Site icon Vistara News

ಸಾರ್ವಜನಿಕ ಸ್ಥಳದಲ್ಲಿ ಬೆತ್ತಲೆಯಾಗಿ ಸ್ನಾನ ಮಾಡುವಂತೆ ಪತ್ನಿಗೆ ಪೀಡಿಸುವ ಪತಿ; ಮಂತ್ರವಾದಿಯೇ ಸೂತ್ರಧಾರ

Black Magic

ಪುಣೆ: ಮೊದಲಿನ ಕಾಲದಲ್ಲಿ ಗಂಡು ಮಗುವೇ ಬೇಕೆಂಬ ಹೆಬ್ಬಯಕೆ, ಅದಕ್ಕಾಗಿ ಮಾಡುವ ಕಸರತ್ತು, ಮೌಢ್ಯಾಚರಣೆಗಳೆಲ್ಲ ಸಾಕಷ್ಟಿದ್ದವು. ಗಂಡುಮಗು ಹೆರದ ಮಹಿಳೆಯರಿಗೆ ದೌರ್ಜನ್ಯ ಎಸಗುವ ಪರಿಪಾಠವೂ ಇತ್ತು. ಆಗಿನ ಕಾಲಕ್ಕೆ ಹೋಲಿಸಿದರೆ, ಈಗ ಆ ಮೌಢ್ಯಾಚರಣೆ ಅಷ್ಟೊಂದು ಪ್ರಮಾಣದಲ್ಲಿ ಇಲ್ಲದೆ ಇದ್ದರೂ ಪೂರ್ತಿಯಾಗಿ ಮರೆಯಾಗಿಲ್ಲ. ಆ ಮೂಢನಂಬಿಕೆ ಹೆಸರಲ್ಲಿ ಮಹಿಳೆಯರನ್ನು ಶೋಷಣೆ ಮಾಡುವುದೂ ನಿಂತಿಲ್ಲ. ಅದಕ್ಕೊಂದು ಉದಾಹರಣೆಯಂತೆ ಈಗೊಂದು ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಪುಣೆಯ 30ವರ್ಷದ ಮಹಿಳೆಯೊಬ್ಬರು ತನ್ನ ಪತಿ ಮತ್ತು ಆತನ ಮನೆಯವರು ಹಾಗೂ ಒಬ್ಬ ಮಂತ್ರವಾದಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ‘ನನಗೆ 2013ರಲ್ಲಿ ವಿವಾಹವಾಯಿತು. ನನ್ನ ಪತಿ ಉದ್ಯಮಿ. ಮದುವೆಯಾದಾಗಿನಿಂದಲೂ ನನಗೆ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುತ್ತಲೇ ಇದ್ದಾರೆ. ನನಗೆ ಇದುವರೆಗೂ ಒಂದೂ ಮಕ್ಕಳಾಗಿಲ್ಲ. ಆದರೆ ಹುಟ್ಟಿದರೆ ಗಂಡು ಮಗುವೇ ಹುಟ್ಟಬೇಕು ಎಂಬ ಕಾರಣಕ್ಕೆ ಮಂತ್ರವಾದಿ ಮೌಲಾನಾ ಬಾಬಾ ಜಮಾದಾರ ಎಂಬುವನ ಮಾತು ಕೇಳಿಕೊಂಡು ನನ್ನ ಬಳಿ ಇನ್ನಿಲ್ಲದ ಆಚರಣೆಗಳನ್ನು ಮಾಡಿಸುತ್ತಿದ್ದಾರೆ. ಈಗಂತೂ ಆತ ಹೇಳಿದ್ದಾನೆ ಎನ್ನುವ ಕಾರಣಕ್ಕೆ, ರಾಯಗಡ ಜಿಲ್ಲೆಯಲ್ಲಿರುವ ಒಂದು ಜಲಪಾತದಲ್ಲಿ ಎಲ್ಲರ ಎದುರು ಬೆತ್ತಲೆ ಸ್ನಾನ ಮಾಡುವಂತೆ ನನ್ನ ಪತಿ ಮತ್ತು ಮನೆಯವರು ಪೀಡಿಸುತ್ತಿದ್ದಾರೆ’ ಎಂದು ಆಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮಂತ್ರವಾದಿ ನನ್ನ ಮನೆಯ ಪ್ರತಿಯೊಂದು ವಿಷಯದಲ್ಲೂ ಹಸ್ತಕ್ಷೇಪ ಮಾಡುತ್ತಿದ್ದಾನೆ. ಅವನ ಮಾತು ಕೇಳಿಕೊಂಡು ನನ್ನ ಗಂಡ ನನಗೆ ಹಿಂಸೆ ನೀಡುತ್ತಿದ್ದಾನೆ. ನನಗೆ ನನ್ನ ತಂದೆ-ತಾಯಿ ಕೊಟ್ಟಿದ್ದ ಸುಮಾರು 75 ಲಕ್ಷ ರೂಪಾಯಿ ಮೌಲ್ಯದ ಆಭರಣಗಳನ್ನು ಬ್ಯಾಂಕ್​​ನಲ್ಲಿಟ್ಟು ಸಾಲ ಪಡೆದಿದ್ದಾನೆ. ಆದರೆ ಈ ವೇಳೆ ನನ್ನ ಸಹಿಯನ್ನು ಆತ ಫೋರ್ಜರಿ ಮಾಡಿದ್ದಾನೆ ಎಂದು ಗಂಡನ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Viral News | 7 ವರ್ಷದಲ್ಲಿ ಮೊದಲ ಸಲ ಕಚೇರಿಗೆ 20 ನಿಮಿಷ ತಡವಾಗಿ ಹೋದ ಉದ್ಯೋಗಿಗೆ ಇದೆಂಥಾ ಶಿಕ್ಷೆ?

Exit mobile version