಿಕೊಂಡು, ಜಿಗಿಶಾ ಡೆಬಿಟ್‌ ಕಾರ್ಡ್‌ ಬಳಸುತ್ತಿದ್ದ ದೃಶ್ಯದ ಆಧಾರದ ಮೇಲೆ ತನಿಖೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್‌ ಕೊಲೆಯನ್ನೂ ಇವರೇ ಮಾಡಿದ್ದು ಎಂಬುದು ಗೊತ್ತಾಯಿತು” ಎಂದು ತನಿಖಾಧಿಕಾರಿ ಅತುಲ್‌ ಕುಮಾರ್‌ ವರ್ಮಾ ತಿಳಿಸಿದ್ದಾರೆ.

ಸೌಮ್ಯಾ ಪೋಷಕರು

“ಬಲ್ಜಿತ್ ಮಲ್ಲಿಕ್ ತನ್ನ ಹೆಸರನ್ನು ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದ. ಕೂಡಲೇ ಪೊಲೀಸರು ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಸೌಮ್ಯಾ ವಿಶ್ವನಾಥನ್‌ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ. ಇದಾದ ಬಳಿಕ ಮತ್ತೊಂದು ಪೊಲೀಸ್‌ ತಂಡವನ್ನು ತನಿಖೆಗೆ ರಚಿಸಲಾಯಿತು. ಐವರೂ ದೋಷಿಗಳು ಸೌಮ್ಯಾ ವಿಶ್ವನಾಥನ್‌ ಅವರ ಕಾರನ್ನು ಹಿಂಬಾಲಿಸಿ, ಕೊಲೆ ಮಾಡಿದ್ದರು. ಈ ಕುರಿತು ಫೊರೆನ್ಸಿಕ್‌ ಸಾಕ್ಷ್ಯಗಳನ್ನು ಪತ್ತೆಹಚ್ಚುವುದು ನಮಗೆ ನಿಜವಾಗಿಯೂ ಸವಾಲಾಯಿತು. ಆದರೂ ಪ್ರಕರಣವನ್ನು ಭೇದಿಸಿದೆವು” ಎಂದಿದ್ದಾರೆ.

ಇದನ್ನೂ ಓದಿ: Journalist Murder Case: ಪತ್ರಕರ್ತೆ ಸೌಮ್ಯ ವಿಶ್ವನಾಥ್ ಕೊಲೆ ಪ್ರಕರಣದ ಐವರು ಆರೋಪಿಗಳು ದೋಷಿ

ಹೆಡ್‌ಲೈನ್ಸ್ ಟುಡೆಯ 25 ವರ್ಷದ ಪತ್ರಕರ್ತೆ ಸೌಮ್ಯಾ, 2008ರ ಸೆಪ್ಟೆಂಬರ್ 30 ರಂದು ದೆಹಲಿಯ ವಸಂತ ವಿಹಾರ್‌ನಲ್ಲಿ ಕೆಲಸದಿಂದ ಹಿಂತಿರುಗುತ್ತಿದ್ದಾಗ ಹತ್ಯೆಗೀಡಾಗಿದ್ದರು. ಕಾರಿನಲ್ಲಿ ಆಕೆಯ ಶವ ಪತ್ತೆಯಾಗಿತ್ತು ಮತ್ತು ತಲೆಗೆ ತೀವ್ರ ಗಾಯವಾಗಿತ್ತು. ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೌಮ್ಯಾ ಅವರ ತಾಯಿ, ನಾವು ನಮ್ಮ ಮಗಳನ್ನು ಕಳೆದುಕೊಂಡಿದ್ದೇವೆ, ಆದರೆ ಈ ತೀರ್ಪು ಇತರರಿಗೆ ಎಚ್ಚರಿಕೆಯಾಗಲಿದೆ. ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಬೇಕು ಎಂದು ಬಯಸುತ್ತಿದ್ದೇವೆ ಎಂದು ಹೇಳಿದರು.

Exit mobile version